ಕುಶಾಲನಗರ : ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಪುಣ್ಣಿಮೆ ಪೂಜಾ ಕಾರ್ಯಕ್ರಮ, ಶಿವಾನುಭವ ಗೋಷ್ಠಿ ಮತ್ತು ಫ.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮವು ದಿನಾಂಕ 10 ಜುಲೈ 2025 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ “ಕಾಯಕ ಮಹತ್ವ, ತ್ರಿವಿಧ ದಾಸೋಹ ಪರಿಕಲ್ಪನೆ, ಸಾಮಾಜಿಕ ಸಮಾನತೆ, ಸ್ತ್ರೀ ಸಮಾನತೆ, ದಯೆ ಮತ್ತು ಧರ್ಮದ ಪರಿಕಲ್ಪನೆ, ಅನುಭಾವ, ಸಮ ಸಮಾಜದ ನಿರ್ಮಾಣ ಮೊದಲಾದ ವಿಶ್ವ ಮೌಲಿಕ ಆಶಯಗಳನ್ನು ಶರಣರ ವಚನಗಳಲ್ಲಿ ಕಾಣಬಹುದಾಗಿದೆ. ಬಸವಾದಿ ಶರಣರು ನಡೆ-ನುಡಿ ಒಂದಾಗಿಸಿಕೊಂಡು ಬದುಕಿದವರು. ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿಯೇ ಕರ್ಮಠತನದ ಸಾಮಾಜಿಕ ವ್ಯವಸ್ಥೆಯ ವರ್ಗ-ಜಾತಿ-ಲಿಂಗ ತಾರತಮ್ಯವನ್ನು ನೇರವಾಗಿ ವಿರೋಧಿಸಿ ಸಮ ಸಮಾಜದ ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಸಾರಿದರು. ಜನಪರವಾದ ಮತ್ತು ಲೋಕಕಲ್ಯಾಣಕರವಾದ ಚಿಂತನೆಗಳು ಬಸವಾದಿ ಶರಣರ ವಚನಗಳಲ್ಲಿ ಕಂಡುಬರುತ್ತದೆ. ವಚನ ಪಿತಾಮಹ, ವಚನ ಕಮ್ಮಟ, ರಾವ್ ಬಹದ್ದೂರ್, ರಾವ್ ಸಾಹೇಬ್ ಎಂದೇ ಪ್ರಸಿದ್ಧರಾಗಿದ್ದ ಫ.ಗು. ಹಳಕಟ್ಟಿಯವರು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಇಡೀ ತಮ್ಮ ಬದುಕನ್ನು ಶರಣರ ವಚನಗಳನ್ನು ಸಂಗ್ರಹಿಸಿ ಪ್ರಕಟಿಸುವುದಕ್ಕಾಗಿ ಮುಡಿಪಾಗಿಟ್ಟವರು. ತಮ್ಮ ಬದುಕಿನಲ್ಲಿ ಎದುರಾದ ಹಲವಾರು ಕಷ್ಟ ಕಾರ್ಪಣ್ಯದ ಸಂದಿಗ್ಧತೆಯ ಪರಿಸ್ಥಿತಿಗಳ ನಡುವೆಯೂ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಬಸವಾದಿ ಶರಣರ ಸಮಗ್ರ ವಚನಗಳನ್ನು ಕನ್ನಡ ನಾಡಿಗೆ ನೀಡಿದಂತಹ ನಿಸ್ವಾರ್ಥ ಸೇವೆ ಅವರದು” ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, “ತಮ್ಮ ವಚನಗಳ ಮೂಲಕ ಅಂತರಂಗದ ಆತ್ಮಸಾಕ್ಷಿಯಾಗಿ ಇಡೀ ಮನುಕುಲಕ್ಕೆ ಸಾರ್ಥಕ ಜೀವನದ ದಾರ್ಶನಿಕ ಮೌಲ್ಯಗಳನ್ನು ಸಾರಿದ ಶ್ರೇಯಸ್ಸು ಈ ನಾಡಿನ ಶರಣರಿಗೆ ಸಲ್ಲುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದ ತೊರೆನೂರು ವಿರಕ್ತ ಮಠದ ಪೀಠಾಧ್ಯಕ್ಷರಾದ ಶ್ರೀ ಮಲ್ಲೇಶ ಸ್ವಾಮಿಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ (ರಿ.) ಕೊಡಗು ಘಟಕದ ಅಧ್ಯಕ್ಷರಾದ ಶ್ರೀ ಹೆಚ್.ವಿ. ಶಿವಪ್ಪ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಪದಾಧಿಕಾರಿಗಳು ಮತ್ತು ಮಠದ ಭಕ್ತ ಮಂಡಳಿ ಹಾಗೂ ಅಕ್ಕನ ಬಳಗದವರು ಉಪಸ್ಥಿತರಿದ್ದರು.