ಉಡುಪಿ : ಯಕ್ಷಗಾನ ಕಲಾರಂಗದ ಸುವರ್ಣ ಸಡಗರದ ಪ್ರಯುಕ್ತ ಯಕ್ಷಗಾನ ಕಲಾವಿದರ ಸಮಾವೇಶ ಮತ್ತು ‘ಯಕ್ಷಗಾನ ಕಲಾರಂಗ ಸುವರ್ಣ ಪುರಸ್ಕಾರ’ ಪ್ರದಾನ ಸಮಾರಂಭವನ್ನು ದಿನಾಂಕ 31 ಮೇ 2025ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗಿನ ಕಾರ್ಯಕ್ರಮ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ನಡೆಯಲಿದ್ದು, ಬೆಳಗ್ಗೆ 9-00 ಗಂಟೆಗೆ ಕಲಾವಿದರಿಗೆ ಕೆ.ಎಮ್.ಸಿ. ಮಣಿಪಾಲ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ. 10-00 ಗಂಟೆಗೆ ಕರ್ಣಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉದ್ಯಮಿ ಗೋಪಾಲ ಸಿ. ಬಂಗೇರ ಉಪಸ್ಥಿತರಿರುವರು. 10-30ಕ್ಕೆ ಮಾಧವ ಮಾತೃ ಗ್ರಾಮಂ ಕೂಡಿಯಾಟ್ಟಂ ಗುರುಕುಲಂ ತ್ರಿಶೂರ್ ಅವರಿಂದ ಕೂಡಿಯಾಟ್ಟಂ “ಸೀತಾಪಹರಣಂ-ಜಟಾಯುವಧಂ’ ಪ್ರದರ್ಶನಗೊಳ್ಳಲಿದೆ. 11.30ಕ್ಕೆ ಯಕ್ಷಗಾನ ಕಲಾವಿದರಿಗೆ ‘ಕಲೆ ಪೂರ್ಣಾವಧಿ ಉದ್ಯೋಗವಾಗಿರಬೇಕೆ ? ಉಪವೃತ್ತಿಯಾಗಿರಬೇಕೆ?’ ವಿಷಯದ ಕುರಿತು ಚರ್ಚೆ ನಡೆಯಲಿದೆ.
ಅಪರಾಹ್ನ 2-30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗ ಸುವರ್ಣ ಪುರಸ್ಕಾರ ಪ್ರದಾನ ಮಾಡುವರು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಉದ್ಯಮಿ ಡಾ. ಜಿ. ಶಂಕರ್ ಅಧ್ಯಕ್ಷತೆ ವಹಿಸುವರು. ಸುವರ್ಣ ಉಡುಗೊರೆ ವಿತರಣೆಯನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ವಿತರಿಸುವರು.