11 ಏಪ್ರಿಲ್ 2023, ಬೆಂಗಳೂರು: ದೃಶ್ಯ (ರಿ.) ಬೆಂಗಳೂರು ಪ್ರಸ್ತುತ ಪಡಿಸುವ ಟಿ.ಪಿ.ಕೈಲಾಸಂರವರ ದಾಕ್ಷಾಯಿಣಿ ಭಟ್ ಎ. ವಿನ್ಯಾಸ ಹಾಗೂ ನಿರ್ದೇಶನದ ನಾಟಕ “ಪೋಲೀ ಕಿಟ್ಟೀ” ಇದೇ ಬರುವ ದಿನಾಂಕ 13-04-2023 ಗುರುವಾರದಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ.
ನಾಟಕದ ಬಗ್ಗೆ:
ಟಿ.ಪಿ. ಕೈಲಾಸಂರವರು ತಮ್ಮ ವಿನೋದಾತ್ಮಕ ನಾಟಕಗಳಿಗೆ ಹೆಸರುವಾಸಿ. ಕಂಪನಿ ನಾಟಕಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ ವಾಸ್ತವಿಕ ನಾಟಕಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ. ಪೋಲೀ ಕಿಟ್ಟೀಯು ಈ ರೀತಿಯ ವಿನೋದಾತ್ಮಕ ವಿಡಂಬನಾ ನಾಟಕಗಳಲ್ಲಿ ಒಂದು. ನಾಟಕದ ವಸ್ತುವು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಶಿಕ್ಷಣವನ್ನು ಲೇವಡಿ ಮಾಡುತ್ತದೆ. ಜ್ಞಾನವೆಂಬುದು ಬರೀ ಪುಸ್ತಕದಲ್ಲಿ ಇರೋದಲ್ಲ, ನಮ್ಮ ಸುತ್ತಮುತ್ತಲಿನ ವಾಸ್ತವ ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕು ಅದೇ ನಿಜವಾದ ಶಿಕ್ಷಣ. ಶಿಸ್ತು ಒಳ್ಳೆಯದು, ಆದರೆ ಬಹಿರಂಗವಾದ ಹೇಳಿಕೆಗಳಿಂದ ಅದು ಬರುವುದಿಲ್ಲ, ಅದು ಅಂತರಂಗದಿಂದ ಒಡಮೂಡಬೇಕು ಎಂಬುದನ್ನು ಮನೋಜ್ಞವಾಗಿ ಈ ಪ್ರಯೋಗವು ನಮ್ಮೊಳಗಿನ ಸಾಮಾಜಿಕ ಕಳಕಳಿಯನ್ನು ಪ್ರಶ್ನಿಸುತ್ತದೆ.
ನಿರ್ದೇಶಕರ ಬಗ್ಗೆ:
2013-2014ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ ಪ್ರಶಸ್ತಿ ಪಡೆದಿರುವ ದಾಕ್ಷಾಯಣಿ ಭಟ್ ರವರು ನೀನಾಸಂನಲ್ಲಿ ಪದವಿ ಪಡೆದು, ಹಲವು ವರ್ಷಗಳಿಂದ ರಂಗಭೂಮಿಯನ್ನು ಉಸಿರಾಗಿಸಿಕೊಂಡು, ನಿರಂತರ ಹೊಸ ಪ್ರಯೋಗಕ್ಕೆ ಹಾತೊರೆಯುತ್ತಾ ರಂಗಭೂಮಿಗೆ ಒಡ್ಡಿಕೊಂಡಿದ್ದಾರೆ. ಗುಣಮುಖ, ಮಿಡ್ ಸಮ್ಮರ್ ನೈಟ್ಸ್ ಥೀಮ್ಸ್, ಸ್ವಪ್ನವಾಸವದತ್ತ, ಪೆಂಬಂಗ್ ಗೆಸ್ಟ್: ಪಂಪನಿಗೆ ಬಿದ್ದ ಕನಸುಗಳು, ಕೊಳ್ಳಿ ಆಮ್ರಪಾಲಿ, ಸ್ಮಶಾನ ಕುರುಕ್ಷೇತ್ರಂ, ಸಾಹೇಬರು ಬರುತ್ತಾರೆ, ನನಗ್ಯಾಕೋ ದೌಟು, ಹಕ್ಕಿ ಹಾಡು, ಪಂಜರ ಶಾಲೆ, ಅಜ್ಜೀ ಕಥೆ, ಧೂತ ಘಟೋತ್ಕಚ, ಗಂಧವಲ್ಲಿ, ಸಂಸಾರದಲ್ಲಿ ಸನಿದಪ ಹೀಗೆ ಹಲವಾರು ನಾಟಕಗಳನ್ನು ನಿರ್ದೇಶಿಸಿ ಯಶಸ್ವಿ ಪ್ರದರ್ಶನ ನೀಡುವುದರೊಂದಿಗೆ ರಂಗಭೂಮಿಯಲ್ಲಿ ತನ್ನದೇ ಆದ ನಿಲುವನ್ನು ಹೊಂದಿರುವರು. ಮನಸ್ಸಿಗೆ ವೇದ್ಯವಾದ ಸಂಗತಿಗಳು, ದಕ್ಕುವ ಅನುಭವಗಳ ಜೊತೆ ನಾಟಕ-ಕೃತಿಯನ್ನು ಸಂಸ್ಕೃತಿ ಮತ್ತು ಬದುಕನ್ನು ಬಿಂಬಿಸುವ ರಂಗಕೃತಿಯನ್ನಾಗಿಸುವುದು ಇವರ ವೈಶಿಷ್ಟ್ಯತೆ.
ದೃಶ್ಯ ರಂಗತಂಡ:
ಮುಖ್ಯವಾಗಿ ವಿದ್ಯಾರ್ಥಿ, ಯುವಜನರನ್ನು ಗಮನದಲ್ಲಟ್ಟುಕೊಂಡು ರೂಪಿತವಾದ ರಂಗತಂಡ ದೃಶ್ಯ. ಸ್ವಾವಲಂಬಿ ಬದುಕಿನ ಇರವು ಮತ್ತು ಅರಿವಿನ ವಿವೇಕವನ್ನು ರಂಗಭೂಮಿಯ ಲೋಕದೃಷಿಯಿಂದ ಪಡೆದುಕೊಳ್ಳುವ ಹಂಬಲದಿಂದ, ಕಳೆದ 17 ವರ್ಷಗಳಿಂದ ಈ ತಂಡ ಹಲವಾರು ರಂಗ ಚಟುವಟಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ವಿದ್ಯಾರ್ಥಿಗಳು ಹಾಗೂ ಪರಿಣಿತ ರಂಗ ನಟ, ನಟಿಯರನ್ನು ಒಟ್ಟಿಗೆ ಸೇರಿಸುತ್ತ, ಹಲವು ರಂಗಶಿಬಿರಗಳನ್ನು ನಡೆಸುತ್ತ, ಹಲವು ಪ್ರದರ್ಶನಗಳನ್ನು ಸಂಘಟಿಸುತ್ತ ಬಂದ ತಂಡವು ಇದುವರೆಗೂ 25ಕ್ಕೂ ಹೆಚ್ಚು ನಾಟಕಗಳನ್ನು ಸಿದ್ಧಪಡಿಸಿದೆ.
ಟ್ವೆಲ್ತ್ ನೈಟ್, ದೇವರ ಹೆಸರಲ್ಲಿ ಸ್ವಪ್ನವಾಸವದತ್ತ, ಮರುಗಡಲು, ಪ್ಲೌಟಸ್, ಪೇಯಿಂಗ್ ಗೆಸ್ಟ್, ವರ್ಷಗೀತೆ, ಸಮಾನತೆ, ನಾನು ಮತ್ತು ಹೆಣ್ಣು, ಪುಣ್ಯಕೋಟಿ, ಬಸ್ತಿ, ಚಾಳೇಶ, ಕೆಂಪು ಕಣಗಿಲೆ, ಕಂಬ್ಳಿ ಸೇವೆ, ಅಗ್ನಿವರ್ಣ, ರಕ್ತವರ್ಣಿ, ಅಭಿಯಾನ, ಹಾನೂಶ್ ಪ್ರತಿಜ್ಞಾ-ಯೌಗಂಧರಾಯಣ, ವಿದಿಶೇಯ ವಿದೂಷಕ, ಢಾಣಾ ಡಂಗುರ, ರಕ್ತ-ಧ್ವಜ ಇವು ತಂಡದ ಪ್ರಮುಖ ಪ್ರಯೋಗಗಳಾಗಿವೆ. ದೃಶ್ಯತಂಡವು ರಂಗಪ್ರದರ್ಶನಗಳನ್ನು ನಾಡಿನ ಎಲ್ಲಿಡೆ ಅಂತೆಯೇ ಹೊರನಾಡುಗಳಲ್ಲಿಯೂ ನೀಡುತ್ತ ಬಂದಿದೆ. ನಾಟಕ ಕಟ್ಟುವುದು ಬದುಕು ಕಟ್ಟುವ ಕಲೆಯ ಮುಂಚಾಚು ಅಂತಲೇ ಪರಿಭಾವಿಸುವ ನಾವು ಸಾಹಿತ್ಯ, ಸಂಸ್ಕೃತಿಯ ಹಲವು ಸಂಗತಿಗಳನ್ನು ರಂಗಬದುಕಿನೊಳಗೆ ಒಳಗೊಳ್ಳುತ್ತಲೇ ಬಂದಿದ್ದೇವೆ.
ನಾಟಕಕಾರರ ಬಗ್ಗೆ:
ಪ್ರಹಸನ ಪಿತಾಮಹರೆಂದೇ ಹೆಸರಾದ ‘ತ್ಯಾಗರಾಣ ಪರಮಶಿವ, ಟಿ.ಪಿ. ಕೈಲಾಸಂ ಎಂದೇ ಎಲ್ಲರಿಗೂ ಪರಿಚಿತರು. 1884 ಜುಲೈ 29ರಂದು ಮೈಸೂರಿನಲ್ಲಿ ಜನಿಸಿದ ಇವರು 1907ರಲ್ಲಿ ಬಿ.ಎ. ಮದರಾಸು ಅಧಿಪತ್ಯಕ್ಕೆ ಪ್ರಥಮ ಸ್ಥಾನ ಪಡೆದರು. 1908ರಲ್ಲಿ ಇಂಗ್ಲೆಂಡಿಗೆ ಹೋಗಿ ರಾಯಲ್ ಕಾಲೇಜ್ ಆಫ್ ಸೈನ್ಸ್, ಲಂಡನ್‌ನಲ್ಲಿ ಪದವಿ ಪಡೆದು, 1915ರಲ್ಲ ಭಾರತಕ್ಕೆ ಮರಳಿ, ಬೆಂಗಳೂರಿನಲ್ಲಿ ಸಬ್-ಅಸಿಸ್ಟೆಂಟ್ ಜಿಯೋಲಾಜಿಸ್ಟ್ ಆಗಿ ನೇಮಕಗೊಂಡು ಕೆ.ಜಿ.ಎಫ್. ಶಿವಮೊಗ್ಗಗಳಲ್ಲಿ ಕೆಲಸ ನಿರ್ವಹಿಸಿದರು. 1919ರಲ್ಲಿ ರಾಜನಾಮೆ ನೀಡಿದರು. 1945ರಲ್ಲಿ ಮದರಾಸಿನಲ್ಲಿ 29ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದರು. ಇವರು 1946 ನವೆಂಬರ್ 23ರಂದು ಮರಣ ಹೊಂದಿದರು.
ಪಾತ್ರವರ್ಗ
ಕಿಟ್ಟೀ : ನಿತೀನ್ ಕೆ. ಸಂಜೀವ್, ರಾಘು, ನಾರಾಯಣಪ್ಪ : ರೋಹಿತ್ ಗೌಡ, ಶಾಮಿ : ಕೌಸ್ತುಭ, ಅಪ್ಪೂ : ಸಚಿನ್ ನಾರಾಯಣ್, ಅಂಬು, ಮನೆಯಾತ : ಸಚಿನ್ ಎಂ., ವಾಸು : ಮೋಹಿತ್, ರಾಮು, ಕುಡುಕ, ಕಾನ್ಸಟೇಬಲ್, ಶಿಕ್ಷಕ-2: ಸಾಗರ್ ಗಿನಿಮಾವ್, ಮಗೂ : ರಕ್ಷಿತ್ ಕುಮಾರ್ ಆರ್., ಮುದುಕ, ಇನ್ಸಪೆಕ್ಟರ್, ಶಿಕ್ಷಕ-1 : ಹೇಮಂತ್ ಗೌಡ, ನಂಜೀ : ವಿದ್ಯಾ, ಸೈಟ್ ಮಾಸ್ಟರ್ : ಮುತ್ತುರಾಜ್, ಸೆಲ್ಫೀ ಮಹಿಳೆ, ಮನೆಯಾಕೆ : ಡಾ. ಪದ್ಮನಿ ಓಕ್, ಶಿಕ್ಷಕ-3 : ಸುಶಾಂತ್ ಎಮ್. ಎನ್. ಮಗೂ ತಾಯಿ : ಆಕರ್ಷ, ಚೀಫ್ ಸ್ಕೌಟ್/ ಹೈನೆಸ್ : ಅಮಿತ್ ಆರ್. ಬಿ.
ನೇಪಥ್ಯ
ಬೆಳಕು : ವಿಜಯ್ ಕುಮಾರ್ ಪಾಂಡವಪುರ, ಸಂಗೀತ ನಿರ್ವಹಣ, ಕರಪತ್ರ ವಿನ್ಯಾಸ : ಅಮಿತ್ ಆರ್. ಬಿ. ರಂಗ ಪಲಕರ, ರಂಗ ಸಜ್ಜಿಕೆ : ದೃಶ್ಯ ರಂಗತಂಡ,
ವಿನ್ಯಾಸ, ವಸ್ತ್ರ ವಿನ್ಯಾಸ ಹಾಗೂ ನಿರ್ದೇಶನ: ದಾಕ್ಷಾಯಿಣಿ ಭಟ್ ಎ. ಹಾಗೂ ಸಹಕಾರ: ಮುರುಳೀಧರ ಹೊಳ್ಳ, ದೃಶ್ಯ ರಂಗತಂಡ