ಮಹಾನ್ ವಿದ್ವಾಂಸ, ಶಿಕ್ಷಣ ತಜ್ಞ, ಸಾಹಿತಿ, ಶಿಕ್ಷಕ, ಪ್ರೊಫೆಸರ್ ಸೇತುರಾಮ ರಾಘವೇಂದ್ರ ಮಳಗಿಯವರು ಎಸ್. ಆರ್. ಮಳಗಿ ಎಂದೇ ಪ್ರಸಿದ್ಧರು. ಶಿಕ್ಷಕರಾಗಿದ್ದರೂ ಶಾಲೆಯ ಪಾಠಕ್ಕೆ ಮಾತ್ರ ಸೀಮಿತವಾಗಿರದೆ, ವಿದ್ಯಾರ್ಥಿಗಳನ್ನು ಬುದ್ದಿ ಹೇಳಿ, ತಿದ್ದಿ, ಯೋಗ್ಯ ಪ್ರಜೆಗಳನ್ನಾಗಿ ಮಾಡುವುದರೊಂದಿಗೆ ಕನ್ನಡ ನಾಡು – ನುಡಿಗಾಗಿ ಶ್ರಮಿಸಿದ ಇವರು ಜನಸಾಮಾನ್ಯರ ಪ್ರೀತಿ ಗೌರವಕ್ಕೆ ಪಾತ್ರರಾಗಿ ಖ್ಯಾತರಾಗಿದ್ದಾರೆ.
ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿ, ಗಿರೀಶ್ ಕಾರ್ನಾಡ್ , ಚಂದ್ರಶೇಖರ ಪಾಟೀಲ, ಚನ್ನವೀರ ಕಣವಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಪಾಟೀಲ ಪುಟ್ಟಪ್ಪ, ಸು. ರಂ. ಎಕ್ಕುಂಡಿ, ಬರಗೂರು ರಾಮಚಂದ್ರಪ್ಪ, ಗಿರಡ್ಡಿ ಗೋವಿಂದರಾಜ ಮುಂತಾದ ಅಪೂರ್ವ ಶಿಷ್ಯ ವೃಂದವನ್ನು ನಾಡಿಗೆ ನೀಡಿದವರು ಮಳಗಿಯವರು. ಈ ಶಿಷ್ಯ ಸಂತತಿಯಲ್ಲಿ ಅನೇಕರು ಪ್ರಸಿದ್ಧ ಅಧ್ಯಾಪಕರಾಗಿ ಹೆಸರುವಾಸಿಯಾಗಿದ್ದಾರೆ. ಆದ್ದರಿಂದಲೇ “ಮೇಷ್ಟ್ರುಗಳ ಮೇಷ್ಟ್ರು” ಎಂಬ ವಿಶೇಷಣ ಮಳಗಿಯವರಿಗೆ ಚೆನ್ನಾಗಿ ಒಪ್ಪುತ್ತದೆ.
ಆಚಾರ್ಯ ಮನೆತನದ ಮೊಳಗಿಯವರು ಬಿಜಾಪುರ ಜಿಲ್ಲೆಯ, ಬಾದಾಮಿ ತಾಲೂಕಿನ, ಖ್ಯಾಡ ಗ್ರಾಮದಲ್ಲಿ 8 ಜುಲೈ 1910 ರಂದು ಜನಿಸಿದರು. ಹೊಳೆ ಆಲೂರು, ಗದಗ, ಧಾರವಾಡದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಎಂ. ಎ. ಹಾಗೂ ಬಿ. ಟಿ. ಪದವಿಯನ್ನು ಪಡೆದು 1938ರಲ್ಲಿ ಹುಬ್ಬಳ್ಳಿಯ ‘ನ್ಯೂ ಇಂಗ್ಲಿಷ್ ಸ್ಕೂಲ್’ ನಲ್ಲಿ ಶಿಕ್ಷಕರಾಗುವ ಮೂಲಕ ವೃತ್ತಿ ಜೀವನಕ್ಕೆ ಪಾದರ್ಪಣೆ ಮಾಡಿದರು. ಧಾರವಾಡದ ಕರ್ನಾಟಕ ಕಾಲೇಜು, ಸಾಗರದ ಲಾಲ್ ಬಹದ್ದೂರ್ ವಿಜ್ಞಾನ ಮತ್ತು ಕಲಾ ಕಾಲೇಜು, ಬೆಂಗಳೂರಿನ ಸೇಂಟ್ ಜಾನ್ಸ್ ಜೂನಿಯರ್ ಕಾಲೇಜು, ಬೆಂಗಳೂರಿನ ಸೆಂಟ್ರಲ್ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ ಇವುಗಳಲ್ಲಿ ಉಪನ್ಯಾಸಕರಾಗಿ, ರೀಡರ್ ಆಗಿ, ಪ್ರೊಫೆಸರ್ ಆಗಿ, ಪ್ರಿನ್ಸಿಪಾಲ್ ಆಗಿ ಎಲ್ಲಾ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿ, ನಾಲ್ಕು ದಶಕಗಳ ಕಾಲ ಪಾಠ ಬೋಧನೆ ಮಾಡಿ ಮಳಗಿಯವರು ನಿವೃತ್ತನಾದರು. ಯಾವ ಹುದ್ದೆಯನ್ನು ಅಲಂಕರಿಸಿದರು ಪ್ರಾಮಾಣಿಕತೆಯಿಂದ, ಶ್ರದ್ಧೆ, ಪ್ರೀತಿಯಿಂದ ಪಾಠ ಬೋಧನೆ ಮಾಡಿ, ಶಿಷ್ಯರ ಪ್ರೀತಿಗೆ ಪಾತ್ರರಾದರು. ತನಗಿಂತ ಕಿರಿಯರು ಮಾಡಿದ ಕೆಲಸಗಳನ್ನು ತಾವು ಮೊದಲೇ ಮಾಡಿ ಮುಗಿಸಿದರೂ ಅದಕ್ಕೆ ಅಷ್ಟು ಪ್ರಾಮುಖ್ಯತೆ ದೊರೆಯದ ಕಾರಣ ಮಳಗಿಯವರು ನೇಪಥ್ಯಕ್ಕೆ ಸರಿದು ಹೋದರು. ಅರ್ಹತೆ ಇದ್ದರೂ ಮಳಗಿಯವರು ಅನೇಕ ಪದವಿ, ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾದರು. ಹಲವಾರು ಪುಸ್ತಕಗಳನ್ನು ಬರೆದರೂ ಅದಕ್ಕೆ ಸಾಕಷ್ಟು ಪ್ರಾಮುಖ್ಯತೆ ಬರಲಿಲ್ಲ. ತಮ್ಮ ಕಣ್ಣ ಮುಂದೆಯೇ ತನಗಿಂತ ಕಿರಿಯರು ಪ್ರಸಿದ್ಧರಾಗುವುದನ್ನು ಕಂಡು ಮನಸ್ಸು ಕೆಡಿಸಿಕೊಳ್ಳದೆ ಶಾಂತರಾಗಿದ್ದರು. ಇದನ್ನೆಲ್ಲ ಗಮನಿಸಿದ ಖ್ಯಾತ ವಿಮರ್ಶಕ ಹಾಗೂ ಮಳಗಿಯವರ ಶಿಷ್ಯರಾದ ಡಾ. ಎಚ್. ಎಸ್. ರಾಘವೇಂದ್ರ ರಾವ್ “ಮಳಗಿಯವರ ಬದುಕು ಹೆಸರುಗಳಾಚೆಗಿನ ಸಾರ್ಥಕತೆಯ ಜೀವಂತಿಕೆ ” ಎಂದಿದ್ದಾರೆ. ದ. ರಾ. ಬೇಂದ್ರೆಯವರೊಂದಿಗೆ ಮಳಗಿಯವರು ಬಹಳ ಆತ್ಮೀಯತೆ ಹಾಗೂ ಸಲಿಗೆಯಿಂದ ಇದ್ದರು. ವರ್ಷದಲ್ಲಿ ಮೂರು ಸಲ ನಡೆಯುತ್ತಿದ್ದ ಗೆಳೆಯರ ಬಳಗದ ‘ಮೌನ ಸಪ್ತಾಹ’ ಕಾರ್ಯಕ್ರಮದಲ್ಲಿ ಮಳಗಿಯವರು ಕ್ರಿಯಾಶೀಲರಾಗಿದ್ದರು. ಇದು ಬೇಂದ್ರೆಯವರ ನೇತೃತ್ವದಲ್ಲಿ ನಡೆಯುತ್ತಿತ್ತು. ಬೇಂದ್ರೆಯವರಂತೆ ಶ್ರೀ ಅರವಿಂದರ ಕಡೆಗೂ ಇವರು ಆಕರ್ಷಿತರಾಗಿದ್ದರು. “ಕಾವ್ಯಕ್ಕೆ ಗುರು ಬೇಂದ್ರೆ, ಆಧ್ಯಾತ್ಮಕ್ಕೆ ಗುರು ಶ್ರೀ ಅರವಿಂದರು” ಎನ್ನುತ್ತಿದ್ದ ಮಳಗಿಯವರು ಅರವಿಂದರ ಭಕ್ತರಾಗಿದ್ದರು. 1991ರ ‘ರಾಜ್ಯೋತ್ಸವ ಪ್ರಶಸ್ತಿ’ ಮಳಗಿಯವರಿಗೆ ದೊರೆತಿತ್ತು. 2000 ಇಸವಿಯಲ್ಲಿ ತಮ್ಮ 90ನೆಯ ವಯಸ್ಸಿನಲ್ಲಿ ರಾಜಾಜಿನಗರ ‘ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷ ಸ್ಥಾನವನ್ನು ವಹಿಸುವ ಅವಕಾಶ ದೊರೆತದ್ದು ಮಳಗಿಯವರಿಗೆ ಮಾತ್ರವಲ್ಲ ಅವರ ಆಪ್ತರಿಗೂ ಖುಷಿಯನ್ನು ತಂದಿದ್ದು.
ಸಾಹಿತಿಯಾದ ಇವರು ಬ್ರಹ್ಮರ್ಷಿ ದೈವರಾತ ಇವರ “ಛಂದೋ ದರ್ಶನ” ಕೃತಿಯನ್ನು ಸಂಸ್ಕೃತದಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಭಾರತೀಯ ವಿದ್ಯಾಭವನ ಇದನ್ನು ಪ್ರಕಟಿಸಿದೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಚರಿತ್ರೆಯನ್ನು ಬಿಂಬಿಸುವ “ಬಿಡುಗಡೆಯ ಬೆಳ್ಳಿ”, ” ವಾಕ್ಯ ಮಾಣಿಕ್ಯ ಕೋಶ”, ‘ಹರಿಶ್ಚಂದ್ರ ಕಾವ್ಯ ಕಥೆ’, ‘ಶ್ರೀ ಅರವಿಂದರು- ಪ್ರವೇಶಿಕೆ’, ಮಳಗಿಯವರ ಪ್ರಮುಖ ಕೃತಿಗಳು. ಕೇಶಿರಾಜನ ‘ಶಬ್ದಮಣಿದರ್ಪಣ ಸಂಗ್ರಹಂ’ ಮತ್ತು ವಿವಿಧ ಕವಿಗಳ ನೂರು ಕವಿತೆಗಳನ್ನು ಆಯ್ಕೆ ಮಾಡಿ ಪ್ರಕಟಿಸಿದ ಕವಿತೆಗಳ ಸಂಕಲನ “ಕವಿ ದರ್ಶನ”, ಡಾ. ಮಧು ಉಪಾಧ್ಯಾಯರ “ಸೃಜನಶೀಲ ಪ್ರತಿಭೆ” ಇವುಗಳು ಮಳಗಿಯವರು ಸಂಪಾದಿಸಿದ ಮುಖ್ಯ ಕೃತಿಗಳು. ಪಾಂಡಿಚೇರಿಯ ಶ್ರೀ ಅರವಿಂದ ಸಮಾಜದ ‘ಅಖಿಲ ಭಾರತ ಪತ್ರಿಕೆ’ಯ ಪ್ರಧಾನ ಸಂಪಾದಕರಾಗಿ ಮಳಗಿಯವರು 25 ವರ್ಷ ದುಡಿಯುವ ಮೂಲಕ ಪತ್ರಕರ್ತರಾಗಿಯೂ ಅನುಭವ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನ ‘ಕಮಂಡಲ ಪ್ರಕಾಶನ’ದ ವತಿಯಿಂದ ಮಳಗಿಯವರು ‘ವಂಶವೃಕ್ಷ’ ಹಾಗೂ ‘ಭೃಂಗನಾದ’ ಸಂಕಲವನ್ನು ಹೊರತಂದದ್ದು ಸ್ಮರಣೀಯ.
ಅಧ್ಯಾಪಕರಾಗಿ ಮಾತ್ರವಲ್ಲದೆ ಲೇಖಕರು, ಕವಿಗಳು, ಅನುವಾದಕರು, ಪತ್ರಕರ್ತರೂ ಆಗಿದ್ದು ಪುಸ್ತಕ ಪ್ರಕಟಣೆಯ ಕೆಲಸವನ್ನು ಮಾಡುವ ಮೂಲಕ ಸಾಹಿತ್ಯ ಸರಸ್ವತಿಯ ಅಪೂರ್ವ ಸೇವೆಯನ್ನು ಮಾಡಿ, 103 ವರ್ಷಗಳ ತುಂಬು ಜೀವನ ನಡೆಸಿದ ಪ್ರೊ. ಎಸ್.ಆರ್. ಮಳಗಿಯವರು 24 ಡಿಸೆಂಬರ್ 13 ರಂದು ಈ ಲೋಕದಿಂದ ದೂರವಾದರು. ಅವರು ಮಾಡಿದ ಸಾಹಿತ್ಯ ಸೇವೆ, ಜೀವನ ಸಾಧನೆ ಅವರನ್ನು ನಮ್ಮ ಮುಂದೆ ತಂದು ನಿಲ್ಲಿಸುವಂತಿದೆ.
ಅವರ ಜನ್ಮದಿನವಾದ ಇಂದು ದಿವ್ಯ ಚೇತನಕ್ಕೆ ಹೃದಯಾಂತರಾಳದ ನಮನಗಳು.
-ಅಕ್ಷರೀ