ಮಂಗಳೂರು : ಕಾಸರಗೋಡು ಜಿಲ್ಲೆಯ ಕವಿ, ಪತ್ರಕರ್ತ ವಿರಾಜ್ ಅಡೂರು ಇವರು ಬರೆದ ‘ನನಸಧಾಮ’ ಕವನವು ಮಂಗಳೂರು ಆಕಾಶವಾಣಿಯ ಭಾವಗಾನ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ಮಾನವ ಜೀವನದ ಅನೇಕ ಕನಸುಗಳಿಗೆ ಜೀವ ತುಂಬುವ ಲೌಕಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಈ ಕವನದಲ್ಲಿ ವಿಶ್ಲೇಷಿಸಲಾಗಿದೆ. ಸಂಕುಚಿತ ತತ್ವಗಳಿಂದ ವಿಶಾಲತ್ವದೆಡೆಗೆ ತೆರೆದುಕೊಳ್ಳುವ ಮೂಲಕ ಭಾವಜೀವಿಯಾದ ಮಾನವನು ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಸಂಕಲ್ಪ ಮಾಡುತ್ತಾನೆ. ಗಗನ ವ್ಯಾಪ್ತಿಯಲ್ಲಿ ಅರಳಿಕೊಂಡು, ನನಸುಗಳನ್ನು ಬಾಚಿಕೊಳ್ಳುವ, ನಿರ್ಬಂಧಿತ ಕಟ್ಟುಪಾಡುಗಳನ್ನು ವಿರೋಧಿಸುವ ವರ್ತನೆಯು ಕವನದಲ್ಲಿ ಇದೆ. ಈ ರಚನೆಯು ಏಹಿಕ ಜಂಜಾಟಗಳಿಂದ ಮೀರಿದ ‘ನನಸಧಾಮ’ ಎಂಬ ನೆಮ್ಮದಿಯ ತಾಣದತ್ತ ಸಾಗುವ ಮಾರ್ಗಸೂಚಿಯಂತೆ ಇದೆ. ಈ ಕವನವು ಆಕಾಶವಾಣಿಯ ಭಾವಗಾನ ತಿಂಗಳ ಹಾಡು ವಿಭಾಗದಲ್ಲಿ ದಿನಾಂಕ 04 ಜುಲೈ 2025ರಿಂದ ಈ ತಿಂಗಳ ಪ್ರತೀ ಶುಕ್ರವಾರ ಬೆಳಗ್ಗೆ 9-00 ಗಂಟೆಗೆ ಖ್ಯಾತ ಕಲಾವಿದರ ಸಂಗೀತ ಸಂಯೋಜನೆಯಲ್ಲಿ ಪ್ರಸಾರವಾಗಲಿದೆ.