ಕೊಯ್ಯರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಮತ್ತು ಬೆಳ್ತಂಗಡಿ ಹೋಬಳಿ ಘಟಕ ಹಾಗೂ ಕೊಯ್ಯರು ಸರ್ಕಾರಿ ಪದವಿಪೂರ್ವ ಕಾಲೇಜು- ಸಂಯುಕ್ತ ಆಶ್ರಯದಲ್ಲಿ ‘ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು’ ಉಪನ್ಯಾಸ ಮಾಲೆ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಕವಿ ಕುವೆಂಪು ಉಪನ್ಯಾಸ-1 ಕಾರ್ಯಕ್ರಮವು ಕೊಯ್ಯರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 26 ಜೂನ್ 2025ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಮೋಹನ ಗೌಡ ನೆರವೇರಿಸಿ ಎಲ್ಲಾ ಉಪನ್ಯಾಸಮಾಲೆ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉಜಿರೆ ಶ್ರೀ ಧ.ಮ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ದಿವ ಕೊಕ್ಕಡ ಮಾತನಾಡಿ “ಕುವೆಂಪು ಅವರ ಜೀವನ ಹಾಗೂ ಸಾಹಿತ್ಯ ಇಂದಿನ ಗ್ರಾಮೀಣ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ. ಜಾತಿ, ಧರ್ಮ, ಮೇಲು-ಕೀಳು ಎಂಬ ಬೇಧ-ಭಾವವಿಲ್ಲದೆ ಕುವೆಂಪು ರವರ ಆಶಯದಂತೆ ವಿಶ್ವ ಮಾನವರಾಗೋಣ” ಎಂಬುದಾಗಿ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಡಿ. ಯದುಪತಿ ಗೌಡ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿ, ಭಾಷೆ, ಸಾಂಸ್ಕೃತಿಕ ವೈವಿದ್ಯತೆಯನ್ನು ಗುರುತಿಸಿ, ಬೆಳೆಸಲು ಪ್ರೋತ್ಸಾಹಿಸುತ್ತದೆ. ರಾಷ್ಟ್ರ ಕವಿ ಕುವೆಂಪು ಅವರು ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿ ಭಾಷಾ ಪ್ರೌಡಿಮೆ ಯನ್ನು ಮೆರೆದಿದ್ದಾರೆ” ಎಂದು ಅಭಿಪ್ರಾಯ ಪಟ್ಟರು.