ಬೆಳಗಾವಿ : ಬೆಳಗಾವಿಯ ಘಟಪ್ರಭಾ ಕರ್ನಾಟಕ ಆರೋಗ್ಯ ಧಾಮದಲ್ಲಿ ಇಲ್ಲಿನ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 02 ಜುಲೈ 2025ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಆರೋಗ್ಯ ಅಧಿಕಾರಿ ಡಾ. ಸ್ವಾತಿ ಘನಶ್ಯಾಮ ವೈದ್ಯರು ಮಾತನಾಡಿ “ನಮ್ಮ ಸಂಸ್ಥೆಯ ಹಿರಿಯರ ಸದುದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ತುಂಬ ಕಷ್ಟಪಟ್ಟು ಕರ್ನಾಟಕ ಆರೋಗ್ಯಧಾಮ ಆಸ್ಪತ್ರೆ ಕಟ್ಟಿ ಬೆಳೆಸಿದ್ದಾರೆ. ಗ್ರಾಮೀಣ ಬಡವರಿಗೆ ಆಧುನಿಕ ವೈದ್ಯಕೀಯ ಸೌಲಭ್ಯ ಕೈಗೆಟಕುವ ದರದಲ್ಲಿ ದೊರೆಯಬೇಕೆಂಬ ಮಹದಾಸೆಯನ್ನು ಸಾಕಾರ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಪದ್ಮಭೂಷಣ ಡಾ. ಹರ್ಡೀಕರ ಇವರ ಪ್ರಭಾವದಿಂದ ನಮ್ಮ ಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಆದರ್ಶದೊಂದಿಗೆ ನಡೆಯುವ ಈ ಆರೋಗ್ಯ ಧಾಮದಲ್ಲಿ ಕರಾವಳಿಯ ಗಂಡುಕಲೆಯಾದ ಯಕ್ಷಗಾನ ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲೂ ಜನಪ್ರಿಯವಾಗಿದೆ. ಹಾಗೆ ಯಕ್ಷಗಾನ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್ ಇವರ ಸಹಕಾರದಿಂದ ನಮ್ಮ ಆರೋಗ್ಯ ಧಾಮದಲ್ಲಿ ಇಲ್ಲಿನ ಶಾಲಾ ಮಕ್ಕಳಿಗೆ ಹಾಗೂ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ, ಯಕ್ಷಗಾನ ತರಬೇತಿ ನಡೆಸಲು ತುಂಬಾ ಸಂತೋಷವಾಗುತ್ತಿದೆ” ಎಂದರು.
ವೇದಿಕೆಯಲ್ಲಿ ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾದ ಕೆ. ಮೋಹನ್, ಸಂಪನ್ಮೂಲ ವ್ಯಕ್ತಿಯಾದ ಡಾ. ಪ್ರೀತಿ ಕೆ. ಮೋಹನ್, ಯಕ್ಷಾಂಗಣ ಟ್ರಸ್ಟ್ ಇದರ ಟ್ರಸ್ಟೀಯಾದ ವೀಣಾ ಕೆ. ಮೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಕ್ಷಗುರು ಪ್ರಿಯಾಂಕ ಕೆ. ಮೋಹನ್ ನಿರೂಪಿಸಿ, ವೀಣಾ ಕೆ. ಮೋಹನ್ ವಂದಿಸಿದರು. ನಂತರ ಯಕ್ಷಗಾನದ ಬಗ್ಗೆ ಯಕ್ಷಗುರು ಪ್ರಿಯಾಂಕ ಕೆ. ಮೋಹನ್ ಪರಿಚಯಿಸಿದರು. ನಂತರ ತರಬೇತಿ ಪ್ರಾರಂಭವಾಯಿತು.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಊರಿನಲ್ಲಿ ಅದೆಷ್ಟೋ ವರ್ಷದಿಂದ ಬಡವರ ಸಂಜೀವಿನಿಯಾಗಿ ಕೆಲಸ ಮಾಡುತ್ತಿರುವ ಕೆ.ಎಚ್.ಐ (ಕರ್ನಾಟಕ ಹೆಲ್ತ್ ಇನ್ಸ್ಟಿಟ್ಯೂಟ್) ಆಸ್ಪತ್ರೆ ಅಂದರೆ ಕರ್ನಾಟಕ ಆರೋಗ್ಯ ಧಾಮ ರೋಗಿಗಳ ಆಶಾಕಿರಣವಾಗಿದೆ. 1935ರಲ್ಲಿ ಪ್ರಾರಂಭವಾದ ಈ ಪ್ರಸಿದ್ಧ ಆಸ್ಪತ್ರೆಗೆ ಡಾ. ಮಾಧವರಾವ್ ವೈದ್ಯ ಹಾಗೂ ಅವರ ಧರ್ಮಪತ್ನಿ ಸೌ. ವತ್ಸಲಾ ಬಾಯಿಯವರ ಕೊಡುಗೆ ಅಪಾರವಾಗಿದೆ. ಅವರ ನೆನಪಿನೊಂದಿಗೆ ವೈದ್ಯ ಕುಟುಂಬದವರು ಈ ಆಸ್ಪತ್ರೆಯನ್ನು ಮುಂದುವರಿಸಿಕೊಂಡು ಬಂದು ಅದೆಷ್ಟೋ ಬಡರೋಗಿಗಳ ಆಶಾಕಿರಣವಾಗಿದೆ. ಈಗ ಅವರ ಕುಟುಂಬದ ಡಾ. ಸ್ವಾತಿ ಘನಶ್ಯಾಮ ವೈದ್ಯರು ಮುಖ್ಯ ಆರೋಗ್ಯ ಅಧಿಕಾರಿಯಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಕರ್ನಾಟಕ ಆರೋಗ್ಯ ಧಾಮದಲ್ಲಿ, ಶಾಲೆಗಳು, ನರ್ಸಿಂಗ್ ಕಾಲೇಜ್, ಎಲ್ಲಾ ಸೌಕರ್ಯವಿರುವ ಸುಸಜ್ಜಿತ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಗೋ ಶಾಲೆ, ಯೋಗಧಾಮ, ಸೇವಾದಳ ಘಟಕ ಹೀಗೆ ಹಲವಾರು ವ್ಯವಸ್ಥೆಗಳನ್ನು ತಮ್ಮ 200 ಎಕರೆ ಜಾಗದಲ್ಲಿ ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಈಗ ಈ ಆರೋಗ್ಯಧಾಮ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ. ಯಕ್ಷಗಾನ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್‌ರ ಆಸಕ್ತಿಯ ಮೇರೆಗೆ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಇವರ ಸಂಯೋಜನೆಯಲ್ಲಿ ಯಕ್ಷಗಾನ ತರಗತಿಯನ್ನು ಪ್ರಾರಂಭಿಸಲಾದೆ.

