ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ದಿನಾಂಕ 09 ಜೂನ್ 2025ರಂದು ಸಾಹಿತ್ಯ ಪ್ರಪಂಚದ ಅಂತರಾಷ್ಟ್ರೀಯ ಮಟ್ಟದ ‘ಬೂಕರ್ ಪ್ರಶಸ್ತಿ’ ಪುರಸ್ಕೃತರಾದ ದೀಪಾ ಭಾಸ್ತಿ ಇವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್ ಇವರು ಹೋಟೆಲ್ ರೆಡ್ಬ್ರಿಕ್ಸ್ ನ ‘ಸತ್ಕಾರ’ ಸಭಾಂಗಣದಲ್ಲಿ ಈ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದಾರೆ. ಸಾಹಿತಿಗಳು ಮತ್ತು ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿಯವರನ್ನು ಕವಿ ಮತ್ತು ಅನುವಾದಕಿ ಹಾಸನದ ಜ.ನಾ. ತೇಜಶ್ರೀ ಸನ್ಮಾನಿಸಲಿದ್ದು, ಮುಖ್ಯ ಅತಿಥಿಗಳಾಗಿ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಶಕ್ತಿ ದಿನ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷರಾದ ಪುದಿಯನೆರವನ ರೇವತಿ ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಪಾಲ್ಗೊಳ್ಳಲಿದ್ದಾರೆ.
ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಇವರ ‘ಎದೆಯ ಹಣತೆ’ ಕಥಾ ಸಂಗ್ರಹವನ್ನು ‘ಹರ್ಟ್ ಲ್ಯಾಂಪ್’ ಶೀರ್ಷಿಕೆಯಡಿ ಇಂಗ್ಲೀಷಿಗೆ ಅನುವಾದಿಸಿದ ದೀಪಾ ಭಾಸ್ತಿಯವರು ‘ಬೂಕರ್ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ. ಇವರಿಗೆ ಸಾರ್ವಜನಿಕವಾದ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಸಾಹಿತಿಗಳು, ಕವಿಗಳು, ಬರಹಗಾರರು ಸಹಕರಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ನಿರ್ದೇಶಕ ಶ್ರೀಧರ್ ಹೂವಲ್ಲಿ, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ಡಾ. ಕಾವೇರಿ ಪ್ರಕಾಶ್ ಉಪಸ್ಥಿತರಿದ್ದರು.