ಮಂಗಳೂರು : ‘ಆಯನ ನಾಟಕದ ಮನೆ’ ತಂಡ ಮಂಗಳೂರಿನಲ್ಲಿ ಕಳೆದ ನಾಲ್ಕು ದಶಕಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸದಭಿರುಚಿಯ, ವೈಚಾರಿಕ ನಾಟಕಗಳ ಪ್ರಯೋಗಗಳನ್ನು ನೀಡುತ್ತಾ ಬಂದಿರುತ್ತದೆ. ಈಗ ಮತೊಮ್ಮೆ ‘ಅಶ್ವತ್ಥಾಮ not out’ ಎಂಬ ಹೊಸ ವಿಭಿನ್ನ ನಾಟಕವನ್ನು ನಿರ್ಮಿಸಿದ್ದು, ಬೆಂಗಳೂರಿನ ವಿವಿಧೆಡೆಯಲ್ಲಿ ಇದರ ಪ್ರದರ್ಶನ ನಡೆದಿದ್ದು, ರಂಗ ವಿಮರ್ಶಕರಿಂದ ಭಾರೀ ಪ್ರಶಂಸೆಯನ್ನು ಪಡೆದಿದೆ. ಮಂಗಳೂರಿನಲ್ಲಿ ಮತ್ತೊಮ್ಮೆ ಬಹುಜನರ ಅಪೇಕ್ಷೆಯ ಮೇರೆಗೆ ದಿನಾಂಕ 18 ಜುಲೈ 2025ರ ಶುಕ್ರವಾರ ಸಂಜೆ ಗಂಟೆ 6-30ಕ್ಕೆ ಸರಿಯಾಗಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರಿನ ಲೋಕಹಿತ ಸಾಂಸ್ಕೃತಿಕ ವೇದಿಕೆಯವರು ಈ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಈ ನಾಟಕವನ್ನು ರಚಿಸಿ, ವಿನ್ಯಾಸ ಮತ್ತು ನಿರ್ದೇಶನ ಮಾಡಿದವರು ಮೋಹನಚಂದ್ರ ಉರ್ವ. ಚಂದ್ರಹಾಸ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮತ್ತು ಡಾ. ದಿನೇಶ್ ನಾಯಕ್ ಇವರು ಈ ನಾಟಕದಲ್ಲಿ ಅಭಿನಯಿಸುತ್ತಾರೆ. ಉಚಿತ ಪ್ರವೇಶದೊಂದಿಗೆ ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ 6-30 ಗಂಟೆಗೆ ಸರಿಯಾಗಿ ನಾಟಕ ಪ್ರಾರಂಭವಾಗುತ್ತದೆ.
ನಾಟಕದ ಬಗ್ಗೆ :
ಮಹಾಭಾರತದ ಹಲವಾರು ದುರಂತ ಪಾತ್ರಗಳಲ್ಲಿ ಅಶ್ವತ್ಥಾಮನ ಪಾತ್ರವೂ ಒಂದು. ಕುರುಕ್ಷೇತ್ರ ಯುದ್ಧದ ಬಳಿಕ ಉಪಪಾಂಡವರ ಹತ್ಯೆಯ ಕಾರಣದಿಂದಾಗಿ ಸಾವಿಲ್ಲದೆ ಸದಾ ಮರಣಕ್ಕಾಗಿ ಹಪಹಪಿಸುವ ಶಾಪಗ್ರಸ್ತ. ನಾಟಕ ಸುತ್ತುವುದೇ ಸಾವಿಲ್ಲದ ಬದುಕು ಒಂದು ಶಾಪ ಎಂದು ಗ್ರಹಿಸಿದ (ಕೃಷ್ಣನ) ಚಿಂತನೆ ; ಸತ್ತಿದ್ದರೂ ಇನ್ನೂ ಅಜರಾಮರ ಎಂದು ಬದುಕುವ (ಅಶ್ವತ್ಥಾಮನ) ಮನ:ಸ್ಥಿತಿ. ಇವೆರಡರ ನಡುವೆ ತನ್ನವರ ಕೊಲೆಯ ಪ್ರತೀಕಾರದಿಂದ ನಿರ್ಮಾಣಗೊಂಡ ಯುದ್ಧದ ಕಾರಣಗಳ ಹಿಂದಿರುವ (ಶಕುನಿಯ) ಮರ್ಮ..
ಈ ಮೇಲಿನ ಮೂರೂ ಪಾತ್ರಗಳು ನಾವೇ ಅಲ್ಲವೇ..? ಅದು ನಮ್ಮೊಳಗೇ ಇಲ್ಲವೇ..? ಸಹಸ್ರಾರು ಕಾಲ ಸಾವಿನ ಸರಮಾಲೆಯನ್ನೇ ಕಂಡ ಈ ಜಗತ್ತಿನಲ್ಲಿ ನಾವು ರಕ್ತ ಪಿಪಾಸು ರಾಜಕಾರಣದ ಪ್ರಲೋಭನೆಗೆ ಸಿಲುಕಿ ಯುದ್ಧೋನ್ಮಾದಿ ಮನಸ್ಥಿತಿಗೆ ತುತ್ತಾಗಿದ್ದೇವೆ ಅಲ್ಲವೇ..? ಸರಣಿ ಸಾವಿನ ಕಥಾನಕವೇ ಆಗಿರುವ ಮಹಾಕಾವ್ಯ ಮಹಾಭಾರತದಿಂದ ನಮಗಿನ್ನೂ ಪಾಠ ಕಲಿಯಲು ಸಾಧ್ಯವಾಗಿದೆಯೆ..? ಸ್ವಸ್ಥ ಮನಸ್ಸುಗಳಿಗೆ ಕಾಲ ಪಕ್ವಗೊಂಡಿಲ್ಲವೇ..?