ದಾವಣಗೆರೆ : ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಕಲಾ ಬಂಧುತ್ವ ವೇದಿಕೆ ದಾವಣಗೆರೆಯ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ನಡೆಯಲಿರುವ ಬೀದಿ ನಾಟಕ ಹಾಗೂ ಜನಪದ ಹಾಡುಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ದಿನಾಂಕ 07 ಜುಲೈ 2025ರಂದು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಬೆಳಿಗ್ಗೆ ಘಂಟೆ 10:00ಕ್ಕೆ ನಡೆಯಿತು.
ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೀದಿ ನಾಟಕ ಹಾಗೂ ಜನಪದ ಗೀತೆಗಳ ಗೀತೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಡಿ. ವೈ. ಎಸ್. ಪಿ. ರವಿ ನಾರಾಯಣ್ ಮಾತನಾಡಿ “ಕಲಾತಂಡಗಳು ಉತ್ತಮ ಪ್ರದರ್ಶನ ನೀಡಲಿ. ಇದರಿಂದ ಸಮಾಜದ ಸಕಾರಾತ್ಮಕ ಬೆಳವಣಿಗೆಗೆ ಉತ್ತಮ ಸಂದೇಶ ನೀಡಲು ಸಹಕಾರಿಯಾಗಲಿದೆ” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ರಾಮಚಂದ್ರಪ್ಪ ಮಾತನಾಡಿ “ಮಾನವ ಬಂಧು ವೇದಿಕೆಯಿಂದ ಪ್ರತಿ ಜಿಲ್ಲೆಗೊಂದರಂತೆ ಜಿಲ್ಲೆಯ ಬೇರೆ ಭಾಗಗಳಲ್ಲಿ ಬೀದಿ ನಾಟಕ ಮತ್ತು ಜನಪದ ಗೀತೆಗಳ ಪ್ರದರ್ಶನ ನೀಡಲು ಕಲಾಬಂಧುತ್ವ ವೇದಿಕೆಯ ಆಶ್ರಯದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಹಲವಾರು ಕಲಾತಂಡಗಳನ್ನು ರಚಿಸಿ ತರಬೇತಿ ನೀಡಲಾಗಿದೆ. ಈ ಕಲಾ ತಂಡಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಲಿವೆ ಇದರ ಅಂಗವಾಗಿ ಮೊದಲಿಗೆ ದಾವಣಗೆರೆಯಿಂದಲೇ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾರಂಭಿಸಲಾಗಿದೆ” ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡರಾದ ಮುನಿಯಪ್ಪ, ರುದ್ರಮುನಿ ಅವರಗೆರೆ, ಪ್ರಾಂಶುಪಾಲ ಪ್ರೂ. ಮಂಜಪ್ಪ, ನಿರ್ದೇಶಕ ಅಂಜಿನಪ್ಪ ಲೋಕಿಕೆರೆ, ವಕೀಲ ಅನಿಶ್ ಪಾಷಾ, ಹರೋಸಾಗರ ಸಿದ್ದರಾಮಣ್ಣ, ಹೆಗ್ಗರೆ ರಂಗಪ್ಪ, ಐರಣಿ ಚಂದ್ರು, ಆದಿಲ್ ಖಾನ್, ಮಾನವ ಬಂಧುತ್ವ ವೇದಿಕೆಯ ಶಿವಕುಮಾರ್ ಮಾಡಾಳ್, ಹನುಮಂತಪ್ಪ ಮತ್ತು ಕಲಾತಂಡಗಳ ಸದಸ್ಯರು ಹಾಜರಿದ್ದರು.