ಕಾರ್ಕಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರ ವತಿಯಿಂದ ನಡೆಯುವ ಯಕ್ಷಧ್ರುವ-ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಣ ಅಭಿಯಾನವು ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ-ನಿಂಜೂರು ಘಟಕದ ಸಹಯೋಗದಲ್ಲಿ 2025-26ನೇ ಸಾಲಿನ ಉಚಿತ ಯಕ್ಷಗಾನ ತರಬೇತಿಯು ದಿನಾಂಕ 28 ಜೂನ್ 2025ರಂದು ಪಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಪಳ್ಳಿ-ನಿಂಜೂರು ಘಟಕದ ಗೌರವಾಧ್ಯಕ್ಷರಾದ ಶ್ರೀ ಭರತ್ ಹೆಗ್ಡೆ ಪಳ್ಳಿ ಇವರು ದೀಪ ಬೆಳಗಿ ಈ ತರಬೇತಿಯನ್ನು ಉದ್ಘಾಟನೆಗೊಳಿಸಿ ಮಕ್ಕಳ ಯಕ್ಷಯಾನಕ್ಕೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ-ನಿಂಜೂರು ಘಟಕದ ಅಧ್ಯಕ್ಷರಾದ ಶ್ರೀ ಸುನಿಲ್ ಶೆಟ್ಟಿ, ಘಟಕದ ಉಪಾಧ್ಯಕ್ಷರಾದ ಶ್ರೀ ರಮಾನಂದ ಕಿಣಿ, ಘಟಕದ ಸಂಚಾಲಕರಾದ ಶ್ರೀ ಸುನಿಲ್ ಕೋಟ್ಯಾನ್, ಘಟಕದ ಕೋಶಾಧಿಕಾರಿ ಶ್ರೀ ನಿಧೀಶ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಬಂಗೇರ, ಕಲಾ ಪೋಷಕರಾದ ಶ್ರೀ ಸುರೇಶ್ ಪಾಣರ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೇಮಲತಾ ಉಪಸ್ಥಿತರಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ -ನಿಂಜೂರು ಘಟಕದ ಸಂಚಾಲಕರಾದ ಶ್ರೀ ಸುನಿಲ್ ಕೋಟ್ಯಾನ್ ಮಾತನಾಡಿ ಶಾಲಾ ಮಕ್ಕಳ ಯಕ್ಷಗಾನ ಕಲಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಈ ವರ್ಷದ ಉಚಿತ ಯಕ್ಷಗಾನ ತರಗತಿಗೆ ಶುಭ ಹಾರೈಸಿದರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಗುರುಗಳಾದ ಶ್ರೀಯುತ ಸುರೇಶ್ ಮರ್ಣೆಯವರಿಗೆ ವೀಳ್ಯ ನೀಡಿದರು. ನಂತರ ತರಗತಿಯ ಮಕ್ಕಳಿಂದ ಯಕ್ಷಗಾನ ನಾಟ್ಯ ಆರಂಭಗೊಂಡಿತು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಪ್ರೇಮಲತಾ ಸ್ವಾಗತಿಸಿ, ಸಹ ಶಿಕ್ಷಕಿ ಲಕ್ಷ್ಮೀ ಹೆಚ್. ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ಸಹ ಶಿಕ್ಷಕಿ ಶ್ರೀಮತಿ ಜುಸ್ತಿನಾ ಲುಸಿಲ್ಲಾ ಫೆರಾವೋ ವಂದಿಸಿ, ಶಿಕ್ಷಕಿ ಶ್ರೀಮತಿ ಚಿತ್ರಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.