ಮಂಗಳೂರು : ಮಂಗಳೂರಿನ ಸ್ವರಾಲಯ ಸಾಧನಾ ಫೌಂಡೇಶನ್ ಮತ್ತು ಕಲಾ ಶಾಲೆ ವತಿಯಿಂದ 94ನೇ ಸರಣಿಯ ‘ಸ್ವರಾಲಯ ಸಾಧನಾ ಶಿಬಿರ’ವು ದಿನಾಂಕ 22 ಜೂನ್ 2025ರಂದು ಬೋಳಾರದ ಪಾಲೆಮಾರ್ ಗಾರ್ಡನ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ “ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಒತ್ತಡವನ್ನು ಅನುಭವಿಸುತ್ತಾರೆ. ಅನೇಕರಿಗೆ ಈ ಒತ್ತಡವನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆ. ಆದರೆ ಯಾವುದೇ ರೀತಿಯ ಒತ್ತಡ ಇರಲಿ, ಅದನ್ನು ನಿಯಂತ್ರಿಸಲು ಸಂಗೀತದಷ್ಟು ಅತ್ಯುತ್ತಮವಾದ ಔಷಧ ಬೇರೆ ಇಲ್ಲ. ಸಂಗೀತ ಕ್ಯಾಂಪ್ ನಡೆಸುವುದೆಂದರೆ ಆರೋಗ್ಯ ಕ್ಯಾಂಪ್ ನಡೆಸಿದಂತೆ. ಅನೇಕ ರೋಗಗಳಿಗೆ ಇದೇ ಕ್ಯಾಂಪ್ ನಲ್ಲಿ ಔಷಧ ಸಿಗುತ್ತದೆ. ಆದ್ದರಿಂದ ನಿತ್ಯ ಸಂಗೀತ ಆಲಿಸುವ ಮೂಲಕ ಆರೋಗ್ಯ ಜೀವನ ನಡೆಸಬಹುದು. ಕೇವಲ ಮನುಷ್ಯರು ಮಾತ್ರ ಸಂಗೀತ ಅಲಿಸುವುದಲ್ಲ, ಮರ ಗಿಡಗಳು ಕೂಡಾ ಸಂಗೀತವನ್ನು ಆಲಿಸುತ್ತದೆ” ಎಂದು ಹೇಳಿದರು.
ಮಂಗಳೂರು ಸ್ಟಾರ್ಟ್ ಸಿಟಿ ಜಿ.ಎಂ. ಅರುಣ್ ಪ್ರಭಾ ಮಾತನಾಡಿ, “ಸಂಗೀತ ಶಿಬಿರಗಳು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅತ್ಯುತ್ತಮ ವೇದಿಕೆ. ಅಲ್ಲಲ್ಲಿ ಇಂತಹಾ ಶಿಬಿರಗಳು ನಡೆಯಲಿ. ಈ ಮೂಲಕ ನೂರಾರು ಪ್ರತಿಭೆಗಳ ಅನಾವರಣ ಆಗಲಿ” ಎಂದು ಆಶಿಸಿದರು. ವಿದ್ವಾನ್ ನೈಬಿ ಪ್ರಭಾಕರ್, ಸ್ವರಾಲಯ ಸಾಧನಾ ಫೌಂಡೇಶನ್ ಉಪಾಧ್ಯಕ್ಷ ರಮೇಶ್ ಭಟ್, ಕೃಷ್ಣರಾಜ್ ಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ವರಾಲಯ ಸಾಧನಾ ಫೌಂಡೇಶನ್ ಕಾರ್ಯದರ್ಶಿ ವಿದ್ವಾನ್ ವಿಶ್ವಾಸ್ ಕೃಷ್ಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರಾಲಯ ಸಾಧನಾ ಫೌಂಡೇಶನ್ ಅಧ್ಯಕ್ಷ ಶ್ರೀಕೃಷ್ಣ ಭಟ್ ವಂದಿಸಿದರು. ಕಾರ್ಯಕ್ರಮ ಬಳಿಕ ವಿದುಷಿ ಸಾವಿತ್ರಿ ಪ್ರಭಾಕರ್ ಹಾಗೂ ವಿದುಷಿ ಪಾವನಿ ನಾಗಸಿಂಹ ಅವರ ದ್ವಂದ್ವ ಸಂಗೀತ ಕಛೇರಿ ನಡೆಯಿತು. ವಿದ್ವಾನ್ ವಿಶ್ವಾಸ್ ಕೃಷ್ಣರವರು ಪಿಟೀಲಿನಲ್ಲಿ, ವಿದ್ವಾನ್ ಪನ್ನಗ ಶರ್ಮನ್ ಹಾಗೂ ವಿದ್ವಾನ್ ನೈಬಿ ಪ್ರಭಾಕರ್ ಇವರು ಮೃದಂಗದಲ್ಲಿ ಸಹಕರಿಸಿದರು.