ಮಂಗಳೂರು: ಬ್ಯಾರಿ ಕಲಾರಂಗ ಮಂಗಳೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರಥಮ ಕಾರ್ಯಕ್ರಮವಾಗಿ ಸಂಘದ ಅಧ್ಯಕ್ಷ ಅಜೀಜ್ ಬೈಕಂಪಾಡಿ ವಿರಚಿತ ‘ಬ್ಯಾರಿ ಬಾಸೆ ಪಡಿಕೋರು’ ಎಂಬ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 12 ಜೂನ್ 2025ರ ಗುರುವಾರದಂದು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸಿದ ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ ಮಾತನಾಡಿ “ದ. ಕ. ಜಿಲ್ಲೆ ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಭಾಷೆ ಹೀಗೆ ವೈವಿಧ್ಯಮಯ ಭಾಷಿಗರ ಪ್ರದೇಶವಾಗಿದೆ. ‘ಬ್ಯಾರಿ ಭಾಷೆ ಪಡಿಕೋರು’ ಪುಸ್ತಕ ಭಾಷೆಯ ಬೆಳವಣಿಗೆಯ ಜತೆಗೆ ಹೊಸಬರಿಗೆ ಬ್ಯಾರಿ ಭಾಷೆಯ ಶಬ್ದಗಳನ್ನು ತಿಳಿಯಲು ಸಹಕಾರಿಯಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಮ್ಮದ್ ಬಡ್ಡೂರು ಮಾತನಾಡಿ “ಭಾಷೆಯಲ್ಲಿ ಮೇಲು, ಕೀಳು ಎಂಬುವುದಿಲ್ಲ. ಮಾತನಾಡುವವರ ಸಂಖ್ಯೆಯಲ್ಲಿ ಮಾತ್ರ ಹೆಚ್ಚು ಕಡಿಮೆ ಇದೆ. ಹೊರ ಜಿಲ್ಲೆಗಳಿಂದ ಬರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಉತ್ತಮ ಕೈಪಿಡಿಯಾಗಿದೆ” ಎಂದರು.
ಬ್ಯಾರಿ ಕಲಾರಂಗದ ಅಧ್ಯಕ್ಷರಾದ ಲೇಖಕ ಅಜೀಜ್ ಬೈಕಂಪಾಡಿ ಮಾತನಾಡಿ “ಬ್ಯಾರಿ ಭಾಷೆಯನ್ನು ಇತರ ಭಾಷಿಗರು ಸುಲಭವಾಗಿ ಕಲಿಯುವಂತಾಗಲಿ ಎನ್ನುವ ಉದ್ದೇಶದಿಂದ ವಿವಿಧ ಇಲಾಖೆ, ವಿದ್ಯಾಸಂಸ್ಥೆ ಹಾಗೂ ಗ್ರಂಥಾಲಯಗಳಿಗೆ ಈ ಪುಸ್ತಕವನ್ನು ಉಚಿತವಾಗಿ ಹಂಚಲಾಗುವುದು” ಎಂದರು.
ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ ಅವರಿಗೆ ಪುಸ್ತಕದ ಪ್ರಥಮ ಪ್ರತಿ ನೀಡಲಾಯಿತು. ಬ್ಯಾರಿ ಕಲಾರಂಗದ ಸದಸ್ಯರಾದ ಇಸ್ಮಾಯಿಲ್ ಮೂಡುಶೆಡ್ಡೆ. ಶಾಹುಲ್ ಹಮೀದ್, ಸತೀಶ್ ಸುರತ್ಕಲ್, ಡಾ. ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು.