ಸುರತ್ಕಲ್ : ಸುರತ್ಕಲ್ ಇಲ್ಲಿನ ಗೋವಿಂದದಾಸ ಕಾಲೇಜಿನ ಪಿ. ಯು. ಸಿ. ವಿಭಾಗದ ವತಿಯಿಂದ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 05 ಜುಲೈ 2025ನೇ ಶನಿವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ “ಮರಕ್ಕೆ ಬೇರಿನಲ್ಲಿ ಆ ಜೀವ ಶಕ್ತಿ ಹೇಗೋ ಹಾಗೆಯೇ ಮನುಷ್ಯರ ಧನಾತ್ಮಕ ಆಲೋಚನಾ ಶಕ್ತಿಯಲ್ಲಿ ಜೀವಶಕ್ತಿ ಇದೆ. ಸಮುದ್ರದ ಆಳದಲ್ಲಿ ಮುತ್ತುರತ್ನಗಳಿರುವಂತೆ ಸುಪ್ತ ಮನಸ್ಸಿನಲ್ಲಿ ಅದಮ್ಯ ಶಕ್ತಿ ಇದೆ. ಅದನ್ನರಿತು ಉತ್ಸಾಹ ತುಂಬಿದ ಜೀವನದೊಂದಿಗೆ ಸಾಹಿತ್ಯಾಭಿರುಚಿಯನ್ನು ಬೆಳೆಸಿರಿ. ಓದುವ ಹವ್ಯಾಸದೊಂದಿಗೆ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಶ್ರೇಯಸ್ಸಾಗಲಿ” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀ ಪಿ. ಮಾತನಾಡಿ “ಸಾಹಿತ್ಯ-ಬದುಕಿನ ಉಸಿರು, ಅದ್ದರಿಂದ ಕವಿ ಹೃದಯವುಳ್ಳ ವಿದ್ಯಾರ್ಥಿಗಳೇ, ತಮ್ಮ ಬರವಣಿಗೆಯನ್ನು ಸಾಹಿತ್ಯ ಸಂಘದ ಮೂಲಕ ಪ್ರಾರಂಭಿಸಿ ಯಶಸ್ಸನ್ನು ಗಳಿಸಿ” ಎಂದು ನುಡಿದರು.
ಉಪಪ್ರಾಂಶುಪಾಲೆ ಸುನೀತಾ ಕೆ., ವಿದ್ಯಾರ್ಥಿ ಕ್ಷೇಮಪಾಲ ವೆಂಕಟರಮಣ, ಸಾಹಿತ್ಯ ಸಂಘಸ ಸಂಯೋಜಕಿ ಜಯಂತಿ ಅಮೀನ್, ವಿದ್ಯಾರ್ಥಿನಿ ಕಾರ್ಯದರ್ಶಿ ಶರಣ್ಯ ಪ್ರಮೋದ್ ಉಪಸ್ಥಿತರಿದ್ದರು.
ಪುಸ್ತಕ ಪ್ರೀತಿ ಕಾರ್ಯಕ್ರಮದಡಿ ವಿದ್ಯಾರ್ಥಿನಿ ರಮ್ಯಾ ‘ಕರುಣಾಳು ಬಾ ಬೆಳಕೆ’ ಎಂಬ ಪುಸ್ತಕವನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಆದ್ಯಾ ಸ್ವಾಗತಿಸಿ, ಕಾವೇರಿ ಗಣ್ಯರನ್ನು ಪರಿಚಯಿಸಿ . ಶಿಖಾ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.