ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ತಾಲೂಕು ಇದರ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಮತ್ತು ಫಣಿಗಿರಿ ಪ್ರಶಸ್ತಿ ಪ್ರದಾನ -2025 ಕಾರ್ಯಕ್ರಮವನ್ನು ದಿನಾಂಕ 06 ಜುಲೈ 2025ರಂದು ಬೆಳಗ್ಗೆ ಗಂಟೆ 9-30ಕ್ಕೆ ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟನೆ ಮಾಡಲಿದ್ದು, ಹಿರಿಯ ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ‘ಫಣಿಗಿರಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಶ್ರೀಧರ ಡಿ.ಯಸ್. ಕಿನ್ನಿಗೋಳಿ ಮತ್ತು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರಿಂದ ಪ್ರಸಂಗ ಕರ್ತರಿಗೆ ಯಕ್ಷಗಾನ ಪ್ರಸಂಗ ರಚನೆಯ ಮಾರ್ಗದರ್ಶನ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಭಾಗವಹಿಸಲಿರುವರು 9448344380 ಸಂಖ್ಯೆಯನ್ನು ಸಂಪರ್ಕಿಸಿರಿ.
ಯಕ್ಷಗಾನ ಪ್ರಸಂಗ ರಚನಾ ಶಿಬಿರಗಳ ಅವಶ್ಯಕತೆ ಶಾಸ್ತ್ರಬದ್ಧ ವಿನ್ಯಾಸದ ಅಗತ್ಯತೆ :
ಇಂದಿನ ಯಕ್ಷಗಾನ ಪ್ರಪಂಚದಲ್ಲಿ ನವೀನತೆ ಮತ್ತು ಪ್ರಾಕೃತಿಕತೆಯ ಸಮನ್ವಯವನ್ನು ಸಾಧಿಸಲು, ಪ್ರವೃತ್ತಿಯ ಶುದ್ಧತೆಯನ್ನು ಕಾಯ್ದುಕೊಳ್ಳಲು ಮತ್ತು ಯುವ ಪೀಳಿಗೆಗೆ ಶಾಸ್ತ್ರಬದ್ಧ ಶಿಕ್ಷಣ ಒದಗಿಸಲು ಇಂತಹ ರಚನಾ ಶಿಬಿರಗಳು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು” ಆಯೋಜಿಸುತ್ತಿರುವ ಯಕ್ಷಗಾನ ಪ್ರಸಂಗ ರಚನಾ ಶಿಬಿರ ಅರ್ಥಪೂರ್ಣವೂ, ಅವಶ್ಯಕವೂ ಆಗಿದೆ. ಯಕ್ಷಗಾನ ಕೇವಲ ಒಂದು ಕಲೆಯ ಮಾಧ್ಯಮವಲ್ಲ. ಇದು ಶ್ರವಣ, ದೃಶ್ಯ, ಶಿಲ್ಪ, ನಾಟಕ, ಸಂಗೀತ, ನೃತ್ಯ, ಕಾವ್ಯ ಇವುಗಳ ಸಮನ್ವಯವಾಗಿದೆ. ಇಂಥ ಸರ್ವಕಲಾಸಾಮೂಹಿಕ ರೂಪದಲ್ಲಿ ಪ್ರಸಂಗ ರಚನೆಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಇಂದಿನ ಪರಿಕಲ್ಪನಾ ಯುಗದಲ್ಲಿ ಯುವ ಕವಿಗಳಿಂದಾಗಿ ಹೊಸ ಕಥಾಹಂದರಗಳು, ನವೀನ ಭಾವವ್ಯಕ್ತಿಗಳು, ಹೊಸ ಸಂಗೀತಾನ್ವಯಗಳು ಸಾಧ್ಯವಾಗುತ್ತಿವೆ. ಆದರೆ ಈ ಎಲ್ಲವೂ ಶಾಸ್ತ್ರಬದ್ಧ ಶಿಸ್ತಿಗೆ ಒಳಪಟ್ಟಿರಬೇಕು ಎಂಬುದನ್ನು ಮರೆಯಲಾಗದು.
1. #ಛಂದೋಬದ್ಧ ಪದರಚನೆ ಶ್ರವ್ಯತೆಯ ಶಿಲ್ಪ
“ಛಂದಸಾಂ ಲೋಪ ಇತ್ಯೇಷ ಯಥಾ ನಾಟಕೇ ಪ್ರಯೋಜಾವಿತಃ।”
(ನಾಟಕಶಾಸ್ತ್ರ)
ಯಕ್ಷಗಾನದಲ್ಲಿ ಹಾಡು ಕೇವಲ ಗಾನವಲ್ಲ; ಅದು ಭಾಷಿಕ ಅಭಿವ್ಯಕ್ತಿಯ ಶಕ್ತಿಯಾಗಿದೆ. ಛಂದೋಬದ್ಧತೆ ಪದಗಳಿಗೆ ಶ್ರವ್ಯರೂಪ ನೀಡುತ್ತದೆ. ಈ ಶಿಬಿರಗಳಲ್ಲಿ ಯುವ ಕವಿಗಳು ಛಂದಸ್ಸುಗಳನ್ನು ಹೇಗೆ ಬಳಸಬೇಕೆಂಬುದನ್ನು ಕಲಿಯುಬಹುದು.
2. #ಕಾಲ ತಾಳ ರಸ ಪ್ರಸಂಗದಲ್ಲಿ ಸೂಕ್ಷ್ಮ ಅನುಪಾತ
ಯಕ್ಷಗಾನದಲ್ಲಿ ಪ್ರತಿ ಪಾತ್ರಕ್ಕು ತನ್ನದೇ ಆದ ತಾಳಮಿತಿಯ ವಿನ್ಯಾಸ ಇರುತ್ತದೆ. ಉದಾಹರಣೆಗೆ : ಶೃಂಗಾರ ರಸ: ರಾಗ – ಶೃಂಗಾರರಸ- ಮೋಹನ, ಅಭೇರಿ, ತಾಳ ತ್ರಿವುಡೆ,ಅಷ್ಟ…., ವೀರ ರಸ: ರಾಗ ಕೇದಾರ ಗೌಳ, ತಾಳ – ಧ್ರುವ
ಕರುಣಾ ರಸ: ರಾಗ – ಕರುಣಾರಸ- ಸಿಂದುಬೈರವಿ, ಬೈರವಿ,ಶಿವರಂಜಿನಿ, ತಾಳ ಚೌತಾಳ ಮತ್ತು ಇಡೀ ಕಥಾಬಾಗಕ್ಕೆ ಒಂದು ಕಾಲ -ನಡೆ ಇರುತ್ತದೆ ಅದರ ಪ್ರಕಾರ ರಾಗ ಬಳಕೆ ಬೇಕಾಗುತ್ತದೆ ಮತ್ತು ಬಳಸುವಿಕೆಯ ಶಿಸ್ತನ್ನು ರೂಪಿಸಬೇಕಿದೆ .
“ರಸಾನುಸಾರ್ಯಾ ಯತ್ರ ಗೀತೆ ಪ್ರಸ್ತುತಿ ಶೋಭತೇ।” (ಸಂಗೀತರತ್ನಾಕರ)
ಈ ಮಾರ್ಗದರ್ಶನವು ಪ್ರಸಂಗದ ಭಾವಮೂಲದ ಶುದ್ಧತೆಯನ್ನು ಕಾಪಾಡಲು ಸಹಾಯಕವಾಗುತ್ತದೆ.
3. #ಪಾತ್ರಾನುಸಾರ_ಶೈಲಿ_ಧ್ವನಿತತ್ವದ_ಅಧ್ಯಯನ.
ಹುಣಸೆಮನೆ ರಾಮಭಟ್ಟರ ಪ್ರಕಾರ, “ಪಾತ್ರಧರ್ಮಾನುಸಾರ ಪದರಚನೆಯೇ ಯಕ್ಷಗಾನ ಕಾವ್ಯದ ಮೂಲತತ್ವ”. ಧರ್ಮರಾಜನಿಗೆ ಸುಭಾಷಿತವಾದ ಗಂಭೀರ ಪದಗಳು ಬೇಕಾದರೆ, ನಾರದನಿಗೆ ಚಾತುರ್ಯವಂತದ ಹಾಸ್ಯಪೂರ್ಣ ವ್ಯಂಗ್ಯ ಶೈಲಿ ಬೇಕು. ಈ ವಿಭಜನೆಗೆ ಶಾಸ್ತ್ರೀಯ ವಿನ್ಯಾಸ ಕಲಿಯುವ ಅಗತ್ಯವಿದೆ.
4. #ಕಥಾ_ಶಿಲ್ಪದ_ಶಿಸ್ತು_ನಾಟಕಧರ್ಮ
“ಪ್ರತಿಷ್ಠಾನಂ ಕಥಾಸೂತ್ರಂ ನಾಟಕಸ್ಯ ಶರೀರಕಂ।”
(ನಾಟಕಶಾಸ್ತ್ರ)
ಕಥಾ ಹಂದರ, ಪ್ರಾಸಂಗಿಕ ದೃಶ್ಯಗಳ ನಿರೂಪಣೆ, ಪಾತ್ರಗಳ ಒಳಚಿಂತನೆ – ಇವೆಲ್ಲವನ್ನೂ ಈ ಶಿಬಿರಗಳಲ್ಲಿ ಕಲಿಸಬಹುದಾಗಿದೆ. ಸಂದರ್ಭಾನುಸಾರ ಮತ್ತು ಕಥೆಯ ಸರಾಗ ನಡೆಗೆ ದೃಶ್ಯವಿಭಾಗ ಬುದ್ಧಿವಂತಿಕೆಯೊಂದಿಗೆ ರೂಪಿಸಬೇಕಾದುದು ಯಕ್ಷಗಾನದ ಕೌಶಲ ಮತ್ತು ತಂತ್ರಜ್ಞಾನದ ಭಾಗವಾಗಿದೆ.
5. #ಇಂತಹ ಶಿಬಿರಗಳ ಅನಿವಾರ್ಯತೆ #ಸಾಂಸ್ಕೃತಿಕ ಶ್ರದ್ಧಾ ಮತ್ತು ಹಿರಿಮೆಯ ಸುಸ್ಥಿರತೆ
ಇಂದಿನ ಜಾಹೀರಾತುಪ್ರಜ್ಞೆಯ ಯುಗದಲ್ಲಿ ಯಕ್ಷಗಾನ ತನ್ನ ಮೂಲತತ್ವವನ್ನು ಉಳಿಸಿಕೊಳ್ಳಬೇಕಾದ ಕಠಿಣ ಸವಾಲಿನಲ್ಲಿದೆ. ಇಂತಹ ಶಾಸ್ತ್ರೀಯ ಶಿಬಿರಗಳು ಕಲಾವಿದರು ನೃತ್ಯ-ಗಾನ-ಭಾವಗಳ ಸಮನ್ವಯವನ್ನು ಅರಿತು ಕಾರ್ಯಪಟುಗಳಾಗಿ ಬೆಳೆಸಲು ಸಹಕಾರಿ.ಯಕ್ಷಗಾನದ ಶಾಸ್ತ್ರೀಯ ಚೌಕಟ್ಟನ್ನು ಉಳಿಸಿಕೊಳ್ಳಲು ಮತ್ತು ಅತಿಯಾದ ರೂಪಾಂತರದಿಂದ ರಕ್ಷಿಕೊಳ್ಳಲು ಇದು ಸಹಕಾರಿಯಾಗಿದೆ.
“ಸಾಹಿತ್ಯಂ ಸಂಯಮಾತ್ಮಾನಂ ಶ್ರುತಿ-ಸ್ಮೃತಿ-ನಾಟಕತ್ರಯಂ” ಎಂಬಂತೆ, ಇಂತಹ ಶಿಬಿರಗಳು ತಾತ್ವಿಕತೆಯ ಪುನರುಜ್ಜೀವನಕ್ಕೆ ನಾಂದಿ ಹಾಡಿದಂತೆ.
#ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿರುವ ಈ ಶಿಬಿರವು ಕೇವಲ ಪಾಠಮಾಲೆಯಲ್ಲ; ಇದು ಭವಿಷ್ಯದ ನಟನೆ, ಹಾಡು, ಕಾವ್ಯವನ್ನು ರೂಪಿಸುವ ಲಾಬೋರೇಟರಿ ಎಂದು ಹೇಳಬಹುದು. ಇಂತಹ ಶಿಬಿರಗಳು ಯಕ್ಷಗಾನವನ್ನು ಉಳಿಸುವುದು ಮಾತ್ರವಲ್ಲ ಅದನ್ನು ನವೀಕರಿಸುತ್ತವೆ.