ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನವು ಮುಂಬಯಿನ ಪಂಚಮ ನಿಶಾದ್‌ನ ಸಹಯೋಗದೊಂದಿಗೆ `ಬೋಲಾವ ವಿಠಲ’ ಎಂಬ ಸಂಗೀತ ಕಾರ್ಯಕ್ರಮವನ್ನು ದಿನಾಂಕ 20 ಜುಲೈ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದೆ.
ಹಿರಿಯ ಸಂಗೀತ ದಿಗ್ಗಜ ಕಲಾವಿದ ಸಂಜಯ್ ಅಭ್ಯಂಕರ್ ಹಾಗೂ ಶರಯೂ ದಾತೆ ಇವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ. ತಬ್ಲಾದಲ್ಲಿ ಪ್ರಸಾದ್ ಪಾದ್ಯೆ, ಪಕ್‌ವಾಜ್‌ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಅಭಿಷೇಕ್ ಶಿಂಕರ್, ಕೊಳಲಿನಲ್ಲಿ ಶಡಜ್ ಗೋಡ್ಕಿಂಡಿ ಸಾಥ್ ನೀಡಲಿದ್ದಾರೆ.
ದೇಶ ವಿದೇಶದ ನಾನಾ ವೇದಿಕೆಯಲ್ಲಿ ಸಂಗೀತ ಪ್ರಸ್ತುತ ಪಡಿಸಿರುವ ಈ ಶ್ರೇಷ್ಠ ಕಲಾವಿದರ ಅಭಂಗ್ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಮಂಗಳೂರಿನ ಕೋಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಪಾಸ್ ಪಡೆದುಕೊಳ್ಳಬಹುದಾಗಿದೆ. ದೇಶದ ಹಲವು ಶ್ರೇಷ್ಠ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿರುವ ಮುಂಬಯಿಯ ಪಂಚಮ್ ನಿಶಾದ್ ಸಂಸ್ಥೆಯ ಅಭೂತಪೂರ್ವ ಪರಿಕಲ್ಪನೆಯ ಕಾರ್ಯಕ್ರಮವಾಗಿರುವ ‘ಬೋಲಾವ ವಿಠಲ’ ವಿನೂತನ ಸಂತವಾಣಿ ಕಾರ್ಯಕ್ರಮವಾಗಿದೆ. ಈಗಾಗಲೇ ಬೆಂಗಳೂರು, ಮುಂಬಯಿ, ಹೈದರಾಬಾದ್ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ಮಂಗಳೂರಿನ ಕಾರ್ಯಕ್ರಮದ ಆರಂಭದಲ್ಲಿ ಸಂಜಯ್ ಅಭ್ಯಂಕರ್ ಹಾಗೂ ಶರಯೂ ದಾತೆ ಅವರ ಜುಗುಲ್ ಬಂದಿ ನಡೆದರೆ, ಬಳಿಕ ಸಂಜಯ್ ಅಭ್ಯಂಕರ್ ಹಾಗೂ ಶರಯೂ ದಾತೆ ಪ್ರತ್ಯೇಕವಾಗಿ ಹಾಡುಗಾರಿಕೆ ಮಾಡಲಿದ್ದಾರೆ. ಮೇವಾತಿ ಘರಾನಾದ ಮಾಂತ್ರಿಕ ಸಂಜೀವ್ ಅಭ್ಯಂಕರ್, ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮೆಚ್ಚುಗೆ ಪಡೆದ ಕಲಾವಿದರಾಗಿದ್ದಾರೆ. ‘ಗಾಡ್‌ಮದರ್’ ಚಲನಚಿತ್ರಕ್ಕಾಗಿ ಪ್ರಶಸ್ತಿ ಪಡೆದಿರುವ ಸಂಜಯ್ ಅವರು ಮರಾಠಿ, ಹಿಂದಿ ಮತ್ತು ಸಂಸ್ಕೃತ ಭಜನೆಗಳ ಮೂಲಕ ಹೆಸರುವಾಸಿಯಾಗಿದ್ದಾರೆ.
ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದ ಮೂಲಕ ಬಾಲ್ಯದಲ್ಲೇ ವಿಶ್ವಖ್ಯಾತಿ ಪಡೆದಿರುವ ಶರಯೂ ದಾತೆ, ಸಾಮಾಜಿಕ ಚಾಲತಾಣದಲ್ಲಿ ಹಾಡುಗಾರಿಕೆಯ ಮೂಲಕ ತನ್ನದೇ ಚಾಪು ಮೂಡಿಸಿದ ಯುವ ಕಲಾವಿದೆ. ತಾಯಿ ಅಂಜಲಿ ದಾತೆ ಅವರಿಂದ ಸಂಗೀತದ ಆರಂಭಿಕ ಶಿಕ್ಷಣ ಪಡೆದು, ಖ್ಯಾತ ಗಾಯಕಿ ಆರತಿ ಅಂಕಲಿಕರ್ ಟಿಕೇಕರ್ ಇವರಿಂದ ಹೆಚ್ಚಿನ ಅಭ್ಯಾಸ ಮಾಡಿದರು. ಅಭಂಗ್ಸ್, ನಾಟ್ಯ ಸಂಗೀತ ಸೇರಿದಂತೆ ಅರೆ ಶಾಸ್ತ್ರೀಯ ಸಂಗೀತ ಪ್ರಕಾರಗಳನ್ನು ಹಾಡುವಲ್ಲಿಯೂ ಅಷ್ಟೇ ಪ್ರವೀಣರಾಗಿದ್ದಾರೆ. ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 2018, 2019, 2021, 2022, 2023 ಮತ್ತು 2024ರ ಆವೃತ್ತಿಗಳು ನಗರದ ಪುರಭವನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ನಡೆದಿತ್ತು. ಸುಮಾರು ಮೂರೂವರೆ ಗಂಟೆ ಅಂದರೆ ಹಾಡುಗಾರಿಕೆ ಮುಗಿಯುವವರೆಗೂ ಪ್ರೇಕ್ಷಕರು ತುಟಿ ಪುಟಿಕ್ ಎನ್ನದೆ ಕುಳಿತ ಜಾಗದಿಂದ ಕದಲಲಿಲ್ಲ. ಮೂರು ಗಂಟೆಗಳ ಸಮಯ ನಿಗದಿಪಡಿಸಿದ್ದರೂ, ಕಲಾಸಕ್ತರ ಆಸಕ್ತಿಯಿಂದ ಪ್ರೇರಿತರಾದ ಕಲಾವಿದರು ಮೂರೂವರೆ ಗಂಟೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಕಲಾವಿದರೂ ಮಂಗಳ ಹಾಡಿದರು. ಇದೀಗ ಮತ್ತೊಮ್ಮೆ ಅಂತಹ ಶ್ರೇಷ್ಠ ಸಂಗೀತಕ್ಕಾಗಿ ವೇದಿಕೆ ಸಿದ್ಧವಾಗಿದೆ.
ಪಂಚಮ್ ನಿಶಾದ್ ಸಂಸ್ಥೆಯು ಆಷಾಢ ಮಾಸದಲ್ಲಿ ‘ಬೋಲಾವ ವಿಠಲ’ ಶೀರ್ಷಿಕೆಯಡಿ ಪುಣೆ, ಮುಂಬಯಿ, ಹೊಸದಿಲ್ಲಿ, ಗೋವಾ, ಕೋಲ್ಕೊತಾ, ಬೆಂಗಳೂರು ಅಲ್ಲದೆ ದೇಶದ ನಾನಾ ಪ್ರಮುಖ ನಗರಗಳಲ್ಲಿ ಕಳೆದ ಹಲವು ದಶಕಗಳಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ನಗರವಾಸಿಗಳಿಗೆ ಸಂಗೀತದ ಶ್ರೇಷ್ಠತೆ ಪರಿಚಯಿಸಿದ ಬೋಲಾವ ವಿಠಲ್ ತಂಡವನ್ನು 2018ರಿಂದ ಮಂಗಳೂರಿಗೆ ಸಂಗೀತ ಭಾರತಿ ಪ್ರತಿಷ್ಠಾನ ಪರಿಚಯಿಸಿತು. ಇದೀಗ ಮುಂದುವರಿದ ಭಾಗವಾಗಿ ಈ ವರ್ಷವೂ ಕಾರ್ಯಕ್ರಮ ಆಯೋಜಿಸುತ್ತಿದೆ.
ಪಾಂಡುರಂಗನಿಗೆ ಅಭಂಗ್ ರೂಪದಲ್ಲಿ ಆರಾಧನೆ ಶ್ರೇಷ್ಠ. ಪಂಡರಾಪುರದಲ್ಲಿ ಪ್ರತಿದಿನ ಇಂತಹ ಆರಾಧನೆಗಳು ನಡೆಯುತ್ತಿರುತ್ತವೆ. ಆದರೆ ಎಲ್ಲರಿಗೂ ಪಂಡರಾಪುರಕ್ಕೆ ಹೋಗಿ ಆರಾಧನೆ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಭಕ್ತಿ ಒಂದೆಡೆಯಾದರೆ, ಪ್ರತಿಭೆಯ ಅನಾವರಣ ಇನ್ನೊಂದೆಡೆ. ನಿಯಮಿತ ಕಾಲಮಿತಿಯನ್ನು ಕಲಾವಿದರು ತಮ್ಮ ಶ್ರೇಷ್ಠತೆಯನ್ನು ಅನಾವರಣಗೊಳಿಸಲಿದ್ದಾರೆ. ಇದರಿಂದಾಗಿ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗೀತಪ್ರಿಯರಿಗೆ ವಿಭಿನ್ನ ಮಾದರಿಯ ಕಾರ್ಯಕ್ರಮ ಕೇಳಲು ಅವಕಾಶವಾಗಿದೆ ಎನ್ನುತ್ತಾರೆ ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್.