13 ಏಪ್ರಿಲ್ 2023, ಮಂಗಳೂರು: ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಇದರ ದಶಮಾನೋತ್ಸವ ಕಾರ್ಯಕ್ರಮವು ಏಪ್ರಿಲ್ 10ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ವಿದ್ವಾನ್ ಪಿ. ಕಮಲಾಕ್ಷ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ “ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯುತ್ತದೆ. ‘ಶಕ್ತಿ ಪೀಠ’ ನೃತ್ಯ ರೂಪಕ ನಿಜವಾಗಿಯೂ ಶಿವಶಕ್ತಿಯೇ ವೇದಿಕೆಯಲ್ಲಿ ನೆಲೆಸಿದಂತೆ ಭಾಸವಾಗುತ್ತಿತ್ತು.” ಎಂದು ಅಭಿಮಾನದ ಮಾತುಗಳನ್ನಾಡಿದರು. ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರು “ಸಂಸ್ಥೆಯು ಏಳಿಗೆಯನ್ನು ಕಾಣಲಿ” ಎಂದು ಶುಭ ಆಶೀರ್ವಚನ ನೀಡಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶ್ರೀ ದುರ್ಗಾ ಕನ್ ಸ್ಟ್ರಕ್ಷನ್ ನ ಮಾಲಕರಾದ ಶ್ರೀ ಸತೀಶ್ ಶೆಟ್ಟಿಯವರು “ಅಮೃತೇಶ್ವರ ನಾಟ್ಯಾಲಯ ಬೆಳೆದು ಬಂದ ರೀತಿ, ನೃತ್ಯ ಗುರುಗಳ ಶ್ರಮ ಹಾಗೂ ವಿದ್ಯಾರ್ಥಿಗಳ ಶ್ರದ್ಧೆ ಮತ್ತು ಭಕ್ತಿಯನ್ನು ನಾಟ್ಯಾಲಯದ ನಿರ್ದೇಶಕಿ ಮಾಡುವ ಕೆಲಸದಲ್ಲಿ ಕಾಣಬಹುದು” ಎಂದು ಕಾರ್ಯಕ್ರಮವನ್ನು ಪ್ರಶಂಶಿಸಿ, ‘ಶಕ್ತಿ ಪೀಠ’ ನೃತ್ಯ ರೂಪಕವನ್ನು ಶ್ಲಾಘಿಸಿದರು. ಗುರುಗಳಾದ ಶಾರದಾಮಣಿ ಶೇಖರ್ ಅವರು ನೃತ್ಯ ರೂಪಕವನ್ನು ನಿರ್ದೇಶಿಸಲು ಸಂಸ್ಥೆಯ ಗುರುಗಳಾದ ಚಿತ್ರಾಕ್ಷಿ ಅಜಿತ್ ಕುಮಾರ್ ರವರ ಕಠಿಣ ಪರಿಶ್ರಮ ನೃತ್ಯದಲ್ಲಿ ಎದ್ದು ಕಾಣುತ್ತಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಶಾರದಾ ನಾಟ್ಯಾಲಯದ ನಿರ್ದೇಶಕಿ ವಿದುಷಿ ಭಾರತೀ ಸುರೇಶ್ ದಶಮಾನೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತನ್ನ ಶಿಷ್ಯೆಯಾದ ಚಿತ್ರಾಕ್ಷಿ ಅಜಿತ್ ಕುಮಾರ್ ಇಲ್ಲಿಯವರೆಗೂ ಬೆಳೆದು ಬಂದ ಹಾದಿಯನ್ನು ನೆನೆಪಿಸಿಕೊಂಡು ಶುಭ ಹಾರೈಸಿದರು. ‘ಗುರು ಪರಂಪರೆ’ ಎಂಬ ಒಂದು ಕಿರು ಕಾರ್ಯಕ್ರಮದಲ್ಲಿ ಆಗಮಿಸಿದ ಹಿರಿಯ ನೃತ್ಯ ಗುರುಗಳಾದ ವಿದ್ವಾನ್ ಪಿ. ಕಮಲಾಕ್ಷ ಅಚಾರ್, ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಭಾರತೀ ಸುರೇಶ್ ಇವರನ್ನು ಗೌರವಿಸಲಾಯಿತು.
ಶ್ರೀಯುತ ಜಗನ್ನಾಥ ಶೆಟ್ಟಿ ಬಾಳ, ಶ್ರೀಯುತ ಭೋಜರಾಜ್ ವಾಮಂಜೂರು, ಶ್ರೀಯುತ ಕೆ.ಕೆ. ಪೇಜಾವರ, ಶ್ರೀಯುತ ಪ್ರಮೋದ್ ಉಳ್ಳಾಲ್, ಶ್ರೀಯುತ ಚಂದ್ರಶೇಖರ ನಾವಡ, ಶ್ರೀಯುತ ಸುಧಾಕರ್ ಪೂಂಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶ್ರೀಮತಿ ಜಯಶ್ರೀ ಕುಲಾಲ್, ಪ್ರಸ್ತಾವನೆ ಶ್ರೀಯುತ ಅಜಿತ್ ಕುಮಾರ್, ಧನ್ಯವಾದವನ್ನು ಸಂಸ್ಥೆಯ ಗುರುಗಳಾದ ವಿದುಷಿ ಚಿತ್ರಾಕ್ಷಿ ಅಜಿತ್ ಕುಮಾರ್ ನಿರ್ವಹಿಸಿದ್ದಾರೆ. ನವೀನ್ ಶೆಟ್ಟಿ ಎಡ್ಮೆಮ್ಮಾರ್ ಮತ್ತು ಜಯಶ್ರೀ ಕುಲಾಲ್ ನಿರೂಪಿಸಿದರು.
ಅಮೃತೇಶ್ವರ ನಾಟ್ಯಾಲಯದ ಬಗ್ಗೆ:
ಕಳೆದ ಹನ್ನೆರಡು ವರುಷಗಳಿಂದ ಕರ್ನಾಟಕ ಕರಾವಳಿಯ ಮಣ್ಣಿನಲ್ಲಿ ತನ್ನ ಸೃಜನಶೀಲ ಕಲಾ ಪ್ರತಿಭೆಯ ಮೂಲಕ ಭರತನಾಟ್ಯಕ್ಕೆ ಹೊಸ ರಂಗನ್ನು ನೀಡಿ, ನಿರಂತರ ಪರಿಶ್ರಮ ಹಾಗೂ ಸಾಂಸ್ಕೃತಿಕ ಚಿಂತನೆಯ ಮೂಲಕ ಹೊರ ಹೊಮ್ಮುತ್ತಿರುವ ನೃತ್ಯ ಕೇಂದ್ರ ‘ಅಮೃತೇಶ್ವರ ನಾಟ್ಯಾಲಯ’.
2012ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ನೀಡಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಗಳಲ್ಲಿ ವಿಶಿಷ್ಠ ಶ್ರೇಣಿಯೊಂದಿಗೆ ಉತ್ತೀರ್ಣರಾದಂತಹ ಶಿಷ್ಯ ಸಮೂಹವನ್ನು ಹೊಂದಿದೆ. ಸುರತ್ಕಲ್ ಹಾಗೂ ಸಸಿಹಿತ್ಲುವಿನಲ್ಲಿಯೂ ನೃತ್ಯ ಶಾಖೆಯನ್ನು ಹೊಂದಿದ್ದು, ಜಿಲ್ಲೆಯಾದ್ಯಂತ ನೃತ್ಯ ಕಾರ್ಯಕ್ರಮವನ್ನು ನೀಡುತ್ತಾ ಹಲವಾರು ಟಿ.ವಿ. ಕಾರ್ಯಕ್ರಮಗಳಲ್ಲಿ ತಮ್ಮ ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ.
ಸಂಸ್ಥೆಯ ಸ್ಥಾಪಕ ನಿರ್ದೇಶಕಿಯಾಗಿರುವ ವಿದುಷಿ ಶ್ರೀಮತಿ ಚಿತ್ರಾಕ್ಷಿ ಅಜಿತ್ ಕುಮಾರ್ ಇವರು ಹಲವಾರು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವುದಲ್ಲದೆ, ಎಂ.ಕಾಂ. ಪಧವೀಧರೆಯಾದ ಇವರಿಗೆ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವವೂ ಇದೆ.
ಸೌದಿ ಹಾಗೂ ಬಹರೈನ್ ದ್ವೀಪ ರಾಷ್ಟ್ರಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು ಅಲ್ಲಿನ ಅನಿವಾಸಿ ಭಾರತೀಯರಿಗೆ ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯದ ತರಬೇತಿಯನ್ನು ನೀಡಿರುತ್ತಾರೆ. ಬಹರೈನ್‌ನಲ್ಲಿ ಆಯೋಜಿಸಿದ ಪಟ್ಲ ಸಂಭ್ರಮದ ಮೂಲಕ ಯಕ್ಷರಂಗಕ್ಕೂ ಪಾದಾರ್ಪಣೆ ಮಾಡಿರುತ್ತಾರೆ.
ನೃತ್ಯ ಶಿಕ್ಷಕಿಯಾಗಿ ಎಳೆಯ ಪ್ರತಿಭೆಗಳ ಹೆಜ್ಜೆಗೆ ಸಂಸ್ಕಾರವನ್ನು ನೀಡುತ್ತಾ ಬಂದಿರುವ ಇವರ ಮಾರ್ಗದರ್ಶನದಲ್ಲಿ ‘ಅಮೃತೇಶ್ವರ ನಾಟ್ಯಾಲಯ’ ಇಂದು ದಶೋತ್ಸವದ ಸಂಭ್ರಮದಲ್ಲಿದೆ.