12 ಏಪ್ರಿಲ್ 2023, ಕಿನ್ನಿಗೋಳಿ: ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕ ದಿನಾಂಕ 09-04-2023 ಭಾನುವಾರದಂದು ಏಳಿಂಜೆಯ ಶಾಂಭವಿ ನದಿ ತೀರದಲ್ಲಿ ನವಚೇತನ ಯುವಕ ಮಂಡಲ ಮತ್ತು ಏಳಿಂಜೆ ಶ್ರೀದೇವಿ ಮಹಿಳಾ ಮಂಡಲ ಸಹಯೋಗದಲ್ಲಿ ಆಯೋಜಿಸಿದ ‘ಕವಿ ಚೊಕ್ಕಾಡಿ ಜೊತೆಗಿನ ಮಾತುಕತೆ ಕಾರ್ಯಕ್ರಮ”ದಲ್ಲಿ ಚೊಕ್ಕಾಡಿಯವರು ಕಾವ್ಯಗಳ ಬಗ್ಗೆ ಮತ್ತು ತನ್ನ ಕಾವ್ಯಾನುಭವಗಳ ಬಗ್ಗೆ ಹೇಳಿಕೊಂಡರು.
ನಮ್ಮ ಕವನಗಳ ಬಗ್ಗೆ ಮಮತೆ ಇರಬಾರದು. ಕವಿತೆ ಬರೆದಾದ ಮೇಲೆ ನಮ್ಮದ್ದಲ್ಲ. ಮುನಿಸು ತರವೆ ಹಾಡು ಪ್ರೇಮ ಗೀತೆ ಅಲ್ಲ. ದಾಂಪತ್ಯ ಗೀತೆ, ಅದನ್ನು ಯಾರ ಕುರಿತಾಗಿಯೂ ಬರೆದದ್ದಲ್ಲ. ಹೆಂಡತಿಯ ಕುರಿತಾಗಿಯೂ ಅಲ್ಲ. ಆ ಹಾಡಿಗೆ ಹಕ್ಕು ಕಾಯ್ದಿಟ್ಟುಕೊಂಡಿದ್ದರೆ ಒಮ್ಮೆ ಹಾಡಿದರೆ ಒಂದು ರೂಪಾಯಿ ಎಂದು ಲೆಕ್ಕ ಹಾಕಿದರೂ ಒಂದು ಕೋಟಿ ರೂ. ಬರುತ್ತಿತ್ತೇನೋ. ಒಬ್ಬಾಕೆ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿಯೇ ಇರುತ್ತಿದ್ದರು. ಅವರಿಗೆ ಮುನಿಸು ತರವೆ ಹಾಡನ್ನು ಪ್ರತಿದಿನ ಕೇಳುವ ಆಸೆ. ಕೊನೆಯ ದಿನದವರೆಗೂ ಆ ಹಾಡನ್ನು ಕೇಳುತ್ತ ಕೇಳುತ್ತ ತೀರಿಹೋದರು. ಇಂತಹ ವಿಶಿಷ್ಟ ಅನುಭವಗಳನ್ನು ಈ ಹಾಡು ಕೊಟ್ಟಿದೆ. ಈ ಹಾಡು ಇವತ್ತು ಭಾವಗೀತೆಯಾಗಿ ಮಾತ್ರವಲ್ಲ, ಯಕ್ಷಗಾನದಲ್ಲಿ ದೈವದ ನೇಮದ ವಾದ್ಯನುಡಿಸುವಿಕೆಯಲ್ಲೂ ಸ್ಥಾನ ಪಡೆಯುವಷ್ಟು ಜನಪ್ರಿಯಗೊಂಡಿದೆ. ಹೀಗೆಂದು ನವಿರು ಹಾಸ್ಯಶೈಲಿಯಿಂದ ಹೇಳಿಕೊಂಡವರು ಖ್ಯಾತ ಕವಿ, ವಿಮರ್ಶಕ, ನಾಟಕಕಾರ, ಸಂಘಟಕ ಸುಬ್ರಾಯ ಚೊಕ್ಕಾಡಿ.
ಯಕ್ಷಗಾನ ಭಾಗವತರಾಗಿದ್ದ ತಂದೆಯವರ ಪ್ರಭಾವ ಮತ್ತು ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ ಕಾಯಕದ ಜೊತೆಗಿನ ಓದು ಇದರಿಂದಾಗಿ ಸಾಹಿತ್ಯಾಸಕ್ತಿ ಬೆಳೆದಿತ್ತು. ಕವಿ ಅಡಿಗರಿಂದ ಪ್ರಭಾವಿತನಾಗಿ ಅವರಿಗಿಂತ ಭಿನ್ನವಾದ ಸಾಹಿತ್ಯ ರಚನೆ ಮಾಡತೊಡಗಿದೆ. ಇಲ್ಲಿ ಸಾಹಿತ್ಯ ಅಥವಾ ಕಾವ್ಯವನ್ನು ಆಸ್ವಾದಿಸುವ ರೀತಿ ಹೇಗೆ ಎಂಬುದೂ ಮುಖ್ಯವಾಗುತ್ತದೆ. ಕಾವ್ಯದ ಅರ್ಥ ನಮ್ಮ ಗ್ರಹಿಕೆಯ ಆಧಾರವನ್ನು ಅವಲಂಭಿಸಿದೆ ಎಂದರು.
ಕವಿತೆ ಬರೆಯಲು ರಾಗ ಜ್ಞಾನ, ತಾಳ, ಲಯಗಳೂ ವಸ್ತು, ಭಾವದಷ್ಟೇ ಮುಖ್ಯವಾಗುತ್ತದೆ. ಮತ್ಯಾವುದೋ ಸಂದರ್ಭದಲ್ಲಿ ದುಃಖ, ಬೇಸರ, ವಿಷಾದಗಳು ಕವಿತೆ ಬರೆಯಿಸಬಹುದು. ಮೌನ ಸಾಹಿತ್ಯದ ಕಾವ್ಯದ ಮುಖ್ಯ ಗುಣ. ಕವಿ ಎಷ್ಟು ಕಡಿಮೆ ಪದಗಳನ್ನು ಬಳಸುತ್ತಾನೆ, ಎಷ್ಟು ಸೂಕ್ಷ್ಮವಾಗಿ ಹೇಳುತ್ತಾನೆ ಅದು ಮಾತ್ರ ಕವಿತೆಯಾಗುತ್ತದೆ. ಇವತ್ತು ಮೌನದ ಅಪೂರ್ವವಾದ ಅದ್ಭುತವಾದ ಶಕ್ತಿಯನ್ನು ಕಳೆದುಕೊಂಡು ಮಾತಿನ ಬೆನ್ನು ಹತ್ತಿದ್ದೇವೆ ಎಂದರು.
ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಕಾರ್ಯದರ್ಶಿ ಡಾ. ಸುಧಾರಾಣಿಯವರು ಸುಬ್ರಾಯ ಚೊಕ್ಕಾಡಿಯವರೊಂದಿಗೆ ಸಂವಾದ ನಡೆಸಿಕೊಟ್ಟರು. ಇದೇ ವೇಳೆ ಸಂಧ್ಯಾ ಪಿ. ಭಟ್, ವೈಷ್ಣವಿ ನೆಲ್ಲಿತೀರ್ಥ, ಪ್ರಕಾಶ್ ಅಚಾರ್, ಶರತ್ ಹಳೆಯಂಗಡಿ, ಸುರೇಶ್ ಕಡಂದಲೆ ಅವರು ಚೊಕ್ಕಾಡಿಯವರ ಮುನಿಸು ತರವೇ, ಹೊಸ ಯುಗಾದಿಗೆ, ನಮಿಸುವೆ ತಾಯೇ, ಮಧುರ ಭಾವಗಳೇ ಬನ್ನಿ, ಸಂಜೆಯಾ ರಾಗಕೆ, ಅಮ್ಮಾ ನಿನ್ನ ಹೆಸರಿನಲ್ಲಿ ಮೊದಲಾದ ಗೀತೆಗಳನ್ನು ಹಾಡಿ ಕವಿನಮನ ಸಲ್ಲಿಸಿದರು.
ಮೂಲ್ಕಿ ಕಸಾಪ ಘಟಕ, ಏಳಿಂಜೆ ನವಚೇತನ ಯುವಕ ಮಂಡಲ, ಶ್ರೀ ದೇವೀ ಮಹಿಳಾ ಮಂಡಳಿಗಳ ವತಿಯಿಂದ ಕವಿ ಚೊಕ್ಕಾಡಿ ಅವರನ್ನು ಸನ್ಮಾನಿಸಲಾಯಿತು. ಕಲಾವಿದೆ ಛಾಯಾ ಆರ್. ಮೂಲ್ಯ ರಚಿಸಿದ ಚೊಕ್ಕಾಡಿ ಅವರ ಕಲಾಕೃತಿಯನ್ನು ಅವರಿಗೆ ನೀಡಲಾಯಿತು. ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಜೊಸ್ಸಿ ಪಿಂಟೋ, ವೀಣಾ ಶಶಿಧರ್, ರಾಜಶೇಖರ್, ಕೃಷ್ಣರಾಜ ಭಟ್, ದೇವದಾಸ ಮಲ್ಯ, ಸ್ವರಾಜ್ ಶೆಟ್ಟಿ, ಸುಧಾಕರ ಸಾಲ್ಯಾನ್, ಯುವಕ ಮಂಡಲದ ಸುಧೀರ್ ಶೆಟ್ಟಿ, ವತ್ಸಲಾ ಯೋಗೀಶ್ ರಾವ್ ಮತ್ತಿತರರಿದ್ದರು.
ಕವಿ ಸುಬ್ರಾಯ ಚೊಕ್ಕಾಡಿಯವರ ಬಗ್ಗೆ:
ಮನಸ್ಸನ್ನು ತಟ್ಟುವ ಕವನಗಳ ಮೂಲಕ ಪ್ರಸಿದ್ಧರಾದ ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರ ಹುಟ್ಟೂರು ಸುಳ್ಯದ ಚೊಕ್ಕಾಡಿ. ಜೂನ್ 29, 1940ರಲ್ಲಿ ಜನಿಸಿದ ಇವರು ಯಕ್ಷಗಾನ ಭಾಗವತರಾದ ಗಣಪಯ್ಯ ಹಾಗೂ ಸುಬ್ಬಮ್ಮ ದಂಪತಿಯ ಸುಪುತ್ರ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷಗಳ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು.
ಚೊಕ್ಕಾಡಿಯವರು ರಚಿಸಿದ ಕವನ ಸಂಕಲನಗಳಲ್ಲಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ ಪ್ರಮುಖವಾದದ್ದು. ಅವರ ವಿಮರ್ಶೆಗಳಲ್ಲಿ ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು ಮತ್ತು ಕಾದಂಬರಿಯಾಗಿ ಸಂತೆಮನೆ ಪ್ರಸಿದ್ಧವಾಗಿವೆ. ಇತರರೊಡನೆ ಅವರ ಸಂಪಾದಿತ ಕೃತಿ : 1901ರಿಂದ 1976ರವರೆಗೆ ದಕ್ಷಿಣ ಕನ್ನಡ ಕಾವ್ಯ.
ಚೊಕ್ಲಾಡಿಯವರ ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಪ್ರಖ್ಯಾತಗೊಂಡಿವೆ.
ಚೊಕ್ಕಾಡಿಯವರು 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಖ್ಯಾತಿ ಇವರದ್ದು. ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯಕಲಾನಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿಗಳ ಗೌರವ ಪಡೆದಿದ್ದಾರೆ. ‘ಮುಕ್ತ ಹಂಸ’ ಇವರ ಹಿರಿಮೆಗೆ ಅರ್ಪಿತವಾದ ಗೌರವಗ್ರಂಥ.