ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಕೊಡಮಾಡುವ 2023-24ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ವಿದ್ವಾಂಸರಾಗಿರುವ ಡಾ. ರಮಾನಂದ ಬನಾರಿ ಕಾಸರಗೋಡು, ಹಿರಿಯ ಯಕ್ಷಗಾನ ಕಲಾವಿದ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ ಉಡುಪಿ ಹಾಗೂ ತೆಂಕುತಿಟ್ಟು ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಇವರುಗಳು ಆಯ್ಕೆಯಾಗಿದ್ದಾರೆ.
‘ಯಕ್ಷಮಂಗಳ ಕೃತಿ ಪ್ರಶಸ್ತಿ’ಗೆ ಲೇಖಕ, ಪತ್ರಕರ್ತ ಶಿರಸಿಯ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು ರೂ.25,000/- ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ‘ಯಕ್ಷಮಂಗಳ ಕೃತಿ ಪ್ರಶಸ್ತಿ’ಯು ರೂ.10,000/- ನಗದು, ಪ್ರಶಸ್ತಿ ಮತ್ತು ಸ್ಮರಣಿಕೆಗಳನ್ನೊಳಗೊಂಡಿದೆ.
ಜಾನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ಪ್ರೊ. ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ಇವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯು ಈ ಹೆಸರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಜೂನ್ ತಿಂಗಳಲ್ಲಿ ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಲ್. ಧರ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಕುಲಸಚಿವರಾದ ಕೆ. ರಾಜು ಮೊಗವೀರ ಹಾಗೂ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.