19 ಏಪ್ರಿಲ್ 2023, ಬೆಂಗಳೂರು: ಸ್ಟೇಜ್ ಬೆಂಗಳೂರು ಪ್ರಸ್ತುತ ಪಡಿಸಿದ ಮಕ್ಕಳ ಥಿಯೇಟರ್ ಹಬ್ಬ ಏಪ್ರಿಲ್ -2023 ಇದರ ಅಂಗವಾಗಿ ನಾಟಕ ‘ಬದುಕಿನ ಬಣ್ಣ’ ದಿನಾಂಕ 12-04-2023ನೇ ಬುಧವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ನಯನ ಸಭಾಂಗಣದಲ್ಲಿ ನಡೆಯಿತು. ಸಂಜಯ್ ನಟನ ಮತ್ತು ಶೇಖರ್ ನಟನ ಇವರು ವಿನ್ಯಾಸ ಮತ್ತು ನಿರ್ದೇಶಿಸಿದ್ದು, ಸುಪ್ರೀತ್ ರವರ ಸಂಗೀತ ಈ ನಾಟಕಕಿದೆ.
“ಬದುಕಿನ ಬಣ್ಣ”
ಆಧುನಿಕ ಹಾಗೂ ಖಾಸಗೀಕರಣಗಳು ಮಾನವನಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಮ್ಮ ಸಂಸ್ಕೃತಿ, ಕಾಡು, ಪ್ರಾಣಿ, ಪಕ್ಷಿಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು. ಮಹಾನಗರಗಳಲ್ಲಂತೂ ಮರ ಗಿಡಗಳು, ಪಕ್ಷಿಗಳು ಕಾಣ ಸಿಗುವುದೇ ವಿರಳ. ಎಲ್ಲಾ ಮರ ಗಿಡಗಳ ಜಾಗದಲ್ಲಿ ಬಹು ಮಹಡಿಯ ಕಟ್ಟಡಗಳು, ಡಾಂಬರು ರಸ್ತೆ, ಫೈ-ಓವರ್‌ಗಳು, ವಾಹನಗಳ ಕಿರಿಕಿರಿ ಶಬ್ದ, ಕಾಲಿಗೆ ಚಕ್ರ ಕಟ್ಟಿಕೊಂಡಿರುವಂತೆ ತಮ್ಮ ಕೆಲಸಗಳತ್ತ ಓಡಾಡುವ ಜನರು. ತಮ್ಮ ಮಕ್ಕಳ ಬಗ್ಗೆಯೇ ಕಾಳಜಿ ವಹಿಸದ ಜನರು ಇನ್ನು ಮರ ಗಿಡಗಳ, ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ವಹಿಸುವರೇ…???
ಇದೆಲ್ಲದರ ನಡುವೆ ಒಂದು ಕಾಗೆ ತನ್ನ ಮೊಟ್ಟೆಯನ್ನು ಕಳೆದುಕೊಂಡು ಪಡುವ ಕಷ್ಟ ಅದರ ಬಳಗದೊಡನೆ ಅದನ್ನು ಹುಡುಕುತ್ತಾ ಸಾಗುವ ಅದರ ಕಥೆ ನಂತರ ಮೀಡಿಯಾದವರು ತಮ್ಮ ಸ್ವಾರ್ಥಕ್ಕಾಗಿ ಕಾಗೆಮರಿ ಬಳಗದವರನ್ನು ಬಳಸಿಕೊಳ್ಳುವ ರೀತಿ ಅದರೊಂದಿಗೆ ಖಾಸಗಿ ಶಾಲೆಗಳ ಹಾವಳಿ. ಹೀಗೆ ಹತ್ತು ಹಲವಾರು ಸಂಗತಿಗಳಿಂದ ಕೂಡಿಸಿ, ಜೋಡಿಸಿ ಬಾಸುಮ ಕೊಡಗುರವರು ನಾಟಕವನ್ನು ಅದ್ಭುತವಾಗಿ ರಚಿಸಿದ್ದಾರೆ.
ಸ್ಟೇಜ್ ಬೆಂಗಳೂರು
ಸ್ಟೇಜ್ ಬೆಂಗಳೂರು ಕರ್ನಾಟಕ ಸರ್ಕಾರದ ಅಧೀನದಲ್ಲಿ ನೋಂದಾಯಿತ ಸಂಸ್ಥೆಯಾಗಿದ್ದು, ಯುವ ಪೀಳಿಗೆ ಮತ್ತು ರಂಗಭೂಮಿ ಉತ್ಸಾಹಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯೊಂದಿಗೆ ಏಪ್ರಿಲ್ 07, 2019ರಂದು ಸ್ಥಾಪಿಸಲಾಗಿದೆ. ಇದು ಭಾರತದಾದ್ಯಂತ ವ್ಯವಸ್ಥಿತವಾಗಿ ಸಾಂಸ್ಕೃತಿಕ ಮತ್ತು ನಾಟಕ ಪ್ರದರ್ಶನಗಳ ಪ್ರಚಾರ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದೆ. ನಾವು ವೃತ್ತಿಪರವಾಗಿ ಸಾಂಸ್ಕೃತಿಕ ಮತ್ತು ರಂಗಭೂಮಿ ಸಂಬಂಧಿತ ಚಟುವಟಿಕೆಗಳಲ್ಲಿ ತರಬೇತಿ, ಅಭ್ಯಾಸ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇವೆ.
ಸ್ಟೇಜ್ ಬೆಂಗಳೂರು ಥಿಯೇಟರ್ ತಂಡವು ವಿವಿಧ ಐಟಿ ಕಂಪನಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಪ್ರದರ್ಶನ ಕಲೆ ಆಧಾರಿತ ಶಿಕ್ಷಣ ಮತ್ತು ನಾಟಕ ಶಿಕ್ಷಣವನ್ನು ನೀಡಿದೆ. ಸ್ಟೇಜ್ ಬೆಂಗಳೂರು ಥಿಯೇಟರ್ ತಂಡವು ತನ್ನ ಸುಮಾರು ನಾಲ್ಕು ವರ್ಷಗಳ ಪಯಣದಲ್ಲಿ ರಾಜ್ಯಾದ್ಯಂತ ಮೂರಕ್ಕಿಂತಲೂ ಹೆಚ್ಚು ನಾಟಕೋತ್ಸವ ಮತ್ತು ಅನೇಕ ನಾಟಕ ಪ್ರದರ್ಶನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.
ಸಂಸ್ಥೆಯು ರಂಗಭೂಮಿಯ ಜೊತೆಗೆ ಸಿನೆಮಾ, ಕಿರುಚಿತ್ರ, ಕ್ರೀಡೆ, ಸಂಗೀತ, ನೃತ್ಯ, ಮಾಡಲ್ಲಿಂಗ್, ಮೇಕ್ಅಪ್, ಕಾರ್ಪೊರೇಟ್ ಇವೆಂಟ್ಗಳು, ಸಮಾಜಮುಖಿ ಕೆಲಸಗಳು, ಮಕ್ಕಳ ಕಾರ್ಯಕ್ರಮಗಳು ಹೀಗೆ ಅನೇಕ ಚಟುವಟಿಕೆಗಳನ್ನು ನಡೆಸಿ ಯಶಸ್ವಿಯಾಗಿದೆ.
ಸಂಸ್ಥೆಯ ಸ್ಥಾಪಕರ ಬಗ್ಗೆ
ಯೋಗೇಶ್ ಎಸ್., S/o ಶ್ರೀನಿವಾಸ್, ಓದಿನಲ್ಲಿ ಪದವಿ ಪಡೆದು, ನಂತರ ಒಂದು ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಚಿಕ್ಕಂದಿನಿಂದ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಮೇಲೆ ಎಲ್ಲಿಲ್ಲದ ಆಸಕ್ತಿ, ಒಲವು. ಹಾಗೆಯೇ ಕಾಲಕ್ರಮೇಣ ಈ ಕ್ಷೇತ್ರಗಳಲ್ಲಿ ಏನಾದರೂ ಸಾಧಿಸಬೇಕೆಂಬ ಧೃಢ ನಿರ್ಧಾರದಿಂದ ಇಟ್ಟ ಮೊದಲನೇ ಹೆಜ್ಜೆಯೇ ಸ್ಟೇಜ್ ಬೆಂಗಳೂರು ಸಂಸ್ಥೆಯ ಸ್ಥಾಪನೆ. ಮೊದಲಿನಿಂದ ಇಲ್ಲಿಯವರೆಗೂ ಸ್ಟೇಜ್ ಬೆಂಗಳೂರು ಅನೇಕ ಕಾರ್ಯಕ್ರಮಗಳನ್ನು ಮಾಡಿ ಸೈ ಏನಿಸಿಕೊಂಡು ಬಂದಿದೆ. ಅನೇಕ ರಂಗಭೂಮಿ ದಿಗ್ಗಜರುಗಳ ಆಶೀರ್ವಾದ ಯೋಗೇಶ್ ರನ್ನು ಒಬ್ಬ ಯಶಸ್ವಿ ಸಂಘಟಕನಾಗಿ ರೂಪಿಸಿದೆ. 4 ವರ್ಷದ ಅವರ ಈ ಕಲಾ ಸೇವೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಜಂಟಿಯಾಗಿ 2019-20ನೇ ಸಾಲಿನ “ಸುವರ್ಣ ಕನ್ನಡಿಗ” ರಾಜ್ಯ ಪ್ರಶಸ್ತಿ, 2020-21ನೇ ಸಾಲಿನ “ರತ್ನ ಶ್ರೀ” ರಾಜ್ಯ ಪ್ರಶಸ್ತಿ ಹಾಗೂ 2021-22ನೇ ಸಾಲಿನ “ಡಾ|| ರಾಜಕುಮಾರ್ ಸದ್ಭಾವನಾ” ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಅವರ ಕಲಾ ಸೇವೆಯಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತು, ಸಂಸ್ಥೆಯ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾದವರು ಅವರ ಪತ್ನಿ ಶ್ರೀಮತಿ ಆಶಾ ಯೋಗೇಶ್ (ಪ್ರಧಾನ ಕಾರ್ಯಧರ್ಶಿಗಳು).