ಉಡುಪಿ : ಬೆಂಗಳೂರಿನ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ಆಯೋಜಿಸಿದ `ರಂಗ ದಿಬ್ಬಣ- 2025 ‘ ಕಾರ್ಯಕ್ರಮವು ದಿನಾಂಕ 09 ಜೂನ್ 2025ರ ಸೋಮವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ನಾಡು, ನುಡಿ, ನೆಲ, ಜಲ, ಕಲೆ ಭಾಷೆ, ಸಂಸ್ಕೃತಿ ಹಾಗೂ ಸಮಾಜ ಸೇವೆ ಮಾಡಿದ ನಾಡಿನ ಸಾಧಕರಿಗೆ ನೀಡುವ `ಕರುನಾಡ ಸೇವಾ ಕಣ್ಮಣಿ’ ರಾಜ್ಯ ಪ್ರಶಸ್ತಿಯನ್ನು ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ, ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ, ಅಹಲ್ಯಾ ಫೌಂಡೇಶನ್ ಇದರ ಸಂಸ್ಥಾಪಕಾಧ್ಯಕ್ಷೆಯಾದ ಮಹಾಲಕ್ಷ್ಮಿ, ಸಂಸ್ಥೆಯ ಗೌರವಾಧ್ಯಕ್ಷರಾದ ಡಾ. ಕೆಂಚನೂರು ಶಂಕರ, ಮಂಗಳೂರು ಶ್ರೀಮಾತಾ ಅನ್ನಪೂರ್ಣ ಸಿಂಗ್, ಡಾ. ಮಂಜುಳಾ ಮಹಾದೇವ್, ಡಾ. ಅನು ಮೊದಲಾದವರು ಉಪಸ್ಥಿತರಿದ್ದರು.
ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಸ್ತುತ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ರಂಗಭೂಮಿ ಉಡುಪಿ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಸಂಪಾದನೆಯ ಒಂದು ಪಾಲನ್ನು ಕಲಾವಿದರ ಶ್ರೇಯಸ್ಸಿಗೆ, ಕಲಾ ಪ್ರಚಾರಕ್ಕೆ, ಕಲೆಯ ಉಳಿವಿಗೆ ವ್ಯಯಿಸುವ ಮೂಲಕ ಸಮಾಜದ ಮನ ಗೆದ್ದಿದ್ದಾರೆ. ಅವರು ನಾಡಿನ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ಅವರನ್ನು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಳಿಸಿರುವುದನ್ನು ಇಲ್ಲಿ ನೆನಪಿಸಬಹುದಾಗಿದೆ. ಜಿಲ್ಲೆಯ ಪ್ರತಿಷ್ಠಿತ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಸುಮಾರು 7 ವರ್ಷ ಕಾಲ ತುಂಬು ಚಟುವಟಿಕೆಗಳನ್ನು ನಡೆಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸುವಂತೆ ಮಾಡಿದವರು ಡಾ.ತಲ್ಲೂರು. ಕಲಾರಂಗ ಸಂಘಟಿಸುವ ವಿಧ್ಯಾಪೋಷಕ್ ಸ್ಕಾಲರ್‌ಶಿಪ್‌ನ್ನು ವಿಸ್ತರಿಸುವ ಕಾರ್ಯ ಮಾಡಿದ್ದಾರೆ. ಯಕ್ಷಗಾನದ ಪದ್ಮಶ್ರೀ ಚಿಟ್ಟಾಣಿ ಅವರ ಯಕ್ಷಗಾನ ಸಪ್ತಾಹ, ಅಷ್ಟಾಹ, ದಶಹ ಕಾರ್ಯಕ್ರಮಗಳು ಉಡುಪಿ ರಾಜಾಂಗಣದಲ್ಲಿ ಪ್ರತಿ ವರ್ಷ ಇವರ ಸಾರಥ್ಯದಲ್ಲಿಯೇ ನೆರವೇರುತ್ತಿದೆ.
ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರತಿಷ್ಠಾನದಿಂದ ಯಕ್ಷಗಾನ ಸಪ್ತಾಹ, ತೆಂಕುತಿಟ್ಟಿನ ದಶಾವತಾರಿ ಕೆ. ಗೋವಿಂದ ಭಟ್ಟರ ಯಕ್ಷ ಸಪ್ತಾಹ, ಪ್ರಸಿದ್ಧ ಅರ್ಥಧಾರಿ ಸಾಮಗ ಸಂಸ್ಮರಣೆ ಹೀಗೆ ಯಕ್ಷಗಾನದ ಪ್ರಸಿದ್ಧ ನಾಮರ ಹೆಸರಲ್ಲಿ ಯಕ್ಷಗಾನ ಕಾರ್ಯಕ್ರಮಗಳು, ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡುವ ಮೂಲಕ ಧನ್ಯತೆಯ ಭಾವ ಅನುಭವಿಸಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಗುರು ಬನ್ನಂಜೆ ಸಂಜೀವ ಸುವರ್ಣರ ಬಳಿ ಕಲಿತರು. ಶ್ರೀಕೃಷ್ಣ, ಬಲರಾಮ, ಹನುಮ, ಸಂಜಯ, ಮಗಧ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಾ ಈವರೆಗೆ 400ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಜಾನಪದ ತಂಡಗಳಿಗೆ, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ. ತನ್ನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ.
ಡಾ.ತಲ್ಲೂರು ಅವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 2022ನೇ ಸಾಲಿನ `ಗೌರವ ಡಾಕ್ಟರೇಟ್ ‘ ನೀಡಿ ಗೌರವಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತುರುವೆ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಸಾಧಕರ ರತ್ನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ ಸೇರಿದಂತೆ ನಾಡಿನ ಪ್ರತಿಷ್ಠಿತ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
Subscribe to Updates
Get the latest creative news from FooBar about art, design and business.
Previous Articleಪ್ರಸಿದ್ಧ ಚಂಡೆ ವಾದಕರಾದ ಸೂರ್ಯ ದೇವಾಡಿಗ ನಿಧನ