ಮಂಗಳೂರು : ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು, ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ 2024-25ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ದಿನಾಂಕ 22 ಮೇ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವಿಭಜಿತ ಜಿಲ್ಲೆಯ ಖ್ಯಾತ ಹೋಟೆಲ್ ಉದ್ಯಮಿ, ಸಂಘಟಕ ಮತ್ತು ಸಮಾಜ ಸೇವಕ ಪಣಿಯೂರು ಗುತ್ತು ಕರುಣಾಕರ ಶೆಟ್ಟಿ ಇವರು 2025 ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ವೇಷಧಾರಿಯಾಗಿ, ಮೇಳದ ಸಂಚಾಲಕರಾಗಿ ಮಾಡಿದ ವಿಶೇಷ ಸಾಧನೆಯನ್ನು ಗಮನಿಸಿ ಕರುಣಾಕರ ಶೆಟ್ಟರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಅಲ್ಲದೆ ಪಂಚಾಯತ್ ಸದಸ್ಯರಾಗಿ ಮಾಡಿದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು, ಧಾರ್ಮಿಕ ಮತ್ತು ದೈವಾರಾಧನೆ ಕ್ಷೇತ್ರದ ಅವರ ವಿಶಿಷ್ಟ ಸೇವೆಯನ್ನೂ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ. ಅಶೋಕ್ ಬಿ. ಹಿಂಚಿಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಹೆಚ್.ಎಲ್.ಎನ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ಹಿರಿಯ ಚಲನಚಿತ್ರ ನಟಿಯರಾದ ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಡಾ. ಜಯಮಾಲಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಂಗೀತ ನಿರ್ದೇಶಕ ಪ್ರೇಮಕವಿ ಕೆ. ಕಲ್ಯಾಣ್ ಅತಿಥಿಗಳಾಗಿದ್ದರು. ಸ್ವಾಗತ ಸಮಿತಿಯ ಡಾ. ಕೆ.ಎನ್. ಅಡಿಗ ಅಡೂರು, ಗುರುರಾಜ್, ಡಾ. ಬಸವರಾಜು, ಎಚ್.ಎಸ್. ಹನುಮಂತ ರಾವ್, ಮಂಗಳೂರು ಪ್ರತಿನಿಧಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಸುಗ್ಗನಹಳ್ಳಿ ಷಡಕ್ಷರಿ ಹಾಗೂ ಸಾರ್ಥವಳ್ಳಿ ನಾರಾಯಣಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.