ಮಂಗಳೂರು : ಯಕ್ಷ ಪಕ್ಷದ “ಸರಯೂ ಸಪ್ತಾಹ” ಹಾಗೂ ಸರಯೂ ಇಪ್ಪತ್ತೈದರ ಪ್ರಯುಕ್ತ “ಯಕ್ಷ ರಜತ” ಎಂಬ ಸ್ಮರಣ ಸಂಚಿಕೆಯ ಲೋಕಾರ್ಪಣಾ ಸಮಾರಂಭವು ದಿನಾಂಕ 26 ಮೇ 2025ರಂದು ಮಂಗಳೂರಿನ ಕದ್ರಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ “ಯಕ್ಷಗಾನವು ಇಂದು ಹಲವು ಆಯಾಮಗಳಿಂದ ತನ್ನನ್ನು ತಾನು ತೆರೆದುಕೊಂಡು ಬೆಳೆಯುತ್ತಿದೆ. ಯಾವುದೇ ಭಾಷೆಗಳಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿದರೂ ಅದು ತನ್ನ ಮೂಲ ಸೊಗಡನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸಲ್ಪಡುತ್ತದೆ. ಸರಯೂ ತಂಡದಂತಹ ತಂಡಗಳು ಚಿಣ್ಣರನ್ನು ಈ ಕ್ಷೇತ್ರದಲ್ಲಿ ಕುಣಿಸಿ – ದಣಿಸಿ ಕಲಾವಿದರನ್ನಾಗಿಸುತ್ತಾರೆ. ಇಪ್ಪತ್ತೈದು ವರ್ಷಗಳಿಂದ ಸರಯೂ ಬೆಳೆದದ್ದನ್ನು ಯಕ್ಷ ಪ್ರಪಂಚ ಕಂಡಿದೆ. ಹರ್ಷ ತಂದಿದೆ. ಹೀಗೆಯೇ ಬೆಳೆಯುತ್ತಾ ಇರಲಿ” ಎಂದು ಆಶಿಸಿದರು. ಸರಯೂ ಇಪ್ಪತ್ತೈದರ ಪ್ರಯುಕ್ತ “ಯಕ್ಷ ರಜತ” ಎಂಬ ಸ್ಮರಣ ಸಂಚಿಕೆಯನ್ನು ಕರ್ಮಯೋಗಿ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಲೋಕಾರ್ಪಣೆಗೊಳಿಸಿದರು.
ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಸ್ತ್ರೀ ಪಾತ್ರಧಾರಿ, ಪಾವಂಜೆ ಮೇಳದ ಪ್ರಮುಖ ಕಲಾವಿದರಾದ ಅಕ್ಷಯ ಕುಮಾರ್ ಮಾರ್ನಾಡ್ ಹಾಗೂ ಕಟೀಲು ಮೇಳದ ಕಲಾವಿದ ಚಂದ್ರಶೇಖರ ಮುಂಡಾಜೆ ಇವರಿಗೆ “ಯಕ್ಷ ಸರಯೂ” ಬಿರುದಿತ್ತು ಸನ್ಮಾನಿಸಲಾಯಿತು. ಸರವು ರಮೇಶ್ ಭಟ್, ಪ್ರಭಾಕರ ರಾವ್ ಪೇಜಾವರ, ಕೂಟ ಮಹಾಜಗತ್ತು ಸಂಸ್ಥೆಯ ಮುಖ್ಯಸ್ಥೆ ಸುಧಾ ವಿ. ರಾವ್ ಹಾಗೂ ರಮ್ಯಾ ರಾಘವೇಂದ್ರ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಧಾಕರ ರಾವ್ ಪೇಜಾವರ ನಿರ್ವಹಿಸಿ, ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಪ್ರತೀಕ್ ರಾವ್ ಪ್ರಾರ್ಥಸಿ, ಅಧ್ಯಕ್ಷ ಮಧುಸೂದನ ಅಲೆವೂರಾಯ ವರ್ಕಾಡಿ ಧನ್ಯವಾದವಿತ್ತರು.