ಸಿರಿಬಾಗಿಲು : ಸಿರಿಬಾಗಿಲು ಸಾಂಸ್ಕೃತಿಕವಾಗಿ ಮುಖ್ಯವಾದ ಯಕ್ಷಗಾನದ ಸ್ಮಾರಕವಿರುವ ಒಂದು ಕಲಾ ಕೇಂದ್ರ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಇದರ ಐದನೇ ಸಮ್ಮೇಳನವು ದಿನಾಂಕ 29 ಜೂನ್ 2025ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ದಿನಪೂರ್ತಿ ನಡೆಯಿತು. ಹಿರಿಯ ಚಿಂತಕರು ಸಾಹಿತ್ಯ ಪ್ರವರ್ತಕರು ಆದ ವಿ.ಬಿ. ಕುಳಮರ್ವ ಸರ್ವಾಧ್ಯಕ್ಷರಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಉಡುಪಿಯ ವಾಗ್ಮಿ ವಿದ್ವಾನ್ ರಘುಪತಿ ಭಟ್ ವೇದಿಕೆಯಲ್ಲಿದ್ದರು. ಆಹ್ವಾನಿತರಾಗಿ ಕ.ಚು.ಸಾ. ಪರಿಷತ್ ಹುಬ್ಬಳ್ಳಿ ಇದರ ಸ್ಥಾಪಕ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷರಾದ ವೆಂಕಟ ಭಟ್ ಎಡನೀರು, ಯಕ್ಷಗಾನ ಭಾಗವತ ಮತ್ತು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಇವರ ಗೌರವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಗಡಿನಾಡು ಕಾಸರಗೋಡಿನ ಹಿರಿಯ ಸಾಹಿತಿ ಮತ್ತು ಸಂಶೋಧಕ ರಾಧಾಕೃಷ್ಣ ಕೆ. ಉಳಿಯತಡ್ಕ ಇವರು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗಣಪತಿ ಭಟ್ಟ ವರ್ಗಾಸರ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಉತ್ತರ ಕನ್ನಡದ ವಸಂತ ನಾಯಕ ಆಶಯ ನುಡಿಯಾಡಿದರು. ಮೈಸೂರಿನ ಬಾನುಲಿ ನಿವೃತ್ತ ಅಧಿಕಾರಿ ಚುಟುಕು ಸಾಹಿತ್ಯದ ಕುರಿತು, ಗದಗದ ವೀರನಗೌಡ ಮರಿಗೌಡ ವಚನ-ಚುಟುಕು ಸಾಹಿತ್ಯ ಅನುಬಂಧದ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಸುರೇಶ ನೆಗಳಗುಳಿಯವರು ವಹಿಸಿದ್ದರು. ಡಾ. ಕೊಳ್ಚಪ್ಪೆ ಗೋವಿಂದ ಭಟ್ ಆಶಯ ನುಡಿಯಾಡಿದರು. ಕವಿಗಳಾದ ಕಸ್ತೂರಿ ಜಯರಾಮ್, ಪ್ರೇಮ ಬಿರಾದಾರ್, ರವೀಂದ್ರ ಶೆಟ್ಟಿ ಬಳಂಜ, ಲಕ್ಷ್ಮಿ ವಿ. ಭಟ್, ಸುಲೋಚನಾ ನವೀನ್, ಕೆ. ನರಸಿಂಹ ಭಟ್, ಏತಡ್ಕ ಶ್ರೀ ಹರಿ ಭಟ್ ಪೆಲ್ತಾಜೆ, ಶಶಿಕಲಾ ಟೀಚರ್, ಪ್ರಮೀಳಾ ಟಿ.ಕೆ. ಚುಳ್ಳಿಕಾಣ, ಚಿತ್ರಕಲಾ ದೇವರಾಜ್, ವಿಜಯಲಕ್ಷ್ಮಿ ವಿರೂಪಾಕ್ಷ ಕೊಳ್ಳಿ, ದರ್ಶನ್ ಚಿರಾಲ ಡಿ. ಇವರು ಸ್ವರಚಿತ ಕವನ ವಾಚಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ವಿದ್ವಾಂಸ ವಿ.ಬಿ. ಕುಳಮರ್ವ ಅವರು ಈ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ “ಗಡಿನಾಡು ಕಾಸರಗೋಡು ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನವು ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದ ನಿಜವಾದ ಸಿರಿಬಾಗಿಲು. ಅಲ್ಲದೆ ದೂರದ ಹುಬ್ಬಳ್ಳಿ, ಮೈಸೂರು ವಿಭಾಗದ ಮಹನೀಯರು ಪ್ರತಿಷ್ಠಾನದ ಜತೆ ಕೈಜೋಡಿಸಿರುವುದು ಸಂತಸ ತಂದಿದೆ” ಎಂದು ಹೇಳಿದರು.
ನಿರೂಪಣೆಯನ್ನು ಹಾವೇರಿಯ ಡಾ. ಗಂಗಯ್ಯ ಕುಲಕರ್ಣಿ, ಮಂಗಳೂರಿನ ರೇಖಾ ಸುದೇಶ್, ಬೆಂಗಳೂರಿನ ವಿದ್ಯಾ ಬೇಕಲ್ ಮತ್ತು ಹೆಬ್ರಿಯ ಪ್ರೇಮ ಪಾಟೀಲ್ ನಡೆಸಿಕೊಟ್ಟರು. ಅಪರಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಅವರ ಸಂಗೀತ ವೈಭವ ಸಂಪನ್ನವಾಯಿತು. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಇವರ ನೇತೃತ್ವದಲ್ಲಿ ನಡೆದ ‘ಹರಿಸರ್ವೋತ್ತಮ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ವಿಶೇಷ ಮೆರುಗು ನೀಡಿತು. ಬಲಿಪ ಶಿವಶಂಕರ ಭಾಗವತ, ಗೋಪಾಲಕೃಷ್ಣ ನಾವಡ ಮತ್ತು ಮುರಳಿ ಮಾಧವ ಹಿಮ್ಮೇಳದಲ್ಲಿದ್ದು, ಮುಮ್ಮೇಳದಲ್ಲಿ ವಾದಿರಾಜ ಕಲ್ಲುರಾಯ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಸದಾಶಿವ ಆಳ್ವ ತಲಪಾಡಿ ಭಾಗವಹಿಸಿದರು. ಪ್ರಭಾಕರ ಡಿ. ಸುವರ್ಣ ಇವರು ತಾಳಮದ್ದಳೆಗೆ ಪ್ರಾಯೋಜಕತ್ವ ವಹಿಸಿದ್ದರು. ಗ್ರಾಮೀಣ ಪ್ರದೇಶವಾದ ಸಿರಿಬಾಗಿಲಿನಲ್ಲಿ ನಡೆದ ಈ ಕಾರ್ಯಕ್ರಮ ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.