ಸುರತ್ಕಲ್ : ಸುರತ್ಕಲ್ ಹಿಂದು ವಿದ್ಯಾದಾಯಿನಿ ಸಂಘದ ಆಡಳಿತಕ್ಕೆ ಒಳಪಟ್ಟ ಇಡ್ಯಾ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭ ಉತ್ಸವ, ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಸ್ವೀಕಾರ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಸಮಾರಂಭ ದಿನಾಂಕ 02 ಜೂನ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕಿ ಕಸ್ತೂರಿ ಪಿ. ಮಾತನಾಡಿ “ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಿಯೇ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮೂಡಿಸಿಕೊಳ್ಳಬೇಕು. ಬದುಕಿನ ಉನ್ನತಿಗೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ವಿದ್ಯಾ ಸಂಸ್ಥೆಗಳು ನೀಡಬೇಕು” ಎಂದರು.
ಸಮಾರಂಭವನ್ನು ಉದ್ಘಾಟಿಸಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಗೋವಿಂದದಾಸ ಕಾಲೇಜ್ ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣಮೂರ್ತಿ. ಪಿ. “ನೂರ ಒಂಬತ್ತು ವರ್ಷಗಳ ಭವ್ಯ ಪರಂಪರೆ ಹೊಂದಿರುವ ವಿದ್ಯಾದಾಯಿನಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದೆ. ಪುಸ್ತಕ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಗ್ರಂಥಾಲಯ ಮಹತ್ವದ ಪಾತ್ರ ವಹಿಸುತ್ತದೆ” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಕಲಾವಿದ ವಿನಯ ಆಚಾರ್ “ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿ ಕೊಡಲಾಗುತ್ತದೆ” ಎಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ನಮಿತಾ ಶ್ರೀನಾಥ್ ಶುಭ ಹಾರೈಸಿದರು. ರಾಮಪ್ರಸಾದ್ ಬೆಂಗಳೂರು ಇವರು ಕೊಡ ಮಾಡಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಿಕ್ಷಕ, ಶಿಕ್ಷಕಿಯರು ಮತ್ತು ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಾಂತ ಸ್ವಾಗತಿಸಿದರು.