19 ಏಪ್ರಿಲ್ 2023, ಮೈಸೂರು: ಅದಮ್ಯ ರಂಗ ಶಾಲೆ (ರಿ.) ಮೈಸೂರು ಇವರು ಜಿ.ಪಿ.ಐ.ಇ.ಆರ್. ರಂಗ ತಂಡ ಮೈಸೂರು ಸಹಕಾರದೊಂದಿಗೆ ಹನುಮಂತ ಹಾಗೇರಿ ಅವರ ರಚನೆಯ ನಾಟಕ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಇದೇ ಬರುವ ಏಪ್ರಿಲ್ 23ನೇ ಭಾನುವಾರದಂದು ಮೈಸೂರಿನ ಕಲಾಮಂದಿರ ಆವರಣ, ಕಿರು ರಂಗಮಂದಿರ ಇಲ್ಲಿ ಪ್ರದರ್ಶನಗೊಳ್ಳಲಿದೆ .
ಈ ನಾಟಕವನ್ನು ವಿನೋದ ಸಿ. ಮೈಸೂರು (ಸಾಣೆಹಳ್ಳಿ ಪದವೀಧರ, ಎಂ.ಎ ಡ್ರಾಮಾ) ನಿರ್ದೇಶಿಸಿದ್ದು, ಮಧು ಮಳವಳ್ಳಿ ಬೆಳಕಿನ ವಿನ್ಯಾಸ ಮಾಡಲಿದ್ದಾರೆ.
ನಾಟಕದ ಬಗ್ಗೆ:
ಗುಡಿಯಾಗಿನ ಹನುಮಪ್ಪ ಯಾರಿಗೆ ಸೇರಬೇಕು? ಅನ್ನುವುದೇ ಎರಡು ಊರುಗಳ ನಡುವೆ ನಡೆಯುವ ಜಗಳವೇ ಈ ನಾಟಕದ ಕಥಾವಸ್ತು. ಆರಂಭದಲ್ಲಿ ಪೂಜಾರಿ-ರಿಂದಮ್ಮನ ಕನಸಿನಿಂದ ಶುರುವಾದ ಜಗಳಕ್ಕೆ “ರಾಜಕಾರಣ” ಸೇರಿಕೊಂಡು ಬೇರೆಯ ಸ್ವರೂಪ ಪಡೆದುಕೊಳ್ಳುತ್ತದೆ.
ನೂರಾರು ವರ್ಷಗಳಿಂದ ಸಹ ಬಾಳ್ವೆಯಿಂದ ಬದುಕಿದ ಜನರನ್ನು, ಅವರ ಧಾರ್ಮಿಕ ಭಾವನೆಯನ್ನು ಕೆರಳಿಸಿ ತಮ್ಮ ಲಾಭಕ್ಕೆ ರಾಜಕಾರಣಿಗಳು ಬಳಸಿಕೊಳ್ಳುತ್ತಾ , ಅವರಲ್ಲೇ ದ್ವೇಷದ ಕಿಡಿ ಹಚ್ಚುತ್ತಾರೆ. ಇಷ್ಟೆಲ್ಲ ನಡೆದರು ಪಾಪ ಜನರಿಗೆ ತಿಳಿಯುವುದೇ ಇಲ್ಲ ಅನ್ನುವುದೇ ವಿಪರ್ಯಾಸ. ನಂತರ ಹನುಮಪ್ಪನನ್ನು ಪೊಲೀಸ್ ಕಷ್ಟಡಿಗೆ ಹಾಕುವುದು, ಅಲ್ಲಿ ನಡೆಯುವ ನಾಟಕೀಯತೆ, ಮಧ್ಯಮಗಳ ಬ್ರೇಕಿಂಗ್ ನ್ಯೂಸ್, ಪತ್ರಿಕೆಯಲ್ಲಿ ಹನುಮಪ್ಪ ಬಗ್ಗೆ ಬರುವ ವರದಿ ಹೀಗೆ ಸಾಗುತ್ತಾ ನಂತರ ಕೋರ್ಟ್-ಕಚೇರಿಗಳಿಗೆ ಜನರ ನಿರಂತರ ಅಲೆದಾಟಕ್ಕಾಗಿ ಹಣ, ಸಮಯ, ಆಸ್ತಿ ಕಳೆದುಕೊಂಡು ಊರು ಬಿಡುವುದು.
ಇದು ಮೇಲು ನೋಟಕ್ಕೆ ಹಳ್ಳಿಯ ಕಥೆ ಅನ್ನಿಸುವುದು. ಆದರೆ ಇದು ನಾಡಿಗೆ, ದೇಶಕ್ಕೆ ಅನ್ವಯಿಸಿದ್ದು. ದೇವರಿಗಾಗಿ ಇಷ್ಟು ತೀವ್ರವಾಗಿ ಮುಂದೆ ಬರುವ ಜನ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವುದೇ ಇಲ್ಲ ಅನ್ನುವುದೇ ವ್ಯಂಗ!!