ಸಂಗೀತವು ಒಂದು ಅರ್ಥವಾಗುವ ಭಾಷೆ.
ಇದರ ಆಳವನ್ನು ತಿಳಿಯಲು ಒಂದು ಜನ್ಮ ಸಾಲದು. ತಿಳಿಯುವುದು ಅಷ್ಟು ಸುಲಭವೂ ಅಲ್ಲ. ಮನಸ್ಸಿನ ನೋವನ್ನು ದೂರಮಾಡಿ ಮನಸ್ಸಿಗೆ ಮುದ ನೀಡುವ ಶಕ್ತಿ ಇದಕ್ಕಿದೆ. ಜಾತಿ, ಮತ, ಭೇದಭಾವ ಇಲ್ಲದೆ ಅನಾದಿಕಾಲದಿಂದಲೂ ಬತ್ತದೇ ಹರಿದ ಒಂದು ಮಹಾನದಿ ಸಂಗೀತ. ಈ ಮಹಾನದಿಯಲ್ಲಿ ಈಜಿ ಸಾಧನೆ ಮಾಡಿದವರು ಅನೇಕರು. ಇಂಥವರಲ್ಲಿ ನೀಲಮ್ಮ ಕಡಾಂಬಿಯವರು ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಹಿಳಾ ಸಂಗೀತಗಾರರಲ್ಲಿ ಒಬ್ಬರು.
ಸಂಗೀತ ಪರಂಪರೆಯಿಂದ ಬಂದ ನೀಲಮ್ಮ ಕಡಾಂಬಿಯವರ ತಂದೆ ವಿದ್ವಾನ್ ವೆಂಕಟಾಚಾರ್ಯರು ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ವೀಣಾ ವಿದ್ವಾಂಸರಾಗಿದ್ದರು. ತಾಯಿಯೂ ಉತ್ತಮ ವೀಣಾ ವಾದಕಿ, ಸಹೋದರ ಎಂ. ವಿ. ಶ್ರೀನಿವಾಸ್ ಅಯ್ಯಂಗಾರ್ ಅವರೂ ಸಂಗೀತ ವಿದ್ವಾಂಸರು. ನೀಲಮ್ಮನವರಿಗೆ ತಂದೆ ಮತ್ತು ಅಣ್ಣನಿಂದ ಸಂಗೀತ ಹಾಗೂ ವೀಣಾವಾದನದ ಆರಂಭದ ಪಾಠದ ಅಭ್ಯಾಸವಾಯಿತು. ಮುಂದೆ ವಿದ್ವಾನ್ ಲಕ್ಷ್ಮೀನಾರಾಯಣಪ್ಪನವರಲ್ಲಿ ಮತ್ತು ವೀಣಾ ವೆಂಕಟಗಿರಿಯಪ್ಪನವರಲ್ಲಿ ವೀಣಾವಾದನವನ್ನೂ ಹಾಗೂ ಹಾಡುಗಾರಿಕೆಯನ್ನು ಮೈಸೂರು ವಾಸುದೇವಾಚಾರ್ಯರು, ಮೈಸೂರು ಟಿ. ಚೌಡಯ್ಯನವರು, ವಿ. ರಾಮರತ್ನಂ ಮುಂತಾದ ಶ್ರೇಷ್ಠ ವಿದ್ವಾಂಸರಲ್ಲಿ ಅಭ್ಯಾಸ ಮಾಡಿದರು. ನೀಲಮ್ಮನವರು ವೀಣಾ ವಾದನದ ಜೊತೆಗೆ ಹಾಡುವ ಅಭ್ಯಾಸವನ್ನೂ ಮಾಡಿಕೊಂಡಿದ್ದರು. ವೀಣೆಯ ನಾದದೊಂದಿಗೆ ಅವರು ತಮ್ಮ ಮಧುರವಾದ ಸ್ವರ ಸೇರಿಸಿ ಹಾಡಿದಾಗ ಸಂಗೀತ ಕಚೇರಿ ಕಳೆ ಕಟ್ಟುತ್ತಿತ್ತು. ಕರ್ನಾಟಕ ಸಂಗೀತ ಸಾಂಪ್ರದಾಯದೊಂದಿಗೆ ಕೊನೆಯಲ್ಲಿ ಹಿಂದೂಸ್ತಾನಿ ಮಟ್ಟುಗಳನ್ನು ನುಡಿಸುತ್ತಿದ್ದು ಶ್ರೂತೃಗಳಿಗೆ ಮತ್ತೊಂದು ಆಕರ್ಷಣೆಯಾಗಿದ್ದು ಅನನ್ಯ ಅನುಭವ ನೀಡುತ್ತಿತ್ತು. ಆ ಕಾಲಘಟ್ಟದಲ್ಲಿ ಸಾರ್ವಜನಿಕವಾಗಿ ಪ್ರಾದೇಶಿಕ ವಲಯದಲ್ಲಿ ವೇದಿಕೆಯ ಮೇಲೆ ಸಂಗೀತ ಕಚೇರಿ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ನೀಲಮ್ಮ ಪಾತ್ರರಾಗಿದ್ದರು. ಆ ಸಮಯದಲ್ಲಿ ಅವರ ಸಂಗೀತ ಕಚೇರಿಗಳಿಗೆ ತಮಿಳುನಾಡಿನಲ್ಲಿ ಹೆಚ್ಚು ಬೇಡಿಕೆ ಇತ್ತು. ಮೈಸೂರು ಅರಮನೆಯಲ್ಲಿಯೂ ಇವರು ಅನೇಕ ಬಾರಿ ಸಂಗೀತ ಕಚೇರಿಗಳನ್ನು ನೀಡಿದ್ದಾರೆ.
1954ರಲ್ಲಿ ದೆಹಲಿಯಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಉತ್ಸವದ ಸಂದರ್ಭವದು. ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಮತ್ತು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಇವರು ಉಪಸ್ಥಿತರಿದ್ದ ಸಭೆಯಲ್ಲಿ ಮೈಸೂರಿನಿಂದ ಆಯ್ಕೆಯಾದ ನೀಲಮ್ಮನವರಿಗೆ ವೀಣಾ ವಾದನ ಕಚೇರಿ ನೀಡಲು ಅವಕಾಶ ದೊರೆತದ್ದು ಒಂದು ವಿಶೇಷ. ವಿಜಯವಾಡ, ಕಾಕಿನಾಡ, ಮದರಾಸಿನ ‘ರಸಿಕರಂಜನಿ’ ಸಭಾ, ಮುಂಬೈ, ದೆಹಲಿ, ನಾಗಪುರ ಹೀಗೆ ದೇಶದ ಬೇರೆ ಬೇರೆ ಕಡೆಗಳಲ್ಲಿ ನೀಲಮ್ಮನವರು ಯಶಸ್ವಿ ಕಚೇರಿಗಳನ್ನು ನೀಡಿದ್ದಾರೆ. ದೂರದರ್ಶನದಲ್ಲಿಯೂ ಇವರ ವೀಣಾವಾದನ ಕಚೇರಿ ಪ್ರಸಾರಗೊಂಡಿದೆ. ಬೆಂಗಳೂರಿನ ಆಕಾಶವಾಣಿ ನಿಲಯವು ಆರಂಭಗೊಂಡಾಗ ಮೊದಲ ವೀಣಾವಾದನ ಕಾರ್ಯಕ್ರಮ ನೀಡಿದ ಶ್ರೇಯಸ್ಸು ನೀಲಮ್ಮನವರದ್ದಾಗಿತ್ತು. ಕರ್ನಾಟಕ ಸರಕಾರ ನಡೆಸುವ ಸಂಗೀತ ಪರೀಕ್ಷೆಗಳಿಗೆ ಹಲವು ವರ್ಷಗಳ ಕಾಲ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಲಂಬಿಯಾ ಕಂಪನಿಯಿಂದ ಇವರ ಗಾಯನದ ಧ್ವನಿ ಮುದ್ರಣವಾಗಿತ್ತು. 1943-44 ರ ಸಮಯದಲ್ಲಿ ‘ಸತಿ ತುಳಸಿ’ ಎಂಬ ಚಲನಚಿತ್ರದಲ್ಲಿ ನೀಲಮ್ಮ ಕಡಂಬಿಯವರ ವೀಣಾ ವಾದನ ಕಚೇರಿಯ ದೃಶ್ಯ ಇದೆ. 1948ರಲ್ಲಿ ನಿರ್ಮಾಣಗೊಂಡ ‘ಭಕ್ತರ ರಾಮದಾಸ’ ಅದೇ ರೀತಿ 1949ರಲ್ಲಿ ಬಿಡುಗಡೆಯಾದ ‘ನಾಗಕನ್ನಿಕಾ’ ಚಲನಚಿತ್ರಗಳಲ್ಲಿ ಬಹುಪಾಲು ಹಾಡುಗಳನ್ನು ನೀಲಮ್ಮನವರೇ ಹಾಡಿದ್ದಾರೆ.
ಬೆಂಗಳೂರಿನ ‘ಗಾನಕಲಾ ಪರಿಷತ್ತು’ ಇದರ ವಾರ್ಷಿಕ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಗೊಂಡು ಅಲ್ಲಿ ‘ಗಾನ ಕಲಾಭೂಷಣ’ ಎಂಬ ಬಿರುದನ್ನು ಸ್ವೀಕರಿಸಿದರು. ಮೈಸೂರು ಅರಮನೆಯಿಂದ ಗಂಡಭೇರುಂಡ ಲಾಂಛನದ ಪದಕವಿರುವ ಚಿನ್ನದ ಸರವನ್ನು ನೀಡಿ ಅವರನ್ನು ಗೌರವಿಸಲಾಯಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಶಸ್ತಿ ಹಾಗೂ ಸನ್ಮಾನ, ತಂಜಾವೂರಿನ ಸಂಗೀತೋತ್ಸವದಲ್ಲಿ ‘ಬಾಲ ಕೇಸರಿ’ ಬಿರುದು, ಚೆನ್ನೈಯ ಟಿ. ವಿ. ಎಸ್. ಗ್ರೂಪ್ ಕಡೆಯಿಂದ ಕುಸುರಿ ಕೆತ್ತನೆಯ ಬೆಳ್ಳಿಯ ವೀಣೆಯನ್ನು ಪ್ರದಾನ ಮಾಡಿದರು. ಈ ವೀಣೆಯ ವಿಶೇಷತೆ ಎಂದರೆ ತಾಂಬೂಲಕ್ಕೆ ಬೇಕಾದ ಎಲೆ, ಅಡಿಕೆ, ಏಲಕ್ಕಿ, ಲವಂಗ, ಸುಣ್ಣ ಇತ್ಯಾದಿಗಳನ್ನು ಇಡಲು ಬೇಕಾದ ಕರಂಡಕ ಅದರಲ್ಲಿ ಇತ್ತು. ಇಷ್ಟೇ ಅಲ್ಲದೆ ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ, ಬೆಳ್ಳಿಯ ಪದಕಗಳು ಇವರಿಗೆ ಸಂದಿವೆ.
ಸಂಗೀತ ಪಾಠ ಹೇಳುವುದರಲ್ಲಿ ಬಹಳ ಶಿಸ್ತು ಅಳವಡಿಸಿಕೊಂಡ ನೀಲಮ್ಮನವರು ಅನೇಕ ಮಹತ್ವದ ಸಂಗೀತಗಾರರನ್ನು ಸಂಗೀತ ಲೋಕಕ್ಕೆ ನೀಡಿದ್ದಾರೆ. ಎಂ. ಎಸ್. ಜಯಮ್ಮ, ವತ್ಸಲ ರಾಮಕೃಷ್ಣ, ಶ್ರೀದೇವಿ, ಜಾನಕಮ್ಮ, ಜಿ. ವಿ. ರಂಗನಾಯಕಮ್ಮ ಮುಂತಾದವರು ಇವರ ಶಿಷ್ಯರಲ್ಲಿ ಪ್ರಸಿದ್ಧರು.
ತಮ್ಮ ಶ್ರದ್ಧೆ ಶ್ರಮದಿಂದ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ ವಿದುಷಿ ನೀಲಮ್ಮ ಕಡಾಂಬಿಯವರು 11 ಜುಲೈ 1911 ರಲ್ಲಿ ಜನಿಸಿ, 87 ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿ, 14 ಡಿಸೆಂಬರ್ 1998ರಲ್ಲಿ ಸಂಗೀತ ಸರಸ್ವತಿಯ ಪಾದವನ್ನು ಸೇರಿದರು. ಇಂದು ನೀಲಮ್ಮ ಕಡಾಂಬಿಯವರ ಜನ್ಮದಿನ. ಅವರ ಅನನ್ಯ ಚೇತನಕ್ಕೆ ಅಂತರಾಳದ ನಮನಗಳು.
-ಅಕ್ಷರೀ