ಬೆಂಗಳೂರು : ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಮತ್ತು ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಜಂಟಿಯಾಗಿ ಹಮ್ಮಿಕೊಂಡಿದ್ದ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಸಂಪಾದಿಸಿರುವ ‘ದೇವುಡು ಹೇಳಿದ ಮಕ್ಕಳ ಕಥೆಗಳು’ ಶೀರ್ಷಿಕೆಯಡಿ ಐದು ಪುಸ್ತಕಗಳ ಲೋಕರ್ಪಣಾ ಸಮಾರಂಭವು ದಿನಾಂಕ 05 ಜೂನ್ 2025ರ ಗುರುವಾರದಂದು ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿದ ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ತಮಿಳ್ ಸೆಲ್ವಿ ಮಾತನಾಡಿ ‘ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪ್ರಕಟಗೊಂಡ ಅನೇಕ ಕೃತಿಗಳನ್ನು ಓದಿದ್ದೇನೆ. ಕನ್ನಡ ಭಾಷೆಯಲ್ಲಿರುವ ಸತ್ವ ತಮಿಳು ಭಾಷೆಯಲ್ಲಿಲ್ಲ. ಕಮಲ್ ಹಾಸನ್ ಅವರು ಅವಿವೇಕಿತನದ ಹೇಳಿಕೆ ನೀಡಿದ್ದಾರೆ. ಒಂದು ಭಾಷೆ ಇನ್ನೊಂದು ಭಾಷೆಯಿಂದ ಹೇಗೆ ಹುಟ್ಟುತ್ತದೆ ಎಂಬ ಕಲ್ಪನೆಯೂ ಅವರಿಗಿಲ್ಲ. ಭಾಷೆಯ ಬಗ್ಗೆ ಸಂಶೋಧನೆ ನಡೆಸದೆ ಹೇಳಿಕೆ ನೀಡಿದ್ದಾರೆ. ಯಾರೋ ಬ್ರಿಟಿಷ್ ವಿದ್ವಾಂಸರು ಅರಿವಿಲ್ಲದೆ ಕೆಲ ತಪ್ಪುಗಳನ್ನು ಬರೆದಿದ್ದಾರೆ. ಅದನ್ನು ವಿಮರ್ಶಿಸಿಲ್ಲ. ಅದೇ ವಿದ್ವಾಂಸರು ಸಂಸ್ಕೃತದಿಂದ ತಮಿಳು ಭಾಷೆ ಹುಟ್ಟಿದೆ ಎಂದಿದ್ದಾರೆ. ಆದರೆ, ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧವಿಲ್ಲ. ಭಾಷಾ ಅಭಿಮಾನದಿಂದ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಅನುವಾದದ ಮೂಲಕ ಭಾರತೀಯ ಭಾಷೆಗಳ ಎಲ್ಲಾ ಸಾಹಿತ್ಯವನ್ನು ಓದಿಕೊಂಡಿದ್ದೇನೆ. ಪಂಪ, ರನ್ನ, ಕುಮಾರವ್ಯಾಸರು ರಚಿಸಿದ ಕಾವ್ಯಗಳನ್ನು ಆ ಭಾಷೆಯಲ್ಲಿ ನೋಡಲು ಸಾಧ್ಯವಿಲ್ಲ” ಎಂದು ಹೇಳಿದರು.\
ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ “ವಿವಿಧ ಕಾರಣಗಳಿಂದಾಗಿ ನಾನು ಏಳು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿರಲಿಲ್ಲ. ಹಿಂದೆ ಅಧ್ಯಕ್ಷರನ್ನು ಭೇಟಿ ಮಾಡಲಾದರೂ ಬರುತ್ತಿದ್ದೆ. ಈಗ ಅಧ್ಯಕ್ಷರೇ ಬಾಸ್ಗಳಾಗುತ್ತಿದ್ದಾರೆ. ಮಲ್ಲೇಪುರಂ ಅವರ ಮೇಲಿನ ಅಭಿಮಾನದಿಂದ ನಾನು ಹಾಕಿಕೊಂಡ ಲಕ್ಷ್ಮಣ ರೇಖೆಯನ್ನು ದಾಟಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಬರಬೇಕಾಯಿತು. ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದ ಮಲ್ಲೇಪುರಂ ಅವರು ಮುಂದೆ ಸಂಸ್ಕೃತ ವಿಶ್ವವಿದ್ಯಾಲದ ಕುಲಪತಿಯಾದದ್ದು ಪವಾಡದಂತೆ ಭಾಸವಾಗಲಿದೆ” ಎಂದು ಹೇಳಿದರು.
ಕವಯಿತ್ರಿ ಪ್ರತಿಭಾ ನಂದಕುಮಾರ್ “ದೇವುಡು ಹೇಳಿದ ಮಕ್ಕಳ ಕಥೆಗಳು ಬೆರಗು ಹುಟ್ಟಿಸಲಿವೆ. ಅವನ್ನು ಮಕ್ಕಳಿಗೆ ತಲುಪಿಸುವುದು ನಮ್ಮ ಕರ್ತವ್ಯ” ಎಂದರು.