ದಿನಾಂಕ 22.6. 2025 ಭಾನುವಾರದಂದು ಉಡುಪಿಯ ಎಂ.ಜಿ.ಎಂ.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗ ಧನ ಸಂಸ್ಥೆಯ 36ನೆಯ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು. ತದನಂತರ ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ರಾಗರತ್ನಮಾಲಿಕೆ ಸಂಗೀತ ಸರಣಿಯ 38ನೆಯ ಕಾರ್ಯಕ್ರಮ ನಡೆಯಿತು. ಪ್ರಧಾನ ಕಛೇರಿಯ ಪೂರ್ವದಲ್ಲಿ ಶ್ರೀಮತಿ ಶ್ರುತಿ ಗುರುಪ್ರಸಾದ್ ಅವರು “ಪೂರ್ಣಮದ: ಪೂರ್ಣಮಿದಂ” ಪ್ರಾರ್ಥನೆಯನ್ನು ‘ಭಟಿಯಾರ್ ಹಾಗೂ ಕಲಾವತಿ’ ರಾಗಗಳಲ್ಲಿ ಅತ್ಯಂತ ಮಧುರವಾಗಿ ಹಾಡಿ ಮುಂದಿನ ಗಾಯನಕ್ಕೆ ಶುಭ ಕೋರಿದರು. ಕಛೇರಿಯನ್ನು ನೀಡಿದವರು ಚೆನ್ನೈನ ಶ್ರೀ ವಿವೇಕ್ ಸದಾಶಿವಂ. ನಗುಮುಖ, ಗತ್ತಿನಿಂದ ಕೂಡಿದ ಅಂತೆಯೇ ಮೂರು ಕಾಲಗಳಲ್ಲಿ ಸಂಚರಿಸಬಲ್ಲ ಶಾರೀರ. ಉತ್ತಮವಾದ ಧ್ವನಿ ಸಂಸ್ಕಾರ! ಹಿಂದಿನ ಪರಂಪರೆಯ ಕೊಡುಗೆಗಳನ್ನು ಹಾಗೆಯೇ ಸಾಂಪ್ರದಾಯಿಕ ಶೈಲಿಯಲ್ಲಿ ಸರಳವಾಗಿ ನೀಡಲಾದ ಕಾರ್ಯಕ್ರಮ ಇದಾಗಿತ್ತು. ಭೈರವಿ ಅಟ್ಟತಾಳ ವರ್ಣದೊಂದಿಗೆ ಗಂಭೀರವಾಗಿ ಪ್ರಾರಂಭಗೊಂಡ ಕಛೇರಿ ಕೊನೆಯವರೆಗೂ ಅದೇ ಬಿಗುತನವನ್ನು ಕಾದುಕೊಂಡಿತು.
ಸೌರಾಷ್ಟ್ರ( ಎನ್ನಾಡು) ಸಾಮ( ಅನ್ನಪೂರ್ಣೆ)ಧವಳಾಂಬರಿ (ಶೃಂಗಾರಮಿರ) ಕುಂತಲವರಾಳಿ (ಭೋಗಿಂದ್ರಶಾಹಿನಂ) ಬೃಂದಾವನಿ (ಬೃಂದಾವನವೇ ಮಂದಿರ) ರಾಗಗಳ ಪ್ರಸ್ತುತಿಗಳು ಗಾಯಕರ ಮನೋಧರ್ಮವನ್ನು ಬಿಂಬಿಸುವ ಭಾವಪೂರ್ಣವಾದ ಶ್ಲೋಕಗಳನ್ನು ಅಥವಾ ಮುದ ನೀಡುವ ಚುರುಕಾದ ಸ್ವರ ಕಲ್ಪನೆಗಳನ್ನು ಒಳಗೊಂಡಿದ್ದು ಕಛೇರಿಯನ್ನು ಚುರುಕಾಗಿ ಮುನ್ನಡೆಸಿದವು. ಸುಖವಾಗಿ ಸಾಗಿದ ಆನಂದ ಭೈರವಿ ‘ರಾಮನಾಮ ಪಾಯಸ’ ಕ್ಕೆ ರಾಗ ವಿಸ್ತಾರದ ನಿಲುಗಡೆಯ ಪೂರ್ವದಲ್ಲಿ ಸಮಯೋಚಿತವಾಗಿ ಮೂಡಿಬಂದ ಕಾಕಲಿ ನಿಷಾದ ಮತ್ತು ಅಂತರಗಾಂಧಾರಗಳ ಛಾಯೆ ಗುಣಗ್ರಾಹಿ ಶ್ರೋತ್ರಗಳ ಮನೆಗೆದ್ದುಕೊಂಡಿತು. ಮುಂದೆ ಕಲ್ಪನಾ ಸ್ವರಗಳೂ ಈ ರಚನೆಯ ಸೊಗಸಿಗೆ ಪೂರಕವಾಗಿ ಮೂಡಿಬಂದವು. ಪ್ರಧಾನ ರಾಗವಾಗಿ ಶಂಕರಾಭರಣ (ಎಂದುಕುಪೆದ್ದಲ) ಸೌಮ್ಯವಾದ ನದಿಯಂತೆ ಗಮಕಯುಕ್ತವಾಗಿ ಸಾಗಿದ ಆಲಾಪನೆಯಲ್ಲಿ ಹಿತಮಿತವಾಗಿ ಬೆರೆಸಲಾದ ತ್ವರಿತಗತಿಯ “ಅ”ಕಾರಗಳು ರಾಗದ ಸೌಂದರ್ಯವನ್ನು ಹೆಚ್ಚಿಸಿದವು. ಕೃತಿ ನಿರೂಪಣೆ , ನೆರವಲ್, ಆಸಕ್ತಿ ಮೂಡಿಸಿದ ಸ್ವರವೆನಿಕೆಗಳು ಮತ್ತು ಮುಕ್ತಾಯಗಳು ಶೋತ್ರುಗಳ ಮೆಚ್ಚುಗೆಯನ್ನು ಪಡೆದವು. ಇಡೀ ಕಛೇರಿಯಲ್ಲಿ ಗಾಯಕರಿಗೆ ಸರಿಸಾಟಿಯಾಗಿ ವಿದ್ವತ್ಪೂರ್ಣವಾದ ಬಿಲ್ಲುಗಾರಿಕೆಯನ್ನು ತೋರಿದ ಶ್ರೀ ಬಿ.ಕೆ. ರಘು, ಬೆಂಗಳೂರು ನಮ್ಮ ರಸಿಕರ ಮುಕ್ತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೆ.ಯು.ಜಯಚಂದ್ರ ರಾವ್, ಬೆಂಗಳೂರು ( ಮೃದಂಗ) ಅಂತೆಯೇ ಶ್ರೀ ಬಾಲಕೃಷ್ಣ ಹೊಸಮನೆ, ಇವರಿಬ್ಬರೂ ತೋರಿದ ಅದ್ಭುತವಾದ ಲಯ ಪ್ರದರ್ಶನ ತಮ್ಮದೇ ಆದ ಲೆಕ್ಕಾಚಾರದ ‘ಕುರೈಪ್ಪು’ಗಳೊಂದಿಗೆ ರಂಜಿಸುವಲ್ಲಿ ಯಶಸ್ವಿಯಾಗಿದೆ. ಜಾನಪದ ಭಜನೆ ಶೈಲಿಯಲ್ಲಿ ಹಾಡಲಾದ ಕಾಪಿ ರಾಗದ (ಕಲಿಲೋ ಹರಿ ಸ್ಮರಣವೋ ಕಟೆ) ಪ್ರಸ್ತುತಿ ಮತ್ತು ಗಂಭೀರವಾಣಿ ರಾಗದ ತಿಲ್ಲಾನದೊಂದಿಗೆ ಕಚೇರಿ ಸಂಪನ್ನಗೊಂಡಿತು. (ಈ ಗಾಯಕರು ಸ್ವರ ಸ್ಥಾನಗಳ ನಿಖರತೆಯ ಕಡೆಗೆ ಇನ್ನೂ ಹೆಚ್ಚು ಗಮನ ಕೂಡ ಕೊಡಬಹುದಿತ್ತೋ ಅನಿಸಿತು) ಕಛೇರಿಯ ಸಹಪ್ರಾಯೋಜಕತ್ವವನ್ನು ಶ್ರೀಮತಿ ಶಂಕರಿ ಬಿ.ಭಟ್ ಉಪ್ಪಂಗಳ ಇವರು ವಹಿಸಿಕೊಂಡಿದ್ದರು. ಈ ಸಂಗೀತ ಕಛೇರಿಗೆ ಉಡುಪಿಯ ನೂತನ ರವೀಂದ್ರ ಮಂಟಪವು ತುಂಬಿದ್ದಂತೂ ನಿಜ.
– ವಿದುಷಿ ಸರೋಜಾ ಆರ್ ಆಚಾರ್ಯ, ಉಡುಪಿ.