ತೀರ್ಥಹಳ್ಳಿ : ನಟಮಿತ್ರರು ತೀರ್ಥಹಳ್ಳಿಯ ಪ್ರತಿಷ್ಠಿತ ಹವ್ಯಾಸಿ ಕಲಾ ಬಳಗ ಇದರ ಆಶ್ರಯದಲ್ಲಿ ದಿನಾಂಕ 13 ಜುಲೈ 2025ರ ಭಾನುವಾರದಂದು ಸಂಜೆ ಗಂಟೆ 6-30ಕ್ಕೆ ಸರಿಯಾಗಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬೆಂಗಳೂರಿನ ರಂಗಸಂಪದ ತಂಡದಿಂದ ಖ್ಯಾತ ಚಲನಚಿತ್ರ ನಟಿ, ರಂಗಭೂಮಿ ಕಲಾವಿದೆ ಶ್ರೀಮತಿ ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ನಟ ಮಿತ್ರರು ತಂಡದ ಅಧ್ಯಕ್ಷರಾದ ಸಂದೇಶ ಜವಳಿ ದಿನಾಂಕ 29 ಜೂನ್ 2025ರಂದು ತೀರ್ಥಹಳ್ಳಿಯ ರಥಬೀದಿಯಲ್ಲಿರುವ ರಾಮ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪುರಾಣದಲ್ಲಿನ ಯಯಾತಿಯ ಕಥನವನ್ನು ಆಧರಿಸಿದ ಈ ನಾಟಕ ಯಯಾತಿಯ ಹೆಂಡತಿ ಶರ್ಮಿಷ್ಠೆಯನ್ನು ಕೇಂದ್ರೀಕರಿಸಿ ರಚಿಸಲಾಗಿದೆ. ಕನ್ನಡ ರಂಗಭೂಮಿ ಹಿರಿತೆರೆ, ಕಿರುತೆರೆ ಕ್ಷೇತ್ರದ ಅಭಿನೇತ್ರಿ ಶ್ರೀಮತಿ ಉಮಾಶ್ರೀ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ರಂಗಭೂಮಿಯಲ್ಲಿ ಅನುಪಮವಾದ ಸೇವೆ ಸಲ್ಲಿಸುತ್ತಿರುವ ಮಹಾನ್ ಕಲಾವಿದೆ. ಉಮಾಶ್ರೀಯವರು ಭಾರತೀಯ ಅಭಿನಯ ಪರಂಪರೆಯಲ್ಲಿ ಒಂದು ಅಮೂಲ್ಯವಾದ ಮಾದರಿ ಹವ್ಯಾಸಿ, ವೃತ್ತಿ, ಗ್ರಾಮೀಣ ಕೈಗಾರಿಕಾ ರಂಗಭೂಮಿಯನ್ನು ಸೇರಿದಂತೆ ರಂಗದ ವಿವಿಧ ಕ್ಷೇತ್ರ ಪ್ರಕಾರಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಉಮಾಶ್ರೀ ಜನಪ್ರಿಯರಾಗಿದ್ದಾರೆ. ಬಾಕ್ಸ್ ಆಫೀಸ್ ನ ಯಶಸ್ವಿ ನಟಿಯಾದ ಇವರು ಸಾವಿರಾರು ಪ್ರದರ್ಶನಗಳಲ್ಲಿ ಅಭಿನಯಿಸಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ, ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಪಡೆದಿರುವ ಉಮಾಶ್ರೀ ಅವರ ಸಾಧನೆ ನಮ್ಮ ಕನ್ನಡ ಸಾಂಸ್ಕೃತಿಕ ಲೋಕವೇ ಹೆಮ್ಮೆಪಡುವಂಥದ್ದು. ರಂಗಸಂಪದ ತಂಡದ ಮೂಲಕ ಹವ್ಯಾಸಿ ರಂಗಭೂಮಿಯಲ್ಲಿ ಮನ್ನಣೆ ಪಡೆದ ಉಮಾಶ್ರೀ ಈಗ ಇದೇ ತಂಡದ ಮೂಲಕ ಶರ್ಮಿಷ್ಠೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಶಾಸಕಿಯಾಗಿದ್ದಾರೆ. ಈ ಹಿಂದೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಕೆಲಸ ಮಾಡಿದ್ದಾರೆ.
ಅಪರೂಪದ ಈ ಏಕವ್ಯಕ್ತಿಯ ರಂಗ ಪ್ರಯೋಗವನ್ನು ಕರ್ನಾಟಕದ ಉದಯೋನ್ಮುಖ ನಾಟಕಕಾರರಾದ ಶ್ರೀ ಬೇಲೂರು ರಘುನಂದನ್ ರಚಿಸಿದ್ದಾರೆ. ಕರ್ನಾಟಕದ ಪ್ರಸಿದ್ಧ ರಂಗ ನಿರ್ದೇಶಕ ಮೈಸೂರು ರಂಗಾಯಣದ ಮಾಜಿ ನಿರ್ದೇಶಕರೂ, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಶ್ರೀ ಚಿದಂಬರರಾವ್ ಜಂಬೆ ಈ ನಾಟಕವನ್ನು ನಿರ್ದೇಶಸಿದ್ದಾರೆ. ಶ್ರೀ ಅನುಷ್ ಶೆಟ್ಟಿಯವರ ಸಂಗೀತ ಈ ನಾಟಕಕ್ಕೆ ಇದೆ. ವಸ್ತ್ರವಿನ್ಯಾಸ, ರಂಗ ಸಜ್ಜಿಕೆ ಮತ್ತು ರಂಗ ಪರಿಕರಗಳ ನಿರ್ವಹಣೆ ಶ್ರೀ ಪ್ರಮೋದ್ ಶಿಗ್ಗಾವ್ ಇವರದ್ದಾಗಿದೆ. ರಂಗಸಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕವನ್ನು ವೀಕ್ಷಿಸಿ, ರಂಗಭೂಮಿಯನ್ನು ಪ್ರೋತ್ಸಾಹಿಸಬೇಕೆಂದು ಸಂದೇಶ್ ಜವಳಿ ಕೋರಿದ್ದಾರೆ. ವಿಭಿನ್ನ ಪೂರ್ಣವಾದ ಈ ನಾಟಕ ಪ್ರದರ್ಶನಕ್ಕೆ 100 ರೂಪಾಯಿಗಳ ಪ್ರವೇಶ ಶುಲ್ಕವಿದ್ದು, ಪ್ರೇಕ್ಷಕರು ತಮ್ಮ ಪ್ರವೇಶವನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ : 9448120959 ಮತ್ತು 8618893484ಗೆ ಸಂಪರ್ಕಿಸಬಹುದಾಗಿದೆ. ಟಿಕೆಟ್ ಗಳು 1. ತೃಪ್ತಿ ಕಾಂಡಿಮೆಂಟ್ಸ್ ಅಜಾದ್ ರಸ್ತೆ 2. ಮಲ್ನಾಡ್ ಪ್ರಿಟ್ಸ್, ಡಿಸಿಸಿ ಬ್ಯಾಂಕ್ ಎದುರು (8310845353), 3. ವೆಂಕಟೇಶ್ವರ ಬುಕ್ ಸ್ಟಾಲ್, ಪೊಲೀಸ್ ಠಾಣೆ ಎದುರು, 4. ಶ್ರೀ ಕಾಫಿ ವರ್ಕ್ಸ್ ಆಜಾದ್ ರಸ್ತೆಗಳಲ್ಲಿ ದೊರೆಯುತ್ತದೆ. ಸುದ್ದಿಗೋಷ್ಠಿಯಲ್ಲಿ ನಟ ಮಿತ್ರರು ಕಲಾ ಸಂಘದ ಪದಾಧಿಕಾರಿಗಳಾದ ಆಶಾ ಡೆ ನಿಯಲ್, ಸತೀಶ್ ಹಾಗೂ ಚೇತನ್ ಸಹ್ಯಾದ್ರಿ ಉಪಸ್ಥಿತರಿದ್ದರು.