‘ವಚನ ಪಿತಾಮಹ’ ಎಂದು ಪ್ರಖ್ಯಾತರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಇವರು ಫ. ಗು. ಹಳಕಟ್ಟಿ ಎಂದೇ ಪ್ರಸಿದ್ಧರು. ಹಳಕಟ್ಟಿ ಮನೆತನದವರಾದ ಇವರ ತಂದೆ ಗುರುಬಸಪ್ಪ ಹಳಕಟ್ಟಿ ಹಾಗೂ ತಾಯಿ ದಾನಾದೇವಿ. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಸಾಹಿತ್ಯ ಸೇವೆಯನ್ನು ಪ್ರವೃತ್ತಿ ಮಾಡಿಕೊಂಡವರು. ‘ಇಂಗ್ಲೆಂಡಿನ ಇತಿಹಾಸ’, ‘ಏಕನಾಥ ಸಾಧುಗಳ ಚರಿತ್ರೆ’, ‘ಫ್ರಾನ್ಸ್ ದೇಶದ ರಾಜ್ಯ ಕ್ರಾಂತಿ’, ‘ಸಿಕಂದರ ಬಾದಶಹನ ಚರಿತ್ರೆ’ ಇತ್ಯಾದಿ ಕೃತಿಗಳನ್ನು ಆ ಕಾಲದಲ್ಲೇ ರಚಿಸಿ ಸಾಹಿತಿಯಾಗಿ ಬಹಳಷ್ಟು ಪ್ರಸಿದ್ಧರಾಗಿದ್ದವರು. ಮಾತ್ರವಲ್ಲದೆ ‘ವಾಗ್ಭೂಷಣ’ ಎಂಬ ಆಗಿನ ಪತ್ರಿಕೆಯಲ್ಲಿ ಹಲವಾರು ಲೇಖಕನಗಳನ್ನು ಬರೆದು ಜನ ಮೆಚ್ಚುಗೆ ಪಡೆದಿದ್ದರು . ಹೀಗಾಗಿ ಫ. ಗು. ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಬಂದಿತ್ತು. ಇವರು ಸಂಶೋಧಕ, ಸಾಹಿತ್ಯ ಪ್ರಚಾರಕ ಮತ್ತು ಸಂಪಾದಕರಾಗಿ ದುಡಿದವರು.
1896ರಲ್ಲಿ ಮೆಟ್ರಿಕ್ ಮುಗಿಸಿ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬೈಯ ‘ಸೈಂಟ್ ಝೇವಿಯರ್’ ಕಾಲೇಜಿಗೆ ಸೇರಿದರು. ಇಲ್ಲಿ ಇತರರು ತಮ್ಮ ಭಾಷೆಯ ಬಗ್ಗೆ ಅತೀವ ಅಭಿಮಾನವನ್ನು ತಾಳಿರುವಾಗ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಅಭಿಮಾನ ಹೀನರಾಗಿರುವುದು ಇವರ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಕನ್ನಡ ಉದ್ಧಾರವಾಗಬೇಕಾದರೆ ಕನ್ನಡಿಗರು ಎಚ್ಚರಗೊಳ್ಳಲೇಬೇಕು ಎಂಬ ಚಿಂತನೆಯಿಂದ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ವಿದ್ಯಾರ್ಥಿದೆಸೆಯಲ್ಲಿಯೇ ದುಡಿಯುವ ಸಂಕಲ್ಪವನ್ನು ಕೈಗೊಂಡರು. ಈ ಘನಕಾರ್ಯದಲ್ಲಿ ಇವರ ಸಹಪಾಠಿಯಾಗಿದ್ದ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರಿಗೆ ಸ್ಪೂರ್ತಿ ತುಂಬಿದರು.
ಮುಂದೆ ಕಾನೂನು ಪದವವೀಧರರಾಗಿ ಬೆಳಗಾವಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದವರು, ಕಾರಣಾಂತರಗಳಿಂದ ವಿಜಯಪುರಕ್ಕೆ ವಾಸ್ತವ್ಯವನ್ನು ಬದಲಾಯಿಸಿ, ವಿಜಯಪುರವನ್ನೇ ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡರು. ಇದೇ ಸಮಯದಲ್ಲಿ ಕರ್ನಾಟಕದ ಕೃಷಿಕ ಉದ್ದಾರಕ ಹಾಗೂ ವೀರಶೈವ ತತ್ವಾರಾಧಕರಾದ ಶಿರಸಂಗಿ ಲಿಂಗರಾಜರು ವೀರಶೈವ ಮಹಾಸಭಾ ಅಧಿವೇಶನದ ಅಧ್ಯಕ್ಷರಾಗಿದ್ದರು. ಅವರ ವಿಚಾರಧಾರೆಯಿಂದ ಫಕೀರಪ್ಪನವರು ಆಕರ್ಷಿತರಾಗಿ, ಮನಃಪೂರ್ವಕವಾಗಿ, ಶ್ರದ್ಧೆಯಿಂದ ಶರಣ ಸಾಹಿತ್ಯದ ಮೂಲಕ ವೀರಶೈವ ಪ್ರಪಂಚವನ್ನು ಉದ್ದರಿಸುವ ಸಂಕಲ್ಪವನ್ನು ಕೈಗೊಂಡರು. ಬಿ.ಎಂ. ಶ್ರೀಕಂಠಯ್ಯನವರು ನಾಡಹಬ್ಬದ ಅತಿಥಿಯಾಗಿ ವಿಜಯಪುರಕ್ಕೆ ಬಂದಿದ್ದರು. ಸಂಘಟಕರು ಅವರನ್ನು ಕುರಿತು “ವಿಜಯಪುರಕ್ಕೆ ಬಂದ ನೀವು ಇಲ್ಲಿನ ಜಗತ್ಪ್ರಸಿದ್ಧ ಗೋಳಗುಮ್ಮಟವನ್ನು ನೋಡಲೇಬೇಕು. ನಾಳೆ ಅಲ್ಲಿಗೆ ಹೋಗುವ ವ್ಯವಸ್ಥೆ ಮಾಡುತ್ತೇವೆ.” ಎಂದಾಗ ಬಿ.ಎಂ. ಶ್ರೀಕಂಠಯ್ಯನವರು ಗೋಳಗುಮ್ಮಟ ನೋಡೋಣ. ಆದರೆ ಅದಕ್ಕೂ ಮೊದಲು “ವಚನ ಗುಮ್ಮಟ”ವನ್ನು ನೋಡಬೇಕು” ಎಂದಾಗ ಏನೆಂದು ತಿಳಿಯದೆ ಎಲ್ಲರೂ ಗಾಬರಿಗೊಂಡರು. ಆದರೆ ವಚನ ಗುಮ್ಮಟವೇ “ವಚನ ಪಿತಾಮಹ “ಹಾಗೂ ಡಾ. ಫ. ಗು. ಹಳಕಟ್ಟಿ ಎಂದೇ ಪ್ರಸಿದ್ಧರಾದ ರಾವಬಹದ್ದೂರ್ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು. ಈ ಹೆಗ್ಗಳಿಕೆ ವಚನ ಸಾಹಿತ್ಯ ದುಡಿಮೆಗೆ ಅವರಿಗೆ ದೊರೆತ ಅತಿದೊಡ್ಡ ಗೌರವವೆಂದೇ ಹೇಳಬಹುದು.
ತಮ್ಮ ಅನನ್ಯ ಕಾನೂನು ಜ್ಞಾನದಿಂದಾಗಿ ವಕೀಲಿ ವೃತ್ತಿಯಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡ ಇವರು ತಮ್ಮ ಜನಪ್ರಿಯತೆಯಿಂದಲೇ ಬಿಜಾಪುರ ನಗರಸಭೆಯ ಶಾಲಾ ಕಾರ್ಯನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ ಮತ್ತು ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ತಮ್ಮ ಶಾಸನಬದ್ಧ ಶಿಸ್ತಿನ ಅಧಿಕಾರದಿಂದ ಕನ್ನಡವನ್ನು ಸಮೃದ್ಧವಾಗಿ ಕಟ್ಟಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.
ಹಳಕಟ್ಟಿಯವರು ವಿಜಯಪುರದ ಶಿವಲಿಂಗಪ್ಪ ಮಂಚಾಲಿಯವರ ಮನೆಗೆ ಹೋದಾಗ ಅಲ್ಲಿ ಷಟಸ್ಥಲ ತಿಲಕ ಹಾಗೂ ಪ್ರಭುದೇವರ ವಚನ ತಾಳೆಗರಿಗಳನ್ನು ನೋಡಿದಾಗ ಅದರಲ್ಲಿದ್ದ ಅದ್ಭುತ ಸಾಹಿತ್ಯ ಈ ರೀತಿ ವ್ಯರ್ಥವಾಗುವುದು ಆವರ ಮನಸ್ಸಿಗೆ ನೋವು ಕೊಟ್ಟಿತು. ಅತೀ ನಿರ್ಲಕ್ಷದಿಂದ ಅದ್ಭುತ ಸಾಹಿತ್ಯವುಳ್ಳ ತಾಡೋಲೆಗಳು ಬೆಳಕಿಗೆ ಬಾರದೆ ಗೆದ್ದಲು ಹುಳಗಳಿಗೆ ಆಹಾರವಾಗುವುದು ಮನಸ್ಸಿಗೆ ಒಪ್ಪಿಗೆ ಆಗಲಿಲ್ಲ. ಅದೇ ಕೊರಗಿನಲ್ಲಿ ಎಚ್ಚೆತ್ತುಕೊಂಡ ಅವರು ವಚನ ಸಾಹಿತ್ಯದ ರಕ್ಷಣೆ ಮತ್ತು ಪ್ರಚಾರಕ್ಕೆ ಅಂದೇ ಬದ್ಧರಾದರು. ಹಳ್ಳಿ – ಹಳ್ಳಿಗಳಿಗೆ ಸೈಕಲ್ ತುಳಿದುಕೊಂಡು ಹೋಗಿ, ಮನೆ ಮನೆ ತಿರುಗಿ ವಚನಗಳ ತಾಡೋಲೆ, ಕೈಬರಹಗಳ ಪ್ರತಿ ಸಂಗ್ರಹಿಸಿ ಪಟ್ಟ ಶ್ರಮ, ಅದಕ್ಕಾಗಿ ಮಾಡಿದ ಖರ್ಚು, ಇದರಿಂದಾಗಿ ಜೀವನದಲ್ಲಿ ಬಹಳ ಕಷ್ಟ ನಷ್ಟಗಳಿಗೆ ಒಳಗಾದರು. ಇವರ ಹಿರಿಯ ಮಗ ಅಪಘಾತದಿಂದ ತೀರಿಕೊಂಡಾಗ “ಶಿವನ ಸೊಲ್ಲು ಶಿವನಿಗೆ ಸಲ್ಲಿತು” ಎಂದ ಮಹಾನ್ ಶರಣರು ಹಳಕಟ್ಟಿಯವರು. ಹೊಟ್ಟೆಯ ಶಸ್ತ್ರಚಿಕಿತ್ಸೆ ಮತ್ತು ರೈಲು ಪ್ರಯಾಣದ ಸಂದರ್ಭದಲ್ಲಿ ಕಾಲು ಮುರಿದಾಗಲೂ ಸಾಹಿತ್ಯ ಸೇವೆಗೆ ತಡೆಯಾಗಲಿಲ್ಲ, ಅದು ನಿರಂತರವಾಗಿತ್ತು. ಹಳಕಟ್ಟಿಯವರ ಸ್ಥಿತಪ್ರಜ್ಞ ವ್ಯಕ್ತಿತ್ವಕ್ಕೆ ಇದು ಸಾಕ್ಷಿಯಾಗಿದೆ.
ಹಳಕಟ್ಟಿಯವರು ಶ್ರಮವಹಿಸಿ ಸಂಶೋಧನೆಯ ಮೂಲಕ ಮಾಡಿದ ದುಡಿಮೆಯಿಂದಾಗಿ ‘ವಚನ ಶಾಸ್ತ್ರ ಸಾರ ಭಾಗ-1’ ಗ್ರಂಥ ತಯಾರಾಯಿತು. ತಮ್ಮ ಸಂಕಲ್ಪದ ಸಾಧನೆಗಾಗಿ ತಮ್ಮ ಸ್ವಂತ ಮನೆಯನ್ನು ಮಾರಿ ‘ಹಿತಚಿಂತಕ ಮುದ್ರಣಾಲಯ’ವನ್ನು ಸ್ಥಾಪಿಸಿದರು.
ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಇತರ ಕವಿಗಳು, ಚರಿತ್ರೆಗಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು ಮಾತ್ರ. ಆದರೆ ಹಳಕಟ್ಟಿಯವರು 250ಕ್ಕೂ ಮಿಕ್ಕಿ ವಚನಕಾರರನ್ನು ಜಗತ್ತಿಗೆ ಪರಿಚಯಿಸಿದರು. ಹರಿಹರನ 42ರಗಳೆಗಳನ್ನು ಸಂಶೋಧನೆ ಮಾಡಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರದು. 1923ರಲ್ಲಿ ‘ವಚನ ಶಾಸ್ತ್ರ ಸಾರ ಭಾಗ-1’ ಪ್ರಕಟವಾಯಿತು. ಇದೊಂದು ಅಪೂರ್ವ ವಚನಗಳ ಒಂದು ಅದ್ಭುತ ಕೃತಿ. ಕರ್ನಾಟಕದ ಇತಿಹಾಸದಲ್ಲಿ ಸಂಶೋಧನೆ ಮಾಡಿ ಪ್ರಕಟಣೆ ಮಾಡಲು ಒಂದು ಮುದ್ರಣಾಲಯವನ್ನು ಪ್ರಾರಂಭಿಸಿದ ಖ್ಯಾತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ತೀಕ್ಷ್ಣ ಬುದ್ಧಿ ಮತ್ತು ಅಗಾಧ ಚಿಂತನೆಯ ಹಳಕಟ್ಟಿಯವರು ಪತ್ರಿಕಾ ಮಾಧ್ಯಮದಿಂದ ಏಕಕಾಲದಲ್ಲಿ ಎರಡು ಪತ್ರಿಕೆಯನ್ನು ಸಂಪಾದಿಸಿ, ಪ್ರಕಟಿಸಿ ಅಅ ಮೂಲಕ ಜನತೆಗೆ ಜವಾಬ್ದಾರಿಯನ್ನು ತಿಳಿಸಿ ಎಚ್ಚರಿಸುವ ಕಾರ್ಯಕ್ಕೆ ಮುಂದಾದರು. ಪತ್ರಿಕೋದ್ಯಮದಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಹಳಹಳಟ್ಟಿಯವರು ‘ಶಿವಾನುಭವ’ ಎಂಬ ಮಾಸ ಪತ್ರಿಕೆಯನ್ನು ಆರಂಭಿಸಿದರು. ಈ ಪತ್ರಿಕೆ 35 ವರ್ಷ ನಿರಂತರವಾಗಿ ನಡೆದ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1927ರಲ್ಲಿ ‘ನವ ಕರ್ನಾಟಕ’ ಎಂಬ ವಾರ ಪತ್ರಿಕೆಯನ್ನು ಆರಂಭಿಸಿದರು. ಈ ಎರಡು ಪತ್ರಿಕೆಗಳ ಸಂಪಾದಕರಾಗಿ, ಪ್ರಕಾಶಕರಾಗಿ, ಮುದ್ರಕರಾಗಿ ಹಳಕಟ್ಟಿಯವರು ಮಾಡಿದ ಸಾಧನೆ ಪತ್ರಿಕಾ ರಂಗದಲ್ಲಿ ಅನನ್ಯವಾದುದು. ‘ಶೂನ್ಯ ಸಂಪಾದನೆ’, ‘ಶಿವಾನುಭವ’, ‘ಕೃಷಿ ವಿಜ್ಞಾನ’, ‘ಪ್ರಭುದೇವರ ವಚನಗಳು’, ‘ಹರಿಹರನ ರಗಳೆ’, ‘ಪ್ರದೀಪಿಕೆ’, ‘ಶಬ್ದಕೋಶ’ ಇತ್ಯಾದಿ ಇವರ ಪ್ರಮುಖ ಕೃತಿಗಳು. ವಚನ ಸಾಹಿತ್ಯ ಕ್ಷೇತ್ರಕ್ಕೆ ಹಳಕಟ್ಟಿಯವರು ಸಲ್ಲಿಸಿದ ಸೇವೆ ಅಪೂರ್ವವಾದುದು. ಬಸವಣ್ಣನವರ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ‘ಇಂಡಿಯನ್ ಆಂಟಿಕ್ವರಿ’ಯಲ್ಲಿ ಪ್ರಕಟಗೊಳಿಸಿದರು. ವಚನಗಾಯನಕ್ಕೆ ವ್ಯವಸ್ಥೆ ಮಾಡಿಸಿ, ಶ್ರೇಷ್ಠ ಸಂಗೀತಗಾರರಿಂದ ಧ್ವನಿ ಮುದ್ರಣವನ್ನು ಮುಂಬೈಯಲ್ಲಿ ಮಾಡಿಸಿದ್ದು ವಚನ ಸಾಹಿತ್ಯಕ್ಕೆ ಅವರು ಸಲ್ಲಿಸಿದ ಅನನ್ಯ ಸೇವೆಗೆ ಸಾಕ್ಷಿಯಾಗಿದೆ. ಆದ್ದರಿಂದಲೇ ಅವರನ್ನು ‘ವಚನ ಪಿತಾಮಹ’ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ.
ಫ. ಗು. ಹಳಕಟ್ಟಿಯವರು ಕೇವಲ ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ಚಟುವಟಿಕೆಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಗೆ, ಸಹಕಾರಿ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿಜಯಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘ ಮತ್ತು ಶ್ರೀ ಸಿದ್ದೇಶ್ವರ ಅರ್ಬನ್ ಕಾರ್ಪೊರೇಟಿವ್ ಬ್ಯಾಂಕ್ ಇವುಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಅನೇಕ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಈ ಮೂಲಕ ಸಮಾಜದ ಅಭಿವೃದ್ಧಿಗೆ ದುಡಿದ ಒಬ್ಬ ಮೇರು ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಇವರ ಪಾತ್ರ ಮಹತ್ತರದ್ದಾಗಿದೆ. ಕರ್ನಾಟಕದಲ್ಲಿ ಲಿಂಗಾಯತರ ಸ್ಥಿತಿಗತಿ ತೀರಾ ದುಸ್ತರವಾಗಿರುವುದನ್ನು ಕಂಡು ಇವರು ಸ್ಥಾಪಿಸಿದ ವಿಜಯಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘವು ಹಲವು ವರ್ಷಗಳ ಹಿಂದೆ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ 30ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪ್ರಕಟಿಸಿದೆ.
ಎಲ್ಲಾ ರಂಗಗಳಲ್ಲಿಯೂ ಸಮರ್ಥವಾಗಿ ತಮ್ಮ ಸೇವೆಯನ್ನು ಸಲ್ಲಿಸಿದ ಹಳಕಟ್ಟಿಯವರು ಹಲವಾರು ಗೌರವ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. 1920ರಲ್ಲಿ ಮುಂಬೈಯ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. 1928ರಲ್ಲಿ ನಡೆದ ಮೂರನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ ಮತ್ತು 1931ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮುಂತಾದವು ಇವರು ಸಾಹಿತ್ಯ ಸಂಸ್ಕೃತಿ ಹಾಗೂ ಸಮಾಜಕ್ಕೋಸ್ಕರ ಸಲ್ಲಿಸಿದ ಸೇವೆಗೆ ದೊರೆತ ಗೌರವಗಳು. ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದಾಗ ಭಾರತ ಸರ್ಕಾರ ಇವರಿಗೆ ರಾವ್ ಬಹದ್ದೂರ್ ಪದವಿಯನ್ನು ನೀಡಿ ಗೌರವಿಸಿದೆ. 1964ರಲ್ಲಿ ಹಳಕಟ್ಟಿಯವರು ಇಹವನ್ನು ತ್ಯಜಿಸಿದರು. ಜುಲೈ 02ನ್ನು ‘ವಚನ ಸಾಹಿತ್ಯ ಸಂರಕ್ಷಣಾ ದಿನ’ವಾಗಿ ಸರ್ಕಾರ ಘೋಷಿಸಿ ಆ ಮೂಲಕ ಹಳಕಟ್ಟಿಯವರಿಗೆ ಗೌರವ ಸಲ್ಲಿಸಿದೆ.
ಅವರು ಜನತೆಯ ನಡುವೆ ಇಲ್ಲದಿದ್ದರೂ, ಅವರು ಮಾಡಿದ ಸೇವೆ, ತ್ಯಾಗ, ಕಟ್ಟಿ ಬೆಳೆಸಿದ ಸಂಘ ಸಂಸ್ಥೆಗಳು, ವಚನ ಸಾಹಿತ್ಯ ಕ್ಷೇತ್ರ ಅವರನ್ನು ನಮ್ಮ ನಡುವೆಯೇ ಇರುವಂತೆ ಮಾಡಿ ಅಮರಗೊಳಿಸಿದೆ. ವಿಜಯಪುರದ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘವು ಡಾ. ಫ. ಗು. ಹಳಕಟ್ಟಿಯವರ ಸ್ಮಾರಕ ಭವನವನ್ನು ನಿರ್ಮಿಸಿರುವುದು ಅವರ ದುಡಿಮೆಗೆ ನೀಡಿದ ಗೌರವವಾಗಿದೆ.
-ಅಕ್ಷರೀ