ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಎಸ್.ಎನ್.ಪಿ.ಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ’ ದಿನಾಂಕ 05 ಜುಲೈ 2025ರ ಶನಿವಾರದಂದು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಮಾತನಾಡಿ “ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಬದುಕಿನ ವಿದ್ಯೆ ಅತ್ಯವಶ್ಯಕ. ಜನಪದ ಹಾಡುಗಳೊಂದಿಗೆ ಜೀವನದ ಸಾರವನ್ನು ಯುವ ಜನಾಂಗಕ್ಕೆ ನೀಡುವುದರಿಂದ ಅವರಿಗೆ ಬದುಕಿನ ಅರ್ಧ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಜೀವನ ಕಟ್ಟಿಕೊಳ್ಳಲು ಬೇಕಾದ ವಿಚಾರಗಳನ್ನು ಹಾಡಿನ ಮೂಲಕ ತಿಳಿಸಿದಾಗ ವಿದ್ಯಾರ್ಥಿಗಳ ಮನಸಿನಲ್ಲಿ ಅವುಗಳು ಅಚ್ಚಳಿಯದೆ ನಿಲ್ಲುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಬದುಕಿಗೆ ತಿರುವನ್ನು ಒದಗಿಸುತ್ತದೆ. “ಹಾಡಿನೊಂದಿಗೆ ತಿಳಿಸುವ ಜೀವನ ಕೌಶಲ್ಯದ ಜ್ಞಾನವು ಮಕ್ಕಳ ಭವಿಷ್ಯದ ಉನ್ನತಿಗೆ ಸೋಪಾನವಾಗುತ್ತದೆ” ಎಂದರು.
ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕಲಾವಿದರಾದ ನಾದ ಮಣಿ ನಾಲ್ಕೂರು, ಸಾಂಸ್ಕೃತಿಕ ನಂಘದ ನಂಚಾಲಕರಾದ ರೇಖಾರಾಣಿ ಸೋಮಶೇಖರ್, ಪ್ರೌಢಶಾಲಾ ಮುಖ್ಯಶಿಕ್ಷಕರಾದ ನಂದಾ ಹರೀಶ್ ಉಪಸ್ಥಿತರಿದ್ದರು.ಕಲಾವಿದರಾದ ಮಣಿ ನಾಲ್ಕೂರು ಸುಮಾರು 1 ತಾಸಿನ ಕಾಲ ಜನಪದ ಹಾಡಿನೊಂದಿಗೆ ಬದುಕಿನ ನಾರವನ್ನು ಮಕ್ಕಳಿಗೆ ತಿಳಿಸಿದರು. ಭವಿಷ್ಯದ ಬದುಕಿನ ಬಗ್ಗೆ, ಪರಿಸರ ಸಂರಕ್ಷಣೆ ಬಗ್ಗೆ, ಗುರಿ ಸಾಧನೆ, ಸಾಧನೆಯ ನನಸಿನ ಬಗ್ಗೆ ಹಾಡಿನ ಮೂಲಕ ಮಕ್ಕಳಿಗೆ ಪರಿಪೂರ್ಣವಾಗಿ ವಿವರಿಸಿದರು. ಸಂಗೀತದೊಂದಿಗೆ ಜೀವನ ಕೌಶಲ್ಯವನ್ನು ಮಕ್ಕಳಿಗೆ ನೀಡಿದರು. ಈ ಸಂದರ್ಭದಲ್ಲಿ ಕಲಾವಿದ ನಾದ ಮಣಿ ನಾಲ್ಕೂರು ಇವರನ್ನು ಪ್ರಾಚಾರ್ಯರಾದ ಸೋಮಶೇಖರ ನಾಯಕ್ ಸನ್ಮಾನಿಸಿದರು. ಉಪನ್ಯಾಸಕರಾದ ಶ್ರುತಿ ಅಶ್ವತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಪ್ರಾಚಾರ್ಯರು ಗಣ್ಯರನ್ನು ಗೌರವಿಸಿದರು.