ಕರ್ನಾಟಕ ಹವ್ಯಾಸಿ ರಂಗಭೂಮಿಯ ಪ್ರತಿಭಾವಂತ ಕಲಾವಿದ ಮಾತ್ರವಲ್ಲದೆ ಸಾಹಿತ್ಯ ಲೋಕದಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆದವರು ಆರ್. ಎಸ್. ರಾಜಾರಾಮ್.
ಜಿ. ಎಸ್. ರಘುನಾಥ ರಾವ್ ಹಾಗೂ ಶಾರದಾ ಬಾಯಿ ದಂಪತಿಗಳ ಪುತ್ರರಾದ ಇವರು ಬಹುಮುಖ ಪ್ರತಿಭೆಯ ಅಪರೂಪದ ವ್ಯಕ್ತಿ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಜನಪರ, ವೈಚಾರಿಕ, ವೈಜ್ಞಾನಿಕ ಮಾರ್ಗ ತೋರಿಸಿದ ಹಲವಾರು ಪ್ರಮುಖರಲ್ಲಿ ಇವರೂ ಒಬ್ಬರು. ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಮಾರ್ಕ್ಸ್ ವಾದಿ ಸಾಹಿತ್ಯದ ಬಗ್ಗೆ ಆಕರ್ಷಿತರಾಗಿ, ರೈತ ಕಾರ್ಮಿಕ ಚಳುವಳಿಗಳಲ್ಲಿ ಸ್ವಯಂ ಕಾರ್ಯಕರ್ತರಾಗಿ ದುಡಿದವರು.
ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಬಿ. ವಿ. ಕಕ್ಕಿಲಾಯರಿಂದ ಸ್ಪೂರ್ತಿ ಪಡೆದು ನವ ಕರ್ನಾಟಕ ಪ್ರಕಾಶನಕ್ಕೆ 1960ರಲ್ಲಿ ಎಸ್. ಆರ್. ಭಟ್ ಇವರಿಗೆ ಸಹಾಯಕ ನಿರ್ದೇಶಕರಾಗಿ ಸೇರಿದರು. ತಮ್ಮ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಈ ಸಂಸ್ಥೆಯಲ್ಲಿ ದುಡಿದು ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ ವ್ಯವಸ್ಥಾಪಕ ನಿರ್ದೇಶಕರಾದರು. ಐದು ದಶಕಗಳ ಕಾಲ ಅಲ್ಲಿ ಕೆಲಸ ಮಾಡಿ 2017ರಲ್ಲಿ ನಿರ್ದೇಶಕ ಹುದ್ದೆಯಿಂದ ಹೊರಬಂದರು.
‘ವಿಗಡ ವಿಕ್ರಮರಾಯ’, ‘ಮಂಡೋದರಿ’, ‘ಎಚ್ಚಮನಾಯಕ’, ‘ಟಿಪ್ಪು ಸುಲ್ತಾನ್’, ‘ಕಿತ್ತೂರು ಚೆನ್ನಮ್ಮ’, ‘ಕಾಕನಕೋಟೆ’, ‘ರಕ್ತಾಕ್ಷಿ’ ‘ತುಘಲಕ್’, ‘ಅಗ್ನಿ ಮತ್ತು ಮಳೆ’,’ಸದಾರಮೆ’ ಮುಂತಾದ ನಾಟಕಗಳಲ್ಲಿ ತಮ್ಮ ಅನನ್ಯ ಅಭಿನಯದ ಮೂಲಕ ಖ್ಯಾತಿ ಪಡೆದುಕೊಂಡಿದ್ದರು.
ಸೃಜನಶೀಲ ಸಾಹಿತಿಯಾದ ಇವರು ‘ವಿಶ್ವಕಥಾಕೋಶ’, ‘ಕರ್ನಾಟಕ ಏಕೀಕರಣ ಇತಿಹಾಸ’, ‘ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು’, ‘ಲೋಕಾಯತ’, ‘ಜ್ಞಾನ – ವಿಜ್ಞಾನ – ಕೋಶ’, ‘ಕರ್ನಾಟಕ ಕಲಾದರ್ಶನ’, ‘ಲೋಕ – ಜ್ಞಾನ – ಮಾಲೆ’, ‘ಇಗೋ ಕನ್ನಡ’, ‘ವಿಶ್ವ ಮಾನ್ಯರು’, ‘ಲೋಕ ತತ್ವಶಾಸ್ತ್ರ ಪ್ರವೇಶಿಕೆ’ ಇಂತಹ ಹಲವಾರು ಯೋಜನೆಗಳನ್ನು ರಾಜ್ಯದ ಮತ್ತು ದೇಶದ ಖ್ಯಾತ ಚಿಂತಕರ ಹಾಗೂ ಲೇಖಕರ ಮೂಲಕ ಕೃತಿಗಳ ರಚನೆ ಮಾಡಿಸಿ ಪ್ರಕಟಿಸುವಲ್ಲಿ ರಾಜಾರಾಮರು ಮಹತ್ತರ ಪತ್ರ ವಹಿಸಿದ್ದಾರೆ.
ಆರ್. ಎಸ್. ರಾಜಾರಾಮ್ ಇವರು ‘ನಟರಂಗ’ ಮತ್ತು ‘ವೇದಿಕೆ’ ಇವುಗಳ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಸಿ. ಆರ್. ಸಿಂಹ, ಬಿ. ವಿ. ಕಾರಂತ, ಎಂ. ಎಸ್. ಸತ್ಯು ಮುಂತಾದ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವಿ. ಹಲವಾರು ನಾಟಕ ಮತ್ತು ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಭಲೇ ಹುಚ್ಚ’ ಚಿತ್ರದ ಮೂಲಕ ಕನ್ನಡ ಚಲನಚಿತ್ರ ಲೋಕಕ್ಕೆ ಪ್ರವೇಶ ಮಾಡಿದ ಇವರು ‘ಕೂಡಿ ಬಾಳಿದರೆ ಸ್ವರ್ಗ’ ಮತ್ತು ಹಾಸ್ಯ ಪ್ರಧಾನ ಪಾತ್ರಗಳನ್ನೂ ಮಾಡಿ ಜನ ಮೆಚ್ಚುಗೆ ಪಡೆದಿದ್ದಾರೆ.
‘ರಸಿಕ ರಂಜನಿ’ ಕಲಾವಿದರು ಎಂಬ ರಂಗಸಂಸ್ಥೆಯನ್ನು ಸ್ಥಾಪಿಸಿ ‘ಹಣ ಹದ್ದು’, ‘ಮಗು ಮದ್ವೆ’, ‘ಪಂಚಭೂತ’, ‘ಹೋಮ್ ರೂಲು’, ‘ಅವರೇ ಇವರು ಇವರೇ ಅವರು’ ಇತ್ಯಾದಿ ನಾಟಕಗಳಲ್ಲಿ ನಟಿಸಿದರು. ಬೆರೆತು ಬಾಳುವ ಸ್ನೇಹಜೀವಿಯಾದ ಇವರು ‘ಸರಸ್ವತಿ ಕಲಾನಿಕೇತನ’, ‘ಪ್ರಧಾನ ಮಿತ್ರ ಮಂಡಳಿ’, ‘ಸುಪ್ರಭಾತ ಕಲಾವಿದರು’, ‘ಕಮಲ ಕಲಾ ಮಂದಿರ’ ಮುಂತಾದ ಸಂಸ್ಥೆಗಳಲ್ಲಿ ಸದಾ ಒಡನಾಟವನ್ನು ಹೊಂದಿದ್ದರು. 1964ರಲ್ಲಿ ಸಚಿವಾಲಯ ಸಾಂಸ್ಕೃತಿಕ ಸಂಘದ ಮೂಲಕ ಕ್ಲಬ್ ನೌಕರರ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ರಾಜಾ ರಾಮ್ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅದೇ ರೀತಿ ಹಲವಾರು ಸಂಘ-ಸಂಸ್ಥೆಗಳ, ಪ್ರತಿಷ್ಠಾನಗಳ ಗೌರವ ಸನ್ಮಾನಗಳು ದೊರೆತಿವೆ. ನವ ಕರ್ನಾಟಕ ಪ್ರಕಾಶನ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ಹೊರಬರುವ ಸಂದರ್ಭದಲ್ಲಿ ಅವರನ್ನು ಕುರಿತು ‘ಆರ್. ಎಸ್. ರಾಜಾರಾಮ್’ ಮತ್ತು ‘ಸೃಷ್ಟಿಯಸೆಲೆ ಆರ್. ಎಸ್. ರಾಜಾರಾಮ್ ಬದುಕು – ಸಾಧನೆ’ ಎಂಬ ಎರಡು ಕೃತಿಗಳು ಪ್ರಕಟಗೊಂಡವು. ನವ ಕರ್ನಾಟಕ ಪ್ರಕಾಶನದ ರೂವಾರಿಯಾಗಿ, ರಂಗಕರ್ಮಿಯಾಗಿ, ಚಲನಚಿತ್ರ ನಟರಾಗಿ ಮಾತ್ರವಲ್ಲದೆ ಸಾಹಿತಿಯಾಗಿ ಸಾಹಿತ್ಯ ಸೇವೆಯನ್ನು ಮಾಡಿದ ಆರ್. ಎಸ್. ರಾಜಾರಾಮ್ ಇವರು 2021ರ ಮೇ ತಿಂಗಳ 10ನೇ ತಾರೀಖಿನಂದು ನಿಧನರಾದರು.
ಸಾಹಿತ್ಯಸೇವೆಯೊಂದಿಗೆ ಕಲಾಸೇವೆಗೈದ ಆರ್. ಎಸ್. ರಾಜಾರಾಮರನ್ನು ಅವರ ಜನ್ಮದಿನವಾದ ಇಂದು ಸ್ಮರಿಸೋಣ
-ಅಕ್ಷರೀ