14 ಏಪ್ರಿಲ್ 2023, ಬೆಂಗಳೂರು: ಖ್ಯಾತ ‘ನಾಟ್ಯಸಂಕುಲ ಸ್ಕೂಲ್ ಆಫ್ ಭರತನಾಟ್ಯ’ ನೃತ್ಯಸಂಸ್ಥೆಯ ಗುರು ವಿದುಷಿ ಕೆ.ಎಸ್. ನಾಗಶ್ರೀ ಅವರಲ್ಲಿ ಸಮರ್ಥ ಗರಡಿಯಲ್ಲಿ ನಾಟ್ಯಶಿಕ್ಷಣ ಪಡೆದು, ವೇದಿಕೆಯ ಮೇಲೆ ತಾವು ಕಲಿತ ನೃತ್ಯವನ್ನು ಆತ್ಮವಿಶ್ವಾಸದಿಂದ ಒಟ್ಟಿಗೆ ಪ್ರದರ್ಶಿಸುವ ಹಂತವನ್ನು ತಲುಪಿದ್ದಾರೆ ಈ ತಾಯಿ-ಮಗಳು. ತಾಯಿ ದೀಪಾ ಮಂಜುನಾಥ್ ಮತ್ತು ಮಗಳು ಮುಕ್ತಾ ಎಂ. ಮಂಜುನಾಥ್ ಕಳೆದ ಹತ್ತು ವರ್ಷಗಳಿಂದ ಭರತನಾಟ್ಯವನ್ನು ಆಸಕ್ತಿಯಿಂದ ಕಲಿಯುತ್ತಿದ್ದು, ಅವರು ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಲು ಇದೇ ತಿಂಗಳ 16 ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾರೆ. ಅಪರೂಪದ ಈ ರಂಗಪ್ರವೇಶದಲ್ಲಿ ಅನಾವರಣಗೊಳ್ಳಲಿರುವ ತಾಯಿ-ಮಗಳ ಕಲಾಪ್ರತಿಭೆಯನ್ನು ಸಾಕ್ಷಾತ್ಕರಿಸಲು ಕಲಾರಸಿಕರೆಲ್ಲರಿಗೂ ಆದರದ ಸುಸ್ವಾಗತ.
ಸಾಮಾನ್ಯವಾಗಿ ತಾಯಿ ಮಕ್ಕಳು ನೃತ್ಯ ಕಲಿಯಲು ಒಟ್ಟಿಗೆ ಸೇರಿದ ಪ್ರಸಂಗಗಳು ಕಡಮೆ ಅಥವಾ ಇಲ್ಲವೆಂದೇ ಹೇಳಬೇಕು. ಮಗಳನ್ನು ನೃತ್ಯ ಶಾಲೆಗೆ ಕರೆದೊಯ್ಯುವ ತಾಯಂದಿರಿಗೆ, ದಿನಾ ನೃತ್ಯದ ತಾಲೀಮನ್ನು ನೋಡುತ್ತ ಅವರ ಮನದೊಳಗೆ ಅವ್ಯಕ್ತವಾಗಿ ಹುದುಗಿದ ಕಲಾಪ್ರೀತಿ, ಪುಟಿದೇಳುವುದು ಸಹಜ. ಅವ್ಯಕ್ತ ಆಕಾಂಕ್ಷೆ ಉತ್ಸಾಹದೊಡನೆ ಮಿಳಿತಗೊಂಡು ತಾಯಂದಿರೂ ಮಕ್ಕಳೊಡನೆ ನೃತ್ಯ ಕಲಿಯಲಾರಂಭಿಸಿದ ಉದಾಹರಣೆಗಳು ಹಲವಾರಿವೆ. ಅದರಂತೆ ದೀಪಾ ಕೂಡ ತಮ್ಮ 32ರ ಹರೆಯದಲ್ಲಿ ಹೆಜ್ಜೆ ಹಾಕುತ್ತ, ಗೆಜ್ಜೆ ಕಟ್ಟಿಕೊಂಡವರು. ಮುಕ್ತಾಗೆ ಆಗ 5 ವರ್ಷ.
ತಾಯಿ-ಮಗಳಿಬ್ಬರಿಗೂ ವಿವಿಧ ಕಲೆಗಳಲ್ಲಿ ಅಪಾರ ಆಸಕ್ತಿ. ಅದರಲ್ಲೂ ಭರತನಾಟ್ಯದ ಬಗ್ಗೆ ತುಸು ಹೆಚ್ಚೇ. ದೀಪಾಗೆ ಈಗ 42 ಮುಕ್ತಾಗೆ ವಯಸ್ಸು 14. ಕಲಾಕ್ಷೇತ್ರದ ನೃತ್ಯಬಾನಿಯಲ್ಲಿ ಕಲಿಸಿದ ಮೊದಲ ಗುರು ಶ್ರೀಮತಿ ಹರಿಣಿ ಪಂಗುಲೂರಿ. ನಾಟ್ಯಕ್ಕೆ ಉತ್ತಮ ತಳಹದಿ ದೊರೆಯಿತು. ಹೆಚ್ಚಿನ ಕಲಿಕೆಗೆ ಕಳೆದ 5 ವರ್ಷಗಳಿಂದ ಉತ್ಕೃಷ್ಟ ಶಿಕ್ಷಣ ನೀಡುವ ‘ನಾಟ್ಯ ಸಂಕುಲ’ದ ಬದ್ಧತೆಯ ಉತ್ತಮ ಗುರು ಕೆ.ಎಸ್.ನಾಗಶ್ರೀ ಅವರಲ್ಲಿ ಸೇರ್ಪಡೆ. ಅತ್ಯಾಸಕ್ತಿ-ಪರಿಶ್ರಮಗಳ ಫಲವಾಗಿ, ತಾಯಿ-ಮಗಳಿಬ್ಬರೂ ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ನೃತ್ಯ ಪರೀಕ್ಷೆಯಲ್ಲಿ ಅತ್ಯುಚ್ಚ ಅಂಕಗಳಿಂದ ತೇರ್ಗಡೆಯಾದ ಹೆಮ್ಮೆ ಅವರದು.
ಇಬ್ಬರೂ ಗುರು ಅಕ್ಷತಾ ಉಪಾಧ್ಯಾಯ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾರೆ. ನಾಡಿನಾದ್ಯಂತ ಈ ಉದಯೋನ್ಮುಖ ಕಲಾವಿದೆಯರು ‘ನಾಟ್ಯಸಂಕುಲ’ದ ಎಲ್ಲ ವಾರ್ಷಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಮುಕ್ತಾ ಮಠದ ಮಂಜುನಾಥ- ಬಹುಮುಖ ಪ್ರತಿಭೆಯಾದ ಇವಳು, ದಿ ಕ್ಯಾನ್ದೋರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 9ನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಶಾಲೆಯ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದು. ಹಲವಾರು ಬಾರಿ ಶಾಲೆಯ ನೃತ್ಯಗಳಿಗೆ ಸಂಯೋಜನೆ ಮಾಡಿದ್ದೂ ಉಂಟು. ಕಾನ್ಟೆಂಪೋರರಿ ಡ್ಯಾನ್ಸ್, ಸೈನ್ಸ್, ಎಕಾನಮಿಕ್ಸ್, ಹ್ಯೂಮನ್ ಸೈಕಾಲಜಿ, ಬಾಸ್ಕೆಟ್ ಬಾಲ್ ಮತ್ತು ಅಥ್ಲೆಟಿಕ್ಸ್ ಕ್ಷೇತ್ರಗಳಲ್ಲಿ ಆಸಕ್ತಿ. ವಾರ್ಷಿಕ ಕ್ರೀಡಾದಿನದಲ್ಲಿ ಬೆಸ್ಟ್ ಅಥ್ಲಿಟ್ ಪ್ರಶಸ್ತಿಯ ಜೊತೆ 5 ಸ್ವರ್ಣಪದಕ ಮತ್ತು 1 ಬೆಳ್ಳಿಪದಕ ಪಡೆದ ಅಗ್ಗಳಿಕೆ ಅವಳದು.
ದೀಪಾ ಮಂಜುನಾಥ್ – ಎಂಜಿನಿಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿಯ ಜೊತೆ ಫೈನಾನ್ಸ್ ವಿಷಯದಲ್ಲಿ ಎಂಬಿಎ ಪದವೀಧರೆಯಾದ ದೀಪಾ, ಸಾಫ್ಟ್ ವೇರ್ ಇಂಜಿನಿಯರ್ ಮತ್ತು ಬಿಸಿನೆಸ್ ಅನಾಲಿಸ್ಟ್ ಆಗಿ ವೃತ್ತಿನಿರತರಾಗಿದ್ದಾರೆ. ವೀಣಾವಾದನವನ್ನೂ ಕಲಿತಿರುವ ದೀಪಾಗೆ ಭರತನಾಟ್ಯ ಒಂದು ಆಧ್ಯಾತ್ಮ ಪ್ರಯಾಣ -ಧ್ಯಾನವಿದ್ದಂತೆ. ನ್ಯೂಟ್ರಿಷನಲ್ ಡಯಟ್ ಮತ್ತು ಯೋಗಾಭ್ಯಾಸಿ ಕೂಡ. ಪತಿ ಕಂಪ್ಯೂಟರ್ ಇಂಜಿನಿಯರ್ ಮಂಜುನಾಥ್ ಮತ್ತು ಮತ್ತೊಬ್ಬ ಮಗಳು ಚಿನ್ಮಯಿ ಕೂಡ ಇವರ ನೃತ್ಯ ಚಟುವಟಿಕೆಗಳಿಗೆ ತುಂಬು ಬೆಂಬಲಿಗರು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.