ಮಂಗಳೂರು : ‘ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗ. ಒಳ್ಳೆಯ ಬದುಕನ್ನು ರೂಪಿಸುವುದರಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕಗಳೆರಡನ್ನು ಇಂದು ಅವಲೋಕಿಸಿ, ಅದರೊಳಗಿನ ಹೂರಣಗಳನ್ನು ಸಹೃದಯರಿಗೆ ತಲಪಿಸುವ ಕೆಲಸವನ್ನು ಈ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಅವಲೋಕನಕಾರರು ಮಾಡುತ್ತಿದ್ದಾರೆ. ಇದು ಅತ್ಯಂತ ಅಗತ್ಯವಾದ ಮತ್ತು ಅಭಿನಂದನೀಯ ಕಾರ್ಯಕ್ರಮ’ ಎಂದು ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕರು ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಘಟಕ ಹಾಗೂ ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನದ ಸಹಯೋಗದಲ್ಲಿ ದಿನಾಂಕ 05 ಜುಲೈ 2025ರಂದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ ‘ಕೃತಿ ಅವಲೋಕನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರೀ ಗಣೇಶ ಪ್ರಸಾದ ಜೀ ಯವರ ‘ಕಾಂತೆ ಕವಿತೆ’ ಕವನಗಳ ಗುಚ್ಛದ ಬಗ್ಗೆ ಖ್ಯಾತ ಹಾಸ್ಯ ಲೇಖಕಿ ಪ್ರೊ. ಭುವನೇಶ್ವರಿ ಹೆಗಡೆಯವರು ಅವಲೋಕನ ಗೈಯುತ್ತಾ, ಕಾಂತೆಯನ್ನು ವಸ್ತುವನ್ನಾಗಿಸಿ ಬದುಕಿನ ಆಂತರಿಕ ದರ್ಶನಗಳನ್ನು ಗಣೇಶ ಪ್ರಸಾದ ಜೀಯವರು ಮಾಡಿಸಿದ್ದಾರೆ. ಲಲಿತವೂ ಸುಂದರವೂ ಆದ ಇಲ್ಲಿನ ಕವಿತೆಗಳು ಸಹೃದಯ ಓದುಗರಿಗೆ ಒಂದು ಹೊಸತೆರನಾದ ಅನುಭವವನ್ನು ನೀಡುತ್ತದೆ. ಕಾವ್ಯಲೋಕಕ್ಕೆ ಇದೊಂದು ಅಪೂರ್ವವಾದ ಕೊಡುಗೆ ಎಂದು ಶ್ಲಾಘಿಸಿದರು. ಡಾ. ಮೀನಾಕ್ಷಿ ರಾಮಚಂದ್ರರವರು ಅನುವಾದಿಸಿದ ಮಲಯಾಳದ ಖ್ಯಾತ ಲೇಖಕ ಹಾಗೂ ಮನಶ್ಯಾಸ್ತ್ರಜ್ಞ ಸಜಿ ನರಿಕ್ಕುಯಿ ಅವರ ಕೃತಿ ‘ಮಾತು ಎಂಬ ವಿಸ್ಮಯ’ ಕೃತಿಯನ್ನು ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಪ್ರಾಂಶುಪಾಲೆ ಶ್ರೀಮತಿ ಸುಮಂಗಲಾ ಕೃಷ್ಣಾಪುರರವರು ಸವಿಸ್ತರವಾಗಿ ಅವಲೋಕಿಸಿದರು. ಮಾನವನ ಬದುಕಿನಲ್ಲಿ ಮಾತಿನ ಮಹತ್ವ ಮತ್ತು ಅವನ ಸರ್ವತೋಮುಖ ಅಭಿವೃದ್ಧಿಯ ಮಾರ್ಗದರ್ಶಕ ಸೂತ್ರಗಳನ್ನು ಒಳಗೊಂಡ ಈ ಪುಸ್ತಕ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ. ಕನ್ನಡಕ್ಕೆ ಇದೊಂದು ಅಪರೂಪದ ಕೃತಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ರೇವಣ್ಕರ್ ವಹಿಸಿದ್ದರು. ಮೈರುಗ ಪ್ರಕಾಶನದ ಶ್ರೀ ಗೋವಿಂದ ಭಟ್ ಹಾಗೂ ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎನ್. ತಿಲಕ ಪ್ರಸಾದ್ ಜೀ ಮುಖ್ಯ ಅತಿಥಿಗಳಾಗಿದ್ದರು. ಪ್ರೊ. ಭುವನೇಶ್ವರೀ ಹೆಗಡೆಯವರನ್ನು ಕ. ಸಾ. ಪ. ಜಿಲ್ಲಾ ಸಮಿತಿಯ ಶ್ರೀಮತಿ ಅರುಣಾ ನಾಗರಾಜ್ ಪರಿಚಯಿಸಿದರು. ಶ್ರೀಮತಿ ಸುಮಂಗಲಾ ಕೃಷ್ಣಾಪುರ ಇವರ ಪರಿಚಯವನ್ನು ಶ್ರೀಮತಿ ರತ್ನಾವತಿ ಜೆ. ಬೈಕಾಡಿಯವರು ಮಾಡಿಕೊಟ್ಟರು.
ಶ್ರೀಮತಿ ಉಷಾ ಜೀ ಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕ. ಸಾ. ಪ. ಮಂಗಳೂರು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ ಪ್ರಸಾದ ಜೀ ಯವರು ಸ್ವಾಗತಿಸಿ, ಕ. ಸಾ. ಪ. ಮಂಗಳೂರು ಘಟಕದ ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್ ನಿರೂಪಿಸಿ, ಶ್ರೀ ಎನ್. ತಿಲಕ ಪ್ರಸಾದ ಜೀ ಅವರು ವಂದಿಸಿದರು. ಸಾಹಿತ್ಯ ಲೋಕದ ಹಲವಾರು ಹಿರಿಕಿರಿಯ ಲೇಖಕರು ಉಪಸ್ಥಿತರಿದ್ದರು.