ಬೆಂಗಳೂರು : ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ, ಮೈಸೂರಿನ ಡಾ. ಕೂಡ್ಲಿ ಗುರುರಾಜ ಭಾಜನರಾಗಿದ್ದಾರೆ. ಪ್ರಶಸ್ತಿಯು ರೂ.15,000/- ನಗದು ಹಾಗೂ ಫಲಕವನ್ನು ಒಳಗೊಂಡಿದ್ದು, ಜೂನ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪರವಾಗಿ ಹಿರಿಯ ಪತ್ರಕರ್ತ ಎಚ್.ಆರ್ೂ. ಶ್ರೀಶ ತಿಳಿಸಿದ್ದಾರೆ.
ಮೂಲತಃ ಮೈಸೂರಿನವರಾದ ಕೂಡ್ಲಿ ಗುರುರಾಜ, ಕಳೆದ 38 ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಪಿ.ಎಚ್.ಡಿ. ಪಡೆದು ಅಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರಾಗಿ ಮೈಸೂರಿನ ಆರತಿ ಪತ್ರಿಕೆಯಿಂದ ವೃತ್ತಿ ಆರಂಭಿಸಿ, ಮೈಸೂರು ಮಿತ್ರ, ಆಂದೋಲನ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ (ಕನ್ನಡ ಆವೃತ್ತಿ), ವಿಜಯ ನೆಕ್ಸ್ಟ್, ಉದಯವಾಣಿ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹುಬ್ಬಳ್ಳಿ, ಬೆಂಗಳೂರಿನಲ್ಲಿ ವರದಿಗಾರರಾಗಿ ಕೆಲಸ ಮಾಡಿ, ಈಗ ಮೈಸೂರಿನಲ್ಲಿ ಜನಮಿತ್ರ ಪತ್ರಿಕೆ ವಿಶೇಷ ವರದಿಗಾರರಾಗಿದ್ದಾರೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ.