ಕರ್ನಾಟಕ ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕರ್ನಾಟಕದ ತೇರಗಾಮ್ ನಲ್ಲಿ ಹುಟ್ಟಿದ ಯಶವಂತ ಹಳಿಬಂಡಿಯವರು ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಸಿದ್ಧರ ಸಾಲಿನಲ್ಲಿ ಒಬ್ಬರು. ತಂದೆ ಶ್ರೀ ಹನುಮಂತ ಹಳಿಬಂಡಿ ಹಾಗೂ ತಾಯಿ ಶ್ರೀಮತಿ ಬಸವೇಶ್ವರಿ. ಅಮ್ಮ ಹೇಳಿಕೊಳ್ಳುತ್ತಿದ್ದ ಹಾಡುಗಳನ್ನು ಕೇಳಿ ಕೇಳಿ ಎಳವೆಯಲ್ಲಿಯೇ ಯಶವಂತರ ಮನಸ್ಸಿನಲ್ಲಿ ಹಾಡುಗಾರರಾಗಬೇಕೆಂಬ ಅದಮ್ಯ ಬಯಕೆ ಉಂಟಾಯಿತು. ಬಾಳಪ್ಪ ಹುಕ್ಕೇರಿ ಅನುರಾಧಾ ಧಾರೇಶ್ವರ ಮುಂತಾದವರ ಹಾಡುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದ ಇವರು ಸುಗಮ ಸಂಗೀತದ ಕಡೆಗೆ ಮನಸೋತರು. ಬಾಲ್ಯದಲ್ಲಿ ಧಾರವಾಡ ಪರಿಸರದಲ್ಲಿ ಬಹಳ ಪ್ರಸಿದ್ಧಿ ಪಡೆದು ಪ್ರಚಲಿತದಲ್ಲಿದ್ದ ಹಿಂದೂಸ್ತಾನಿ ಸಂಗೀತದ ಕಡೆಗೆ ಆಕರ್ಷಿತರಾಗಿ ಶ್ರೀ ಲಕ್ಷ್ಮಣರಾವ್ ದೇವಾಂಗರಲ್ಲಿ ಸಂಗೀತ ಅಭ್ಯಾಸಕ್ಕೆ ಸೇರಿಕೊಂಡರು. ಕೆಲವು ವರ್ಷಗಳ ಅಭ್ಯಾಸದ ನಂತರ ಹೆಚ್ಚಿನ ಜ್ಞಾನಕ್ಕಾಗಿ ಶ್ರೀ ನಾರಾಯಣ ರಾವ್ ಮುಜುಮ್ದಾರ್ ಇವರಲ್ಲಿ ಶಿಕ್ಷಣವನ್ನು ಮುಂದುವರಿಸಿದರು ಹೀಗೆ ಬಹಳಷ್ಟು ವರ್ಷ ಹಿಂದುಸ್ತಾನಿ ಗಾಯನದ ಅಭ್ಯಾಸವನ್ನು ಮಾಡಿ, ತಮ್ಮ ಪ್ರೀತಿಯ ಹಾಡುಗಾರಿಕೆಯ ಬೇರೆ ಬೇರೆ ಪ್ರಕಾರಗಳಾದ ಹಿಂದುಸ್ತಾನಿ, ಸುಗಮ ಸಂಗೀತ, ಜಾನಪದ ಇವುಗಳನ್ನೆಲ್ಲ ಅಭ್ಯಾಸ ಮಾಡಿಕೊಂಡರು. ಧಾರವಾಡದ ಆಕಾಶವಾಣಿಯ ಮಕ್ಕಳ “ಗಿಳಿವಿಂಡು” ಕಾರ್ಯಕ್ರಮದಲ್ಲಿ ಹಾಡಿದಾಗ ಎಲ್ಲರೂ ಇವರ ಕಂಠಸಿರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮಧ್ಯೆ ಪದವಿಪೂರ್ವ ಶಿಕ್ಷಣ ದೊಂದಿಗೆ ಚಿತ್ರಕಲೆಯಲ್ಲಿಯೂ ತರಬೇತಿಯನ್ನು ಪಡೆದುಕೊಂಡಿರುವುದು ಕಲೆಯ ಬಗ್ಗೆ ಇವರಿಗಿದ್ದ ಆಸಕ್ತಿಗೆ ಸಾಕ್ಷಿಯಾಗಿದೆ.
ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸಕ್ಕೆ ಸೇರಿಕೊಂಡರು. ತಮ್ಮ ಕೆಲಸದ ಜೊತೆಗೆ ಹಾಡುವ ಕಾಯಕವನ್ನು ಬಿಡದ ಕಾರಣ ಸಂಗೀತ ಕ್ಷೇತ್ರದಲ್ಲಿ ಎಲ್ಲರೂ ಗುರುತಿಸುವಷ್ಟು ಪ್ರಸಿದ್ಧರಾಗಿದ್ದರು. ಆಕಾಶವಾಣಿಯ ಸುಗಮ ಸಂಗೀತ ವಿಭಾಗದಲ್ಲಿ ಗಾಯಕರಾಗಿ ಆಯ್ಕೆಗೊಳ್ಳುವುದರೊಂದಿಗೆ ದೂರದರ್ಶನದಲ್ಲಿಯೂ ತಮ್ಮ ಕಂಠಸಿರಿಯಿಂದ ಜನಪ್ರಿಯರಾದರು. 1971ರಲ್ಲಿ
ತಮ್ಮ 21ನೆಯ ವಯಸ್ಸಿಗೆ ಧಾರವಾಡದ ಆಕಾಶವಾಣಿಯ ಅನುಮೋದಿತ ಗಾಯಕರಾಗಿ ಆಯ್ಕೆಗೊಂಡು, ಅದೇ ಆಕಾಶವಾಣಿಯ ಸಂಗೀತ ನಿರ್ದೇಶಕರಾದ ಕೇಶವ ಗುರವ್ ಮತ್ತು ವಸಂತ ಕನಕಪುರ ಅವರಿಂದ ಸಂಗೀತದ ಬಗ್ಗೆ ಅಪಾರವಾದ ಜ್ಞಾನವನ್ನು ಪಡೆದುಕೊಂಡರು.
ಧಾರವಾಡ ಕನ್ನಡದ ಭಾಷಾ ಮಧುರತೆಯಿಂದ ಬೇಂದ್ರೆಯವರ ಗೀತೆಗಳನ್ನು ಅವರ ಎದುರೇ ಹಾಡಿ ಅವರಿಂದ ಶಭಾಷ್ ಗಿರಿಯ ಆಶೀರ್ವಾದ ಪಡೆದವರು ಹಳಿಬಂಡಿ. ಆರೋಗ್ಯ ನಿಮಿತ್ತ ಬೇಂದ್ರೆಯವರು ತಾವರೆಗೇರಿ ಆಸ್ಪತ್ರೆಯಲ್ಲಿದ್ದಾಗ ರೇಡಿಯೋದ ಮೂಲಕ ಯಶವಂತ ಹಳಿಬಂಡಿ ಅವರ ಮಧುರವಾದ ಹಾಡುಗಳನ್ನು ಕೇಳಿ, ಅವರನ್ನು ಕರೆಸಿಕೊಂಡು “ಏನ ಹಾಡಿದ್ಯೋ….. ಮುಂಜಾನಿ ಹುಚ್ಚು ಹಿಡಿಸಿದಿ ನನಗ” ಎಂದಾಗ ನಾಡಿನ ಪ್ರಸಿದ್ಧ ಕವಿ ಒಬ್ಬರಿಂದ ಪಡೆದ ಮೆಚ್ಚುಗೆಯನ್ನು ಯಾವ ಪ್ರಶಸ್ತಿಯೊಂದಿಗೂ ಹೋಲಿಸಲಸಾಧ್ಯ ಎಂದು ಸಂತೋಷಪಟ್ಟವರು. ಈ ಸಂದರ್ಭವು ಯಶವಂತ ಹಳಿಬಂಡಿಯವರು ಜೀವಮಾನವಿಡಿ ನೆನಪಿನಲ್ಲಿ ಇಟ್ಟು ಕೊಂಡಂತಹ ಅತ್ಯಂತ ಮಧುರವಾದ ನೆನಪು. ಇದೇ ಸ್ಪೂರ್ತಿಯಿಂದ ಮುಂದೆ “ಬೇಂದ್ರೆ ಕಾವ್ಯವಾಣಿ” ಎಂಬ ವಿಶೇಷ ಸಂಗೀತ ರೂಪವನ್ನು ರಚನೆ ಮಾಡಿ ದರು. ತಮ್ಮ ಜೀವಿತಕಾಲದ ಕೊನೆಯವರೆಗೂ ಬೇಂದ್ರೆಯವರಲ್ಲಿಗೆ ಹೋಗಿ, ಅವರ ಮುಂದೆ ಹಾಡಿ, ಅವರನ್ನು ಸಂತೋಷಪಡಿಸಿದ ಗಾಯಕ ಇವರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು, ನಾಡಿನ ಉದ್ದಗಲಕ್ಕೂ ಸಾವಿರಾರು ಕಾರ್ಯಕ್ರಮಗಳನ್ನು ನೀಡಿ ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣವನ್ನು ಉಣಿಸಿದ ಹೃದಯ ಶ್ರೀಮಂತರು. ಹಳಿಬಂಡಿಯವರ ನೂರಾರು ಧ್ವನಿ ಸುರುಳಿಗಳು ಪ್ರಸಿದ್ಧ ವಾಗಿವೆ. ಹಿರಿಯರು ಕಿರಿಯರೆಂಬ ಭೇದವಿಲ್ಲದ ಎಲ್ಲರೊಂದಿಗೂ ಬೆರೆಯುವ ಹಳಿಬಂಡಿಯವರು ನೂರಾರು ಸುಗಮ ಸಂಗೀತ ಕಮ್ಮಟಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಗೀತೆಗಳನ್ನು ಕಲಿಸಿ, ಅವರಿಂದಲೇ ಹಾಡಿಸಿ, ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹುಟ್ಟುವಂತೆ ಮಾಡಿ ತಾವು ಬೆಳೆದು, ಸಂಗೀತಾರ್ಥಿಗಳನ್ನು ಬೆಳೆಸಿದವರು. ಸರಳ ಸಜ್ಜನರಾದ ಇವರು ಕರ್ನಾಟಕ ಸರಕಾರ ಆಯೋಜಿಸಿದ ಕದಂಬೋತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವ, ಕಿತ್ತೂರು ಉತ್ಸವ, ಹಂಪಿ ಉತ್ಸವಗಳಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಕಾರ್ಯಕ್ರಮವನ್ನು ನೀಡಿ ಪ್ರಸಿದ್ಧರಾಗಿದ್ದಾರೆ. ಯಶವಂತ ಹಳಿಬಂಡಿಯವರು
ಗಾಯಕರಷ್ಟೇ ಅಲ್ಲದೆ ಕಟ್ಟಡಗಳ ಮಾದರಿ ರಚನೆ ಮಾಡುವ ಹವ್ಯಾಸವಿರುವ ವಾಸ್ತುಶಿಲ್ಪಿಯೂ ಹೌದು. ಇವರು ರಚಿಸಿದ ವಿನ್ಯಾಸದಲ್ಲಿಯೇ ಹಲವಾರು ಕಟ್ಟಡಗಳ ನಿರ್ಮಾಣವಾದದು ಮಾತ್ರವಲ್ಲ ಕರ್ನಾಟಕ ಪತ್ರಕರ್ತರ ಸಹಕಾರಿ ಸಂಘದ ಸುವರ್ಣ ಭವನದ ರಚನೆಯೂ ಇವರು ರಚಿಸಿದ ಕಟ್ಟಡ ಮಾದರಿಯ ಮೇಲೇ ರಚಿಸಲ್ಪಟ್ಟಿದೆ.
ಯಶವಂತ ಹಳಿಬಂಡಿಯವರ ಮಧುರ ಶಾರೀರದ ಪ್ರತಿಭೆಯನ್ನು ಗುರುತಿಸಿ ರಾಜ್ಯ ಸರ್ಕಾರ “ಕರ್ನಾಟಕ ಕಲಾ ಶ್ರೀ” ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ “ಕರ್ನಾಟಕ ಕಲಾಶ್ರೀ ಪ್ರಶಸ್ತಿ”, “ಆರ್ಯಭಟ ಪ್ರಶಸ್ತಿ”, “ಸುಗಮ ಸಂಗೀತ ಸಾರ್ವಭೌಮ”, “ಬೆಂಗಳೂರು ರತ್ನ” ಮುಂತಾದ ಬಿರುದುಗಳ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. ಹಲವಾರು ಚಲನಚಿತ್ರಗಳಿಗೂ ಹಾಡಿದ ಖ್ಯಾತಿ ಇವರದು.
25 ಮೇ1950ರಲ್ಲಿ ಜನಿಸಿದ ಯಶವಂತ ಹಳಿಬಂಡಿಯವರು ಸಂಗೀತ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಸಂಗೀತ ಕ್ಷೇತ್ರವನ್ನು ಶ್ರೀಮಂತ ಗೊಳಿಸಿ 22 ಜನವರಿ 2014ರಂದು ತಮ್ಮ 64ನೆಯ ವಯಸ್ಸಿನಲ್ಲಿ ಸಂಗೀತ ಸರಸ್ವತಿಯ ಪಾದವನ್ನು ಸೇರಿದರು.
ಅಗಲಿದ ಆತ್ಮಕ್ಕೆ ಅನಂತ ನಮನ.
- ಅಕ್ಷರೀ