ಬೆಂಗಳೂರು : ಕರ್ನಾಟಕ “ವಿಕಾಸರಂಗ”ವು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ, ನೆಲ-ಜಲದ ರಕ್ಷಣೆಗಾಗಿ ಶ್ರಮಿಸುವ ಧ್ಯೇಯೋದ್ಧೇಶಗಳೊಂದಿಗೆ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಸಂಸ್ಥೆಯ ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ನಿವಾಸಿ ಶ್ರೀ ವೈಲೇಶ. ಪಿ. ಎಸ್. ಇವರನ್ನು ನೇಮಕ ಮಾಡಲಾಗಿದೆಯೆಂದು ಕರ್ನಾಟಕ ವಿಕಾಸ ರಂಗದ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾಗಿರುವ ಶ್ರೀಯುತ ವ. ಚ. ಚನ್ನೇಗೌಡರು ತಿಳಿಸಿದ್ದಾರೆ.
ಶ್ರೀ ವೈಲೇಶ. ಪಿ. ಎಸ್ :
ಶಿವೈ. ವೈಲೇಶ್.ಪಿ.ಎಸ್. ಕೊಡಗು ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಶ್ರೀಯುತರು ಪೌತಿ ಪಿ. ಕೆ. ಸಿಡ್ಲಯ್ಯ ಹಾಗೂ ಪೌತಿ ಪಿ. ಎಸ್. ಕಾಳಮ್ಮ ಇವರ ಸುಪುತ್ರರಾಗಿ ದಿನಾಂಕ 01 ಜೂನ್ 1965 ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮದಲ್ಲಿ ಜನಿಸಿದರು.
ಕೊಡವ ಮತ್ತು ಕನ್ನಡದ ದ್ವಿಭಾಷಾ ಕವಿ, ಸಾಹಿತಿ, ಸಾಹಿತ್ಯ ಸಂಘಟಕ, ವಿಮರ್ಶಕ, ಅಂಕಣಕಾರ. ಹವ್ಯಾಸಿ ರಂಗಕಲಾವಿದ ರಾದ ಇವರು ಕ. ರಾ. ರ. ಸಾ. ಸಂಸ್ಥೆಯ ಚಾಲಕ ಬೋಧಕರಾಗಿದ್ದು ಇತ್ತೀಚೆಗೆ ನಿವೃತಿ ಹೊಂದಿದರು.
ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು, ಸಾಹಿತ್ಯ ಸಂವರ್ಧಕ ಪರಿಷತ್ತು ಎಂಬ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡಿರುವ ಇವರು ಪರಿಷತ್ತಿನ ವತಿಯಿಂದ ಮನೆ ಮನೆ ಕಾವ್ಯಗೋಷ್ಠಿ, ಇಪ್ಪತ್ತೈದು ಜಿಲ್ಲಾ ಮಟ್ಟದ ಪ್ರತ್ಯಕ್ಷ ಕವಿಗೋಷ್ಠಿಗಳು, ಹತ್ತು ರೇಡಿಯೋ ಕವಿಗೋಷ್ಠಿಗಳು ಹತ್ತಕ್ಕೂ ಹೆಚ್ಚು ಅಂತರ್ಜಾಲ ತಾಣದ ವಾಟ್ಸ್ ಆಪ್ ಗ್ರೂಪ್‌ನ ಕವಿಗೋಷ್ಠಿಗಳು. ಸಾಹಿತ್ಯ ಸಂವರ್ಧಕ ಪರಿಷತ್ತು ವಾಟ್ಸ್‌ಆಪ್ ಬಳಗದಲ್ಲಿ ಪ್ರತಿ ಮಂಗಳವಾರದಂದು ಸ್ಪರ್ಧೆಯನ್ನು ಏರ್ಪಡಿಸಿ ಕವಿಗಳನ್ನು ಹಾಗೂ ಸಾಹಿತ್ಯಾಸಕ್ತರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದಾರೆ. ಈ ಸ್ಪರ್ಧೆಯು ಇದೀಗ 300ರ ಗಡಿಯನ್ನು ದಾಟಿದ ಸ್ಪರ್ಧೆಯಾಗಿ ರೂಪುಗೊಂಡಿದೆ. ಇವರ ‘ಮುಕ್ತಕ’ಗಳು ಹಾಸನದ “ಪ್ರತಿನಿಧಿ” ಪತ್ರಿಕೆಯಲ್ಲಿ ಸುಮಾರು 850 ದಿನಗಳ ಕಾಲ ಪ್ರತಿದಿನ ಪ್ರಸಾರವಾಗಿತ್ತು.
2017 ರಿಂದ ಈಚೆಗೆ ಛಂದೋಬದ್ಧ ರಚನೆಗಳನ್ನು ಕಲಿತು ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ, ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳು, ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ – ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ರಚಿಸಿದ್ದಾರೆ.
“ಅಮ್ಮನಿಮಗಾಗಿ”, “ಕಣ್ಮರೆಯಾದ ಹಳ್ಳಿ” ಇವರ ಕವನ ಸಂಕಲನಗಳು, “ಬೊಮ್ಮಲಿಂಗನ ಸಗ್ಗ” ಇದು ಮುಕ್ತಕ, “ಮನದ ಇನಿದನಿ” ಎಂಬುದು ಲೇಖನಮಾಲೆ, “ಕೊಡಗಿನ ಸಾಹಿತ್ಯ ತಪಸ್ವಿಗಳು” ಎಂಬ ಕೊಡಗಿನ ಕವಿ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1 ಇವು ಇವರ ಪ್ರಕಟವಾದ ಕೃತಿಗಳಾದರೆ, ಇವರ ಬಳಿ ಇನ್ನೂ ಹತ್ತಕ್ಕೂ ಹೆಚ್ಚು ಕೃತಿಗಳನ್ನು ತಯಾರಿಸಲು ಬೇಕಾದ ಬರಹಗಳು ಶೇಖರವಾಗಿವೆ.
ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನಲ್ಲಿ ಎಲ್ಲಾ ಸೇರಿ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು 2020ರಲ್ಲಿ ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುತ್ತಾರೆ.
ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿ ಸನ್ಮಾನಗೊಂಡ ಇವರಿಗೆ “ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ”, “ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ”, “ಸಾಹಿತ್ಯ ರತ್ನ ಪ್ರಶಸ್ತಿ”, “ಸಾಹಿತ್ಯ ಗಂಗಾ ಪ್ರಶಸ್ತಿ” ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.