ಮಂಗಳೂರು : ಮಿಟಾಕಣ್ ಅಕಾಡೆಮಿ ಮೂಲಕ ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 28 ಮತ್ತು 29 ಜೂನ್ 2025ರಂದು ಆಯೋಜಿಸಿದ ಎರಡು ದಿನಗಳ ವಸತಿಯುತ ಅನುವಾದ ಕಾರ್ಯಾಗಾರವು ನಡೆಯಿತು.
ಸಮಾರೋಪದಲ್ಲಿ ಮಾತನಾಡಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ “ಮಾಂಡ್ ಸೊಭಾಣ್ ಈ ಸಾಲಿನಲ್ಲಿ ಮಕ್ಕಳ ವರ್ಷವನ್ನು ಆಚರಿಸುತ್ತಿದೆ. ಜನವರಿಯಲ್ಲಿ 9 ವರ್ಷದ ಬಾಲೆಯಿಂದ ಸಂಗೀತ ಸುಧೆ, ಫೆಬ್ರವರಿಯಲ್ಲಿ 70 ಮಕ್ಕಳಿಂದ ಸುರಾಂಗಾಣಿಂ ಗಾಯನ ಕಾರ್ಯಕ್ರಮ, ಮೇಯಲ್ಲಿ 61 ಮಕ್ಕಳಿಗೆ ರಜಾ ಶಿಬಿರ ತರಬೇತಿ, ವರ್ಷವಿಡೀ ಸುರ್ ಸೊಭಾಣ್ ಹಿಂದೂಸ್ತಾನಿ ಮತ್ತು ಕೊಂಕಣಿ ಗಾಯನಕ್ಕೆ 100 ಮಕ್ಕಳಿಗೆ ತರಬೇತಿ, ಈಗ ಮಕ್ಕಳಿಗಾಗಿ ಕಥಾನುವಾದ ಕಾರ್ಯಾಗಾರ ಮತ್ತು ಅನುವಾದಗೊಂಡ ಕಥೆಗಳ ಪುಸ್ತಕ ಪ್ರಕಟಣೆ ಹಾಗೂ ನವೆಂಬರದಲ್ಲಿ ಮಕ್ಕಳ ಸಾಹಿತ್ಯೋತ್ಸವ ನಡೆಯಲಿದೆ’’ ಎಂದು ಹೇಳಿದರು.
ಗುರಿಕಾರ ಎರಿಕ್ ಒಝೇರಿಯೊ ಪ್ರಮಾಣ ಪತ್ರ ವಿತರಿಸಿದರು. ಖಜಾಂಚಿ ಎಲ್ರೊನ್ ರೊಡ್ರಿಗಸ್ ಉಪಸ್ಥಿತರಿದ್ದರು. ಮುನ್ನಾದಿನ ವಿವಿಧ ಭಾಷೆಗಳ ಹೆಸರುಗಳನ್ನು ಬರೆದ ಬಿದಿರಿನ ತುಂಡಿನಿಂದ ಕೊಂಕಣಿ ಪತಾಕೆ ಹೊರತೆಗೆಯುವ ಮುಖಾಂತರ ವಕೀಲೆ ಮತ್ತು ಬಹುಭಾಷಾ ಸಾಹಿತಿ ಮುದ್ದು ತೀರ್ಥಹಳ್ಳಿ (ವಿತಾಶಾ ರಿಯಾ ರೊಡ್ರಿಗಸ್) ಕಾರ್ಯಕ್ರಮ ಉದ್ಘಾಟಿಸಿದರು. ನಂತರ ‘ಮಕ್ಕಳ ಸಾಹಿತ್ಯದಲ್ಲಿ ಅನುವಾದದ ಮಹತ್ವ’ ಬಗ್ಗೆ ಉಪನ್ಯಾಸ ನೀಡಿದರು. ಕೊಂಕಣಿ ಕವಿ ಮತ್ತು ಮಕ್ಕಳ ಸಾಹಿತಿ ಜೊಸ್ಸಿ ಪಿಂಟೊ ಕಿನ್ನಿಗೋಳಿ ಇವರು ‘ಭಾಷಾಂತರದ ತಾಂತ್ರಿಕತೆ’ ಬಗ್ಗೆ ಮಾಹಿತಿ ನೀಡಿ ಶಿಬಿರಾರ್ಥಿಗಳ ಪ್ರಶ್ನೆ ಮತ್ತು ಸಂದೇಹಗಳಿಗೆ ಉತ್ತರಿಸಿದರು.
ಸಾಹಿತಿ-ಪತ್ರಕರ್ತ ಹೇಮಾಚಾರ್ಯ ‘ಮಕ್ಕಳ ಸಾಹಿತ್ಯದಲ್ಲಿ ಸದ್ಗುಣಗಳು’ ಇದರ ಬಗ್ಗೆ ಮಾತನಾಡಿದರು. ವಂದನೀಯ ಡಾ. ಪ್ರತಾಪ್ ನಾಯ್ಕ್ ಗೋವಾ ಇವರ ಬಹುಚರ್ಚಿತ `ಭಾಷಾಂತರದ ತತ್ವ ಮತ್ತು ಕಲೆ’ ಲೇಖನವನ್ನು ಶಿಬಿರಾರ್ಥಿಗಳು ವಾಚಿಸಿ ಮಾಹಿತಿ ಪಡೆದರು. ಶಿಬಿರಾರ್ಥಿಗಳು ಆಯ್ದುಕೊಂಡು ತಂದ, ವಿವಿಧ ಭಾಷೆಗಳ ತಲಾ ಎರಡು ಕಥೆಗಳನ್ನು ಅನುವಾದಿಸಿದರು. ಆ ಬಗ್ಗೆ ತಂಡಗಳಲ್ಲಿ ಚರ್ಚಿಸಲಾಯಿತು. ಈ ಎಲ್ಲಾ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಮಿಟಾಕಣ್ ಸಂಚಾಲಕ ರೊನಿ ಕ್ರಾಸ್ತಾ ಪ್ರಸ್ತಾವನೆಗೈದರು. ಉದ್ಘಾಟನೆಯನ್ನು ಅರುಣ್ ರಾಜ್ ರೊಡ್ರಿಗಸ್ ಮತ್ತು ಸಮಾರೋಪವನ್ನು ವಿತೊರಿ ಕಾರ್ಕಳ ನಿರ್ವಹಿಸಿದರು. ವಿಕಾಸ್ ಲಸ್ರಾದೊ ಮತ್ತು ಸವಿತಾ ಸಲ್ಡಾನ್ಹಾ ಸಹಕರಿಸಿದರು.