ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಕೊಡ ಮಾಡುವ ‘ಪೊಳಲಿ ಶೀನಪ್ಪ ಹೆಗ್ಗಡೆ’ ಮತ್ತು ‘ಎಸ್.ಆರ್. ಹೆಗ್ಡೆ’ ಪ್ರಶಸ್ತಿ ಪ್ರದಾನ 2025 ಸಮಾರಂಭವು ದಿನಾಂಕ 12 ಜುಲೈ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ‘ತುಳುನಾಡಿನ ಇತಿಹಾಸ ರಚನೆಯ ಕಾರ್ಯದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆಯವರ ಕಾರ್ಯ ವಿಶಿಷ್ಟವಾದುದು. ಇತಿಹಾಸಗಾರರ ಶ್ರಮದ ಕಾರ್ಯವನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯವಾದುದು” ಎಂದರು.
ಪುರಾತತ್ವ ತಜ್ಞ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಪ್ರಶಸ್ತಿ ಪುರಸ್ಕೃತೆ ಡಾ. ಮಾಲತಿ ಕೃಷ್ಣಮೂರ್ತಿಯವರನ್ನು ಅಭಿನಂದಿಸಿ “ವಸಾಹತು ಕಾಲದ ದಕ್ಷಿಣ ಕನ್ನಡದ ವ್ಯಾಪಾರ ಮತ್ತು ವಾಣಿಜ್ಯದ ಕುರಿತು ಮಾಲತಿಯವರು ನಡೆಸಿದ ಸಂಶೋಧನೆ ಒಳನೋಟಗಳಿಂದ ಕೂಡಿದ್ದು ತುಳುನಾಡಿನ ಇತಿಹಾಸವನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ” ಎಂದರು. ‘ಮೌಖಿಕ ಪರಂಪರೆ ಮತ್ತು ತುಳುವ ಇತಿಹಾಸ’ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ “ತುಳುನಾಡಿನ ಇತಿಹಾಸವನ್ನು ಕಟ್ಟುವಲ್ಲಿ ತುಳುನಾಡಿನ ಮೌಖಿಕ ಸಾಹಿತ್ಯ ಮುಖ್ಯವಾಗುತ್ತದೆ. ಇಲ್ಲಿಯ ಪಾಡ್ದನಗಳು ಜನ ಸಮುದಾಯದ ಇತಿಹಾಸವನ್ನು ತಿಳಿಸುತ್ತಿದ್ದು, ಅಧ್ಯಯನದ ಸಂದರ್ಭದಲ್ಲಿ ಅವುಗಳನ್ನು ಪರಿಗಣಿಸಬೇಕಾಗಿದೆ” ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮಾಲತಿ ಕೃಷ್ಣಮೂರ್ತಿಯವರು ಮಹಿಳಾ ಸಂಶೋದಕರಿಗೆ ಇರುವ ಸವಾಲುಗಳನ್ನು ತಿಳಿಸಿ “ಸಂಶೋಧನಾ ವಿಷಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದೇನೆ. ತನ್ನ ಸಂಶೋಧನ ಫಲಿತವನ್ನು ವಿವಿಧ ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಶುಭ ಹಾರೈಸಿದರು. ಪ್ರಶಸ್ತಿಯ ಪ್ರಾಯೋಜಕರಾದ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಹಾಗೂ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮಾತನಾಡಿ ಪೊಳಲಿ ಶೀನಪ್ಪ ಹೆಗ್ಗಡೆ ಹಾಗೂ ಪತಿ ಎಸ್.ಆರ್. ಹೆಗ್ಗಡೆಯವರು ತುಳುನಾಡ ಇತಿಹಾಸಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮಾಹೆ ಇದರ ಅಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಡಾ. ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು. ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಗಡೆ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಸ್.ಆರ್. ಹೆಗ್ದೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಚಿತ್ರಾಪುರ, ಕೋಶಾಧಿಕಾರಿ ಜ್ಯೋತಿ ಚೇಲ್ಯಾರು, ಸದಸ್ಯರಾದ ಬೆನಟ್ ಅಮ್ಮನ್ನ, ಉದಯ, ಸುಜಾತ, ಹಿರಿಯ ಸಂಶೋಧಕ ತುಕಾರಾಮ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.