Subscribe to Updates

    Get the latest creative news from FooBar about art, design and business.

    What's Hot

    ಹೊಯಿಗೆಬಜಾರಿನಲ್ಲಿ ಮಾಧವ ತಿಂಗಳಾಯ ಜನ್ಮ ದಿನದ ನೆನಪು ಕಾರ್ಯಕ್ರಮ

    July 7, 2025

    ಬೆಂಗಳೂರಿನ ರಾಮಕೃಷ್ಣ ಮಠದಲ್ಲಿ ‘ರಾಮಕೃಷ್ಣ ಸಂಗೀತ ಸೌರಭ’ | ಜುಲೈ 11, 12 ಮತ್ತು 13

    July 7, 2025

    ಗೋವಿಂದದಾಸ ಪಿ. ಯು. ಸಿ. ಕಾಲೇಜಿನಲ್ಲಿ ಉದ್ಘಾಟನೆಗೊಂಡ ಸಾಹಿತ್ಯ ಸಂಘ

    July 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೇಖನ | ಐತುಮನೆ ತಾಳಮದ್ದಲೆ-ಆಷಾಢ ಏಕಾದಶಿಯ ಆಧ್ಯಾತ್ಮ ಮೇಳ
    Article

    ಲೇಖನ | ಐತುಮನೆ ತಾಳಮದ್ದಲೆ-ಆಷಾಢ ಏಕಾದಶಿಯ ಆಧ್ಯಾತ್ಮ ಮೇಳ

    July 7, 2025No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಗರಗಳ ಧಾವಂತದಿಂದ ದೂರವಿರುವ ಪುಟ್ಟ ಮಲೆನಾಡಿನ ಆ ಹಳ್ಳಿಯಲ್ಲಿ ಇರುವುದು ಕೇವಲ ಕೆಲವು ಮನೆಗಳು. ಜನಸಂಖ್ಯೆ ವಿರಳವಾದರೂ, ಇಲ್ಲಿನ ಜನರ ಸಾಂಸ್ಕೃತಿಕ ಚಟುವಟಿಕೆಗಳತ್ತ ಮನಸ್ಸು ಯಾವಾಗಲೂ ಹರಿಯುತ್ತಿರುವುದು ವಿಶಿಷ್ಟವಾಗಿದೆ. ಕೃಷಿಯೇ ಜೀವಾವಲಂಬನೆಯಾದ ಈ ಹಳ್ಳಿಯ ಜನರಿಗೆ ಯಕ್ಷಗಾನವೆಂದರೆ ಅತೀವಾಸಕ್ತಿ. ಅದಿಲ್ಲದ ಬದುಕನ್ನು ಊಹಿಸಲು ಸಾಧ್ಯವಿಲ್ಲವೆಂದರೆ ಅತಿಶಯವಲ್ಲ. ಇಂತಹ ಮನಸ್ಥಿತಿಯಲ್ಲಿ ಮಲೆನಾಡಿಗೆ ಅನ್ವಯವಾಗಿ ವರ್ಷದಲ್ಲಿ ನಾಲ್ಕು ತಿಂಗಳುಗಳ ಕಾಲ ಸುರಿಯುವ ನಿರಂತರ ಮಳೆ, ಇವರನ್ನು ಪ್ರೀತಿಯ ಕಲಾ ಚಟುವಟಿಗಳಿಂದ ದೂರ ಇಡುತ್ತದೆ. ಆ ಸಮಯದಲ್ಲಿ ಪರ್ಯಾಯವಾಗಿ ಮನೆಯಲ್ಲಿ ನಡೆಸಬಹುದಾದ ಕಲಾ ಚಟುವಟಿಕೆಗಳತ್ತ ಇವರ ಮುಖವಾಗುವುದು ಸಹಜ. ಈ ಹಿನ್ನಲೆಯಲ್ಲಿ ಯಕ್ಷಗಾನದ ಇನ್ನೊಂದು ಶಾಖೆಯಾದ ತಾಳಮದ್ದಲೆ ಮನೆಯೊಳಗಡೆ ಕಥಾಶ್ರವಣ ರೂಪದಲ್ಲಿ ಆರಂಭವಾಗಿರಬಹುದು ಎಂದು ಊಹಿಸಬಹುದು. ಅದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಇರುವ ಐತುಮನೆ ಪುಟ್ಟ ಕುಟುಂಬ. ಇಲ್ಲಿ ನಡೆಯುವ ಮನೆಯ ತಾಳಮದ್ದಲೆಗೆ ಭವ್ಯ ಇತಿಹಾಸವಿದೆ. ಹಲವು ದಶಕಗಳನ್ನು ದಾಟಿ ಈ ತಾಳಮದ್ದಲೆಯು ಸುಮಾರು ಎರಡು ಶತಮಾನಗಳಿಂದ ಪ್ರತಿ ವರ್ಷ ಆಷಾಢ ಮಾಸದ ಪ್ರಥಮ ಏಕಾದಶಿಯಂದು ಸಂಪನ್ನಗೊಳ್ಳುತ್ತಿದೆ. ಒಂದು ಕುಟುಂಬ ಈ ಪರಂಪರೆಯನ್ನು ಶ್ರದ್ಧೆಯಿಂದ ಇಂದಿಗೂ ಸಾಗಿಸುತ್ತಿದ್ದು, ಮನೆಯ ಮಂದಿರವನ್ನೇ ಕಲಾಮಂದಿರವನ್ನಾಗಿ ರೂಪಿಸಿಕೊಂಡಿರುವ ಅಪೂರ್ವ ಉದಾಹರಣೆ ಇದಾಗಿದೆ.

    ತಾಳಮದ್ದಲೆಗೆ ‘ಜಾಗರ’ ಎಂಬ ಅಭಿದಾನವಿದೆ. ಇದಕ್ಕೆ ಸಮಾನಾರ್ಥಕವಾಗಿ ‘ಜಾಗರಣೆ’ ಎಂಬ ಪದವೂ ಬಳಕೆಯಲ್ಲಿದೆ. ಈ ‘ಜಾಗರ’ ಅಥವಾ ‘ಜಾಗರಣೆ’ ಎಂಬ ಶಬ್ದಕ್ಕೆ ರಾತ್ರಿಯೆಲ್ಲಾ ಎಚ್ಚರವಿದ್ದು, ಪೂಜೆ ಅಥವಾ ಸಂಕೀರ್ತನೆ ನಡೆಸುವುದು ಎಂಬ ಅರ್ಥವಿದೆ. ಈ ಶಬ್ದಾರ್ಥಕ್ಕೆ ಅನ್ವರ್ಥವಾಗಿ ಐತುಮನೆ ತಾಳಮದ್ದಲೆ ನಡೆದು ಬರುತ್ತಿದೆ. ಪ್ರತಿ ವರ್ಷ ಆಷಾಢ ಮಾಸದ ಪ್ರಥಮ ಏಕಾದಶಿಯಂದು ನಡೆಯುವ ಕಾರ್ಯಕ್ರಮದಲ್ಲಿ ಸಂಜೆ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಗುತ್ತದೆ. ನಂತರ ಇಡೀ ರಾತ್ರಿ ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಭಕ್ತಿಯ ಆರಾಧನೆ ನಡೆಯುತ್ತದೆ. ಬೆಳಗಿನ ಜಾವ, ಮತ್ತೆ ಸತ್ಯನಾರಾಯಣ ದೇವರ ಉದ್ಯಾಪನೆಯೊಂದಿಗೆ ಈ ಕಾರ್ಯಕ್ರಮವು ಸಮಾಪ್ತಿಗೊಳ್ಳುತ್ತದೆ.

    ಹಲವಾರು ವರುಷಗಳಿಂದ ನಡೆಯುತ್ತಿರುವ ಈ ತಾಳಮದ್ದಲೆ ಕಾರ್ಯಕ್ರಮವು ನಿಖರವಾಗಿ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಸ್ಪಷ್ಟ ದಾಖಲೆ ಇಲ್ಲ. ಆ ಕಾಲದಲ್ಲಿ ದಾಖಲೆ ಇಡುವ ಪದ್ದತಿ ಇಲ್ಲದ ಕಾರಣದಿಂದ, ಅದರ ಆರಂಭಿಕ ವರುಷವನ್ನು ಅಧಿಕೃತವಾಗಿ ನಿರ್ಧರಿಸುವುದು ಕಷ್ಟ. ಆದರೆ ಅನುವಂಶಿಕ ಸಂಭ್ರಮದ ಆಚರಣೆ ರೂಪದಲ್ಲಿ ಈ ತಾಳಮದ್ದಲೆಯು ಕನಿಷ್ಠ ನಾಲ್ಕು ತಲೆಮಾರುಗಳಿಂದ ಪ್ರತಿ ವರ್ಷ ಆಷಾಢ ಮಾಸದ ಪ್ರಥಮ ಏಕಾದಶಿಯಂದು ನಿರಂತರವಾಗಿ ನಡೆಯುತ್ತಾ ಬಂದಿದೆ. ಮೊದಲು ಐತುಮನೆ ದೇವಪ್ಪಯ್ಯ, ಬಳಿಕ ಅವರ ಪುತ್ರ ಐತುಮನೆ ಮಂಜಯ್ಯ, ನಂತರ ಮಂಜಯ್ಯ ಅವರ ಪುತ್ರ ದೇವಪ್ಪಯ್ಯ ಈ ಸಂಪ್ರದಾಯವನ್ನು ಶ್ರದ್ಧೆಯಿಂದ ಮುಂದುವರೆಸಿದ್ದಾರೆ. ಇದೀಗ ಅವರ ಉತ್ತರಾಧಿಕಾರಿಗಳಿದ ಗಣಪತಿ ಐತುಮನೆ ಮತ್ತು ಅವರ ಸಹೋದರರು ಈ ಪರಂಪರೆಯನ್ನು ಕುಟುಂಬದ ಭಕ್ತಿಯ ಆಚರಣೆಯಾಗಿ ಉಳಿಸಿಕೊಂಡು, ಪ್ರೀತಿಯಿಂದ ಹಾಗೂ ಶ್ರದ್ಧೆಯಿಂದ ಸಾಗಿಸುತ್ತಿದ್ದಾರೆ.

    ಐತುಮನೆ ತಾಳಮದ್ದಲೆಯು ಕೆಲವೊಂದು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ಕುಟುಂಬವು ಕೇವಲ ತಾಳಮದ್ದಲೆಯನ್ನು ಆಯೋಜಿಸುವುದು ಮಾತ್ರವಲ್ಲದೇ ಸಮಾನ ಅವಕಾಶವನ್ನು ಹಲವರಿಗೆ ನೀಡುತ್ತಿದೆ. ಹಾಗೆ ನೋಡಿದರೆ ಕುಟುಂಬದಲ್ಲಿ ಸಾಕಷ್ಟು ಮಂದಿ ಕಲಾವಿದರಿದ್ದಾರೆ. ಅವರೆಲ್ಲ ಇಡೀ ರಾತ್ರಿ ಅರ್ಥವನ್ನು ಹೇಳುವ ಸಾಮಾರ್ಥ್ಯವನ್ನು ಹೊಂದಿದರೇ ಆಗಿದ್ದಾರೆ. ಆದರೆ ಈ ಕಾರ್ಯಕ್ರಮ ಕೇವಲ ಕುಟುಂಬದವರಿಗಾಗಿಯೇ ಮೀಸಲಾಗಿಲ್ಲ. ಏಕಾದಶಿಯ ಈ ತಾಳಮದ್ದಲೆಗೆ, ಕುಟುಂಬದ ಬಂಧುಬಾಂಧವರು, ಊರಿನವರು, ಪರವೂರಿನವರು, ಆಸಕ್ತರು ಆಗಮಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಯಾರಿಗೂ ಪ್ರತ್ಯೇಕ ಆಹ್ವಾನ ನೀಡುವ ಪದ್ಧತಿ ಇಲ್ಲ. ಯಾರಿಗೆ ಆಸಕ್ತಿ ಇದೆ, ಕಲಾ ಪ್ರೀತಿ ಇದೆ, ಅವರು ಸ್ವಯಂ ಆಗಿ ಆಗಮಿಸುತ್ತಾರೆ. ತಾಳಮದ್ದಲೆಯಲ್ಲಿ ಅರ್ಥ ಹೇಳುವ ಇಚ್ಛೆ ವ್ಯಕ್ತಪಡಿಸಿದರೆ ಅವರಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ. ಈ ಮೂಲಕ, ಈ ತಾಳಮದ್ದಲೆ ಕಲಾವಿದರನ್ನು ಉತ್ತೇಜಿಸುವ ಹಾಗೂ ಬೆಳೆಸುವ ಮೌನ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವುದು ವಿಶಿಷ್ಟವಾಗಿದೆ. ಇಲ್ಲಿ ಯಾವ ಕಾಲದಲ್ಲಿಯೂ ಕಲಾವಿದರ ಕೊರತೆಯಿಂದ ಕೂಟವನ್ನು ಮೊಟಕುಗೊಳಿಸಬೇಕು ಎಂಬಂತಹ ಸನ್ನಿವೇಶಗಳು ಇಲ್ಲಿಯವರೆಗೆ ಬರಲಿಲ್ಲ.

    ಐತುಮನೆ ತಾಳಮದ್ದಲೆಗೆ ಆಗಮಿಸುವ ಕಲಾವಿದರು ಯಾರು? ಅವರ ಕಲಾ ಸಾಮರ್ಥ್ಯವೇನು? ಯಾವ ಪಾತ್ರಗಳಲ್ಲಿ ಅವರು ಅರ್ಥವ್ಯಾಖ್ಯಾನ ಮಾಡಲು ಸೂಕ್ತರಾಗಿರುತ್ತಾರೆ? ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ಕಲಾತ್ಮಕ ನಿದರ್ಶನಗಳ ಆಧಾರದ ಮೇಲೆ ಮನೆಯವರಿಂದಲೇ ಪ್ರಸಂಗಗಳ ಆಯ್ಕೆಯು ಆ ರಾತ್ರಿಯಲ್ಲಿಯೇ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಎರಡು ಅಥವಾ ಮೂರು ಪ್ರಸಂಗಗಳು ಪ್ರದರ್ಶನಗೊಳ್ಳುತ್ತದೆ. ಇಲ್ಲಿಯವರೆಗೆ ಮಹಾಭಾರತ, ರಾಮಾಯಣ ಮತ್ತು ಭಾಗವತವನ್ನಾಧರಿಸಿದ ಬಹುತೇಕ ಎಲ್ಲಾ ಪ್ರಮುಖ ಪ್ರಸಂಗಗಳೊಂದಿಗೆ ತಾಳಮದ್ದಲೆಯಲ್ಲಿ ಸಾಮಾನ್ಯವಾಗಿ ಕಾಣಸಿಗದ ಹೊಸ ಪೌರಾಣಿಕ ಕಥನಗಳೂ ಇಲ್ಲಿ ಪರಿಚಯಗೊಂಡಿವೆ.

    ಭವ್ಯ ಇತಿಹಾಸ ಹೊಂದಿರುವ ಐತುಮನೆ ತಾಳಮದ್ದಲೆ ಬಹು ಸರಳವಾಗಿ ಸಂಪನ್ನವಾಗುತ್ತಿದ್ದು, ಎಲ್ಲಿಯೂ ಆಡಂಬರವನ್ನು ಪ್ರಕಟಪಡಿಸುವುದಿಲ್ಲ; ಈ ತಾಳಮದ್ದಲೆ ಮನೆಯ ಜಗುಲಿಯ ಒಂದು ಮೂಲೆಯಲ್ಲಿನ ಸರಳ ವೇದಿಕೆಯಲ್ಲಿ ನಡೆಯುತ್ತದೆ, ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರು ಜಮಖಾನೆ, ಚಾಪೆ ಅಥವಾ ಕಂಬಳಿಗಳ ಮೇಲೆ ಕುಳಿತುಕೊಂಡು ತಮ್ಮ ಆಖ್ಯಾನವನ್ನು ಪ್ರಸ್ತುತಪಡಿಸುತ್ತಾರೆ, ಪ್ರೇಕ್ಷಕರು ಸುತ್ತಲೂ ಕುಳಿತು ಪ್ರದರ್ಶನವನ್ನು ಆನಂದಿಸುತ್ತಾರೆ, ಬೆಳಕಿಗೆ ಯಾವುದೇ ವಿಶಿಷ್ಟ ವ್ಯವಸ್ಥೆಯಿಲ್ಲ, ಹತ್ತು ಹದಿನೈದು ವರುಷಗಳ ಹಿಂದಿನವರೆಗೂ ಮೈಕ್ ಬಳಸುವ ಸಂಪ್ರದಾಯವೇ ಇರಲಿಲ್ಲ; ಅತ್ಯಂತ ಜನಪದರೂಪದಲ್ಲಿ ಸಂಘಟನೆಯಾಗುವ ಈ ಕಾರ್ಯಕ್ರಮವು ತನ್ನ ಭಾವಭರಿತ ಮತ್ತು ಸಹಜ ಸ್ವರೂಪದಿಂದಲೇ ಪ್ರಕಟಗೊಳ್ಳುತ್ತಿದ್ದು, ಕಲೆಯ ತಾತ್ವಿಕತೆಯನ್ನೇ ಆರಾಧನೆಯಾಗಿ ನೋಡುತ್ತಿರುವ ಈ ಕ್ರಮ, ಹಳ್ಳಿ ಮನಸ್ಸಿನ ಸಾಂಸ್ಕೃತಿಕ ಶ್ರದ್ಧೆಗೆ ಜೀವಂತ ಸಾಕ್ಷಿಯಾಗಿದೆ ಎನ್ನಬಹುದು.

    ಹೊಸನಗರ, ಸಾಗರ ಹಾಗೂ ಸಿದ್ದಾಪುರ ತಾಲೂಕಿನ ಬಹುತೇಕ ಹಿರಿಯ ಹಾಗೂ ಕಿರಿಯ ಪ್ರಸಿದ್ಧ ಕಲಾವಿದರು ಈ ವೇದಿಕೆಯಲ್ಲಿ ಸ್ವಯಂ ಪ್ರೇರಣೆಯಿಂದ ಬಂದು ಅರ್ಥವ್ಯಾಖ್ಯಾನ ಮಾಡಿದ್ದಾರೆ. ನಮ್ಮ ‘ತಾಳಮದ್ದಲೆ’ಯೆಂದು ಅಭಿಮಾನಪೂರ್ವಕವಾಗಿ, ಸೇವಾಭಾವದಿಂದ ಬರುವ ಕಲಾವಿದರು ಹೆಚ್ಚಿನವರು. ಇವರಿಗೆ ಯಾವುದೇ ಸಂಭಾವನೆ ಅಥವಾ ಆಹ್ವಾನವಿಲ್ಲದೆ, ಶ್ರದ್ಧೆಯಿಂದ ಬಂದು ಈ ಕಾರ್ಯಕ್ರಮಕ್ಕೆ ಜೀವ ತುಂಬಿದ ಉದಾಹರಣೆಗಳಿವು. ಕಲಾವಿದರನ್ನು ಹೆಸರಿಸುವುದಕ್ಕೆ ದೊಡ್ಡ ಪಟ್ಟಿಯೇ ಇದೆ. ಗುಂಡು ಸೀತಾರಾಮಯ್ಯ, ಗುಂಡು ನರಸಿಂಹಯ್ಯ, ಅಂಬರಗೋಡ್ಲು ಯಜ್ಞೇಶ್ವರ, ಯಲ್ಕೋಡು ಮಹಾಬಲಗಿರಿ, ಹೊನ್ನೆಮಕ್ಕಿ ವೆಂಕಟಗಿರಿ ರಾವ್, ಬಾಲಕೃಷ್ಣ ಹಿಳ್ಳೋಡಿ, ನಾಗರಾಜ ಮಗೆಹಳ್ಳಿ, ಶರತ್ ಜಾನೆಕೈ, ಮಂಜುನಾಥ ಗುಡ್ಡೆದಿಂಬ, ಸಂಪ ಲಕ್ಷ್ಮೀನಾರಾಯಣ, ಅಶೋಕ ಕ್ಯಾಸನೂರು ಹಿಮ್ಮೇಳದಲ್ಲಿ ಬಂದಿದ್ದಾರೆ. ಗೋಡೆ ನಾರಾಯಣ ಹೆಗಡೆ, ತೆಂಕೋಡುಮನೆ ಮಹಾಬಲಯ್ಯ, ಶುಂಠಿ ಶೇಷಗಿರಿಯಪ್ಪ, ಶುಂಠಿ ಶ್ರೀನಿವಾಸಯ್ಯ, ವೆಂಕಪ್ಪ ಭಟ್ರು, ಮಲ್ಲಕ್ಕಿ ಶ್ರೀಪಾದ ಭಟ್, ಅಂಬರಗೋಡ್ಲು ರಾಮಕೃಷ್ಣಯ್ಯ, ಅಂಬರಗೋಡ್ಲು ಚಕ್ರಪಾಣಿ, ಕಲಗಾರು ಸುಬ್ರಾಯ ಶರ್ಮ, ಬಿಂದು ಮಾಧವ ಶರ್ಮ, ಉಪ್ಸಾದ ಗಣೇಶಯ್ಯ, ಅಡೇಮನೆ ಗಜಾನನ ಹೆಗಡೆ, ಕಡಕೋಡು ನಾರಾಯಣ ಭಟ್, ಪ್ರಶಾಂತ ಮಧ್ಯಸ್ಥ, ಶ್ರೀಕಾಂತ್ ಇಟಗಿ, ಮಹಾದೇವ ನಾಯ್ಕ, ಕೆಸುವಿನಮನೆ ಲಕ್ಷ್ಮೀನಾರಾಯಣ, ಶ್ರೀನಿವಾಸ ಕೆಸುವಿನಮನೆ, ಅಡಿಕೆಶಿನಿ ಶ್ರೀನಿವಾಸ, ಗುರುನಂದನ ಹೊಸೂರು, ವಿಷ್ಣು ಭಟ್ ಮೂರೂರು ಮುಂತಾದವರು ಈ ತಾಳಮದ್ದಲೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಜೀವ ತುಂಬಿದ್ದಾರೆ. ಇವರಿಗೆ ಜೊತೆಯಾಗಿ, ಟಿ.ಎಂ. ಸುಬ್ಬರಾವ್, ಶ್ರೀಧರ್ ಡಿ.ಎಸ್., ನಾರಾಯಣ ಹೆಗಡೆ (ಕಲಾರಂಗ) ಮುಂತಾದವರು ಅತಿಥಿಗಳಾಗಿ ಭಾಗವಹಿಸಿ, ಈ ಕಾರ್ಯಕ್ರಮಕ್ಕೆ ಗೌರವ ತುಂಬಿದ್ದಾರೆ.

    ಶತಮಾನಗಳಿಂದ ನಡೆಯುತ್ತಿರುವ ಈ ತಾಳಮದ್ದಲೆಗೆ ಹಲವು ಬಾರಿ ಸಂಕಷ್ಟಗಳು ಎದುರಾದರೂ ಅದರ ನಿರಂತರತೆಗೆ ಎಂದೂ ಅಡಚಣೆ ಆಗಿಲ್ಲ; ಒಂದು ಕಾಲದಲ್ಲಿ ಕಡು ಬಡತನ ಕುಟುಂಬವನ್ನು ಎದುರಿಸುತ್ತಿದ್ದ ಸಮಯದಲ್ಲಿ, ಒಂದು ಹೊತ್ತಿನ ಊಟಕ್ಕೂ ಚಿಂತೆಯಾಗಿತ್ತು, ಅಂಥ ಸಂದರ್ಭದಲ್ಲಿ ತಾಳಮದ್ದಲೆಯನ್ನು ಆಯೋಜಿಸುವುದು ದುಸ್ತರವಾಗಿತ್ತು, ಆದರೆ ಊರಿನವರು ಕುಟುಂಬದೊಂದಿಗೆ ನಿಂತು ‘ತಮ್ಮೂರಿನ ಈ ಸಾಂಸ್ಕೃತಿಕ ಪರಂಪರೆ ನಿಂತು ಹೋಗಬಾರದು’ ಎಂಬ ಭಾವನೆಯಿಂದ ಬೆಂಬಲಿಸಿ ಸಹಕಾರವನ್ನು ನೀಡಿದರು. ಆದರೆ ಇಂದು ಕುಟುಂಬ ವ್ಯವಸ್ಥೆ ಇಂದು ಕಿರಿದಾಗುತ್ತಿದೆ; ಬದುಕಿನ ಅನಿವಾರ್ಯತೆಗಳ ನಡುವಿಂದ, ಹಲವರು ಉದ್ಯೋಗಕ್ಕಾಗಿ ಊರಿನಿಂದ ಹೊರ ಹೋಗಿದ್ದಾರೆ. ಈ ದೊಡ್ಡ ಕುಟುಂಬದ ಅನೇಕ ಸದಸ್ಯರು ಬೇರೆ ಬೇರೆ ಕಡೆ ನೆಲೆಸಿದ್ದರೂ, ತಾಳಮದ್ದಲೆಯ ಮೇಲಿನ ಅವರ ಶ್ರದ್ಧೆ ಮತ್ತು ಕಲೆಯ ಮೇಲಿನ ಪ್ರೀತಿ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ. ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವ ಈ ಕುಟುಂಬ, ಎಲ್ಲರನ್ನೂ ಒಗ್ಗೂಡಿಸಿ ಸಂಘಟಿಸುವಂತಹ ಕಾರ್ಯವನ್ನು ನಿರಂತರವಾಗಿ ಶ್ರಮಪೂರ್ವಕವಾಗಿ ನಿರ್ವಹಿಸುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ, ಇಡೀ ರಾತ್ರಿ ಕಾರ್ಯಕ್ರಮ ಆಯೋಜಿಸುವುದು ಸುಲಭದ ಸಂಗತಿಯಲ್ಲ; ಎಷ್ಟು ಜನ ಭಾಗವಹಿಸುತ್ತಾರೆ ಎಂಬುದನ್ನು ಲೆಕ್ಕಿಸದೇ, ಕುಟುಂಬದವರು ಈ ಪರಂಪರೆಯನ್ನು ಶ್ರದ್ಧೆಯಿಂದ ಮುಂದುವರೆಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

    ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಈ ತಾಳಮದ್ದಲೆಯನ್ನು ಕಾಲಮಿತಿಯೊಳಗೆ ನಿಲುಕಿಸುವ ಒತ್ತಾಯಗಳು ಬಂದಿದ್ದರೂ, ಕುಟುಂಬದವರು ತಾವು ಇರುವವರೆಗೂ ತಮ್ಮ ಭಕ್ತಿ ಮತ್ತು ಕಲಾಪ್ರೀತಿಯ ಅನುರೂಪವಾಗಿ ಇದನ್ನು ಇದೇ ರೀತಿ ಮುಂದುವರಿಸಲು ಧೃಡ ಸಂಕಲ್ಪವನ್ನು ಮಾಡಿರುತ್ತಾರೆ. ಇದು ಕೇವಲ ಒಂದು ಕಲಾತ್ಮಕ ಚಟುವಟಿಕೆಯಲ್ಲ, ಆರಾಧನೆಯ ಭಾಗವಾಗಿಯೇ ಉಳಿಯಬೇಕೆಂಬ ಅವರ ನಂಬಿಕೆಯಾಗಿದೆ. ಅಂತಹ ಸಂಕಲ್ಪದ ಯಶಸ್ಸಿಗೆ ನಮ್ಮ ಭಾಗವಹಿಸುವಿಕೆಯಿಂದಲೂ, ಪ್ರೋತ್ಸಾಹದ ಮಾತುಗಳಿಂದಲೂ ಮಾತ್ರ ಸಹಕಾರ ನೀಡಬಹುದು.

    ಮತ್ತೆ ಆಷಾಢ ಮಾಸದ ಪ್ರಥಮ ಏಕಾದಶಿ ಬಂದಿದೆ. ಈ ತಾಳಮದ್ದಲೆ ಹೀಗೆಯೇ ತಲೆಮಾರುಗಳಿಂದ ತಲೆಮಾರಿಗೆ ಸಾಗುತ್ತಾ, ನಿತ್ಯ ನಿರಂತರವಾಗಿ ಜೀವಂತವಾಗಿರಲಿ ಎಂಬುವುದು ಎಲ್ಲರ ಹಾರೈಕೆಯಾಗಿದೆ.

    ಮಾಹಿತಿ ಸಹಕಾರ: ಶ್ರೀ ಶ್ರೀಧರ್ ಡಿ.ಎಸ್, ಶ್ರೀ ರವಿ ಐತುಮನೆ, ಶ್ರೀ ಗಣಪತಿ ಐತುಮನೆ

    – ರವಿ ಮಡೋಡಿ

    article baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕೊಡಗು ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಮೂಕೊಂಡ ನಿತಿನ್ ಕುಶಾಲಪ್ಪರಿಗೆ ಸನ್ಮಾನ
    Next Article ಗೋವಿಂದದಾಸ ಪಿ. ಯು. ಸಿ. ಕಾಲೇಜಿನಲ್ಲಿ ಉದ್ಘಾಟನೆಗೊಂಡ ಸಾಹಿತ್ಯ ಸಂಘ
    roovari

    Add Comment Cancel Reply


    Related Posts

    ಹೊಯಿಗೆಬಜಾರಿನಲ್ಲಿ ಮಾಧವ ತಿಂಗಳಾಯ ಜನ್ಮ ದಿನದ ನೆನಪು ಕಾರ್ಯಕ್ರಮ

    July 7, 2025

    ಬೆಂಗಳೂರಿನ ರಾಮಕೃಷ್ಣ ಮಠದಲ್ಲಿ ‘ರಾಮಕೃಷ್ಣ ಸಂಗೀತ ಸೌರಭ’ | ಜುಲೈ 11, 12 ಮತ್ತು 13

    July 7, 2025

    ಗೋವಿಂದದಾಸ ಪಿ. ಯು. ಸಿ. ಕಾಲೇಜಿನಲ್ಲಿ ಉದ್ಘಾಟನೆಗೊಂಡ ಸಾಹಿತ್ಯ ಸಂಘ

    July 7, 2025

    ಕೊಡಗು ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಮೂಕೊಂಡ ನಿತಿನ್ ಕುಶಾಲಪ್ಪರಿಗೆ ಸನ್ಮಾನ

    July 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.