ಮಂಗಳೂರು : ಕೊಟ್ಟಾರದ ಭರತಾಂಜಲಿ ಸಂಸ್ಥೆಯು ಪ್ರಸ್ತುತ ಪಡಿಸಿದ ಕಿಂಕಿಣಿ ತ್ರಿಂಶತ್ – ಭರತಾಂಜಲಿಯ 30 ಸಂವತ್ಸರಗಳ ಸಂಭ್ರಮಾಚರಣೆಯ ಪ್ರಯುಕ್ತ ‘ನೃತ್ಯಾಮೃತಂ 2025’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 12 ಜುಲೈ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿದ್ವಾನ್ ಬಾಳಂಭಟ್ ಮನೆತನದ ಡಾ. ಸತ್ಯಕೃಷ್ಣ ಭಟ್ “ಸಂಸ್ಕೃತ ಭಾಷೆ ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯು ದೇಶವನ್ನು ವಿಶ್ವಗುರುವಿನ ಪಥದತ್ತ ಕೊಂಡೊಯ್ಯುವ ಪ್ರಮುಖ ಶಕ್ತಿ. ನಮ್ಮ ದೇಶದ ಸಂಸ್ಕೃತಿ, ನೃತ್ಯ ಪ್ರಕಾರ, ಸಂಗೀತ, ವೇದ, ಗುರುಪರಂಪರೆಯು ವಿಶ್ವವನ್ನೇ ಸೆಳೆಯುತ್ತಿದೆ. ಶಾಸ್ತ್ರಗಳ ತತ್ವಗಳನ್ನು ಸಂಪೂರ್ಣವಾಗಿ ಅರಿತು, ಅವುಗಳನ್ನು ಮೈಗೂಡಿಸಿಕೊಂಡು, ತನ್ನ ಶಿಷ್ಯನ ಏಳಿಗೆಗಾಗಿ ಅವುಗಳನ್ನು ಸಂಪೂರ್ಣವಾಗಿ ಧಾರೆ ಎರೆದು, ಶಿಷ್ಯನ ಏಳಿಗೆಗಾಗಿ ಹಗಲು – ಇರುಳು ಯಾರು ಶ್ರಮಿಸುತ್ತಾರೋ ಅವರು ನಿಜವಾದ ಗುರುಗಳು ಎಂದು ಶಾಸ್ತ್ರ ಹೇಳಿದೆ. ಅಂತಹ ಗುರು ಶಿಷ್ಯ ಪರಂಪರೆಯನ್ನು ಇಂದು ನಾವು ಭರತನಾಟ್ಯ ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ. ಸರ್ವಶ್ರೇಷ್ಠ ಗುರು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಭರತಾಂಜಲಿ ಸಂಸ್ಥೆಯು ಕಳೆದ 30 ವರ್ಷದಿಂದ ಗಣನೀಯ ಕೊಡುಗೆ ನೀಡುತ್ತಿದೆ. ಋಷಿ ಮುನಿಗಳು ನಮಗೆ ಜ್ಞಾನ ಭಂಡಾರವನ್ನೇ ಅನುಗ್ರಹಿಸಿದ್ದಾರೆ. ಅದನ್ನು ಕಾಪಾಡಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಜವಾಬ್ದಾರಿಯನ್ನು ಭರತಾಂಜಲಿ ಸಂಸ್ಥೆಯು ಪ್ರಭುದ್ಧವಾಗಿ ನಿರ್ವಹಣೆ ಮಾಡುತ್ತಿದೆ.” ಎಂದು ಹೇಳಿದರು.
“ಪಂದನಲ್ಲೂರು ಶೈಲಿ ಪದ್ಧತಿಯ ಭರತನಾಟ್ಯವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ತನ್ನ ಹೆಮ್ಮೆಯ ಶಿಷ್ಯರು ಭರತಾಂಜಲಿ ಸಂಸ್ಥೆಯ ಮೂಲಕ ಮಾಡುತ್ತಿರುವುದು ಶ್ಲಾಘನೀಯ” ಎಂದು ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಮಕ್ಕಳಿಗೆ ಆಧುನಿಕ ಶಿಕ್ಷಣದೊಂದಿಗೆ ಶಾಸ್ತ್ರೀಯ ನೃತ್ಯ, ಸಂಗೀತವನ್ನು ಗುರುಪರಂಪರೆಯಲ್ಲಿ ಕಲಿಸುವುದರಿಂದ ಅವರಲ್ಲಿ ಸಂಸ್ಕಾರ ಮೈ ಗೂಡುತ್ತದೆ. ಸಂಸ್ಕಾರವನ್ನು ಅರಿತುಕೊಂಡರೆ ಕುಟುಂಬ ಕಲ್ಪನೆ ಸುದೃಢವಾಗಲಿದೆ. ಭರತಮುನಿಯಿಂದ ನಮಗೆ ಬಂದ ಈ ಭರತನಾಟ್ಯ ಶಾಸ್ತ್ರವು ನಮ್ಮ ನೃತ್ಯ ಸಂಸ್ಕೃತಿಯೊಂದಿಗೆ ಗುರು ಪರಂಪರೆಯನ್ನು ಮುಂದುವರಿಸಿಕೊoಡು ಹೋಗುವ ಮೂಲಕ ಸ್ವಾಸ್ಥ್ಯ ಸಮಾಜ ಸೃಷ್ಟಿಸುತ್ತಿದೆ. ಮಾನವ ಸಂಬಂಧವನ್ನು ಬೆಸೆಯುತ್ತದೆ” ಎಂದು ಹೇಳಿದರು.
ನಿರ್ಮಿತಿ ಕೇಂದ್ರ ಸುರತ್ಕಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ “ಮಕ್ಕಳನ್ನು ಮುದ್ದಾಗಿ ಬೆಳೆಸುವುದರ ಜೊತೆಗೆ ಇಂತಹ ಕಲಾ ಶಿಕ್ಷಣ ನೀಡಿದಾಗ ಸಮಾಜದ ಅರಿವಿನ ಜೊತೆಗೆ ಪ್ರಬುದ್ಧರಾಗುತ್ತಾರೆ” ಎಂದರು. ಗುರು ಶ್ರೀಧರ ಹೊಳ್ಳ ಸ್ವಾಗತಿಸಿ, ನೃತ್ಯ ಗುರು ಪ್ರತಿಮಾ ಶ್ರೀಧರ್ ವಂದಿಸಿದರು, ಪ್ರಕ್ಷಿಲಾ ಜೈನ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು.
https://www.instagram.com/reel/DMCh5p7PmPz/?igsh=NWlpcmE2MXFmcWp2