ಮಂಗಳೂರು : ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ದಿನಾಂಕ 13 ಜುಲೈ 2025ರಂದು 24 ಗಂಟೆಗಳ ನಿರಂತರ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂರವರ ಹಾಡುಗಳನ್ನು ಹಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವದಾಖಲೆ ಮೂಡಿಸಿರುವ ಗಾಯಕ ವಿದ್ವಾನ್ ಯಶವಂತ್ ಎಂ.ಜಿ. ಇವರಿಗಾಗಿ ಏರ್ಪಡಿಸಿದ್ದ ‘ಯಶೋಭಿನಂದನೆ’ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿದ ವಿದ್ವಾನ್ ಯಶವಂತ್ ಎಂ.ಜಿ. ಮಾತನಾಡಿ “ಸಾಧನೆ ಮಾಡುವವರಿಗೆ ಸವಾಲುಗಳು ಎದುರಾಗುವುದು ಸಹಜ. ಆದರೆ ಶ್ರದ್ಧೆ, ಛಲ ಹಾಗೂ ದೈವಾನುಗ್ರಹದಿಂದ ಆ ಸವಾಲುಗಳನ್ನೆದುರಿಸಿ ಯಶಸ್ಸನ್ನು ಸಾಧಿಸಲು ಸಾಧ್ಯ. ಸಂಗೀತಪ್ರೇಮಿಗಳ ನಿರಂತರ ಪ್ರೋತ್ಸಾಹವೇ ನನ್ನ ಸಾಧನೆಗೆ ಶಕ್ತಿ ತುಂಬಿತು” ಎಂದು ಹೇಳಿದರು.
“ಗಾಯನದಲ್ಲಿ ವಿಶ್ವದಾಖಲೆ ಮಾಡಿರುವ ಯಶವಂತ್ ಎಂ.ಜಿ.ಯವರ ಸಾಧನೆ ಅನುಪಮವಾದುದು. ಅವರ ಮುಂದಿನ ಸಾಧನೆಗೆ ಎಲ್ಲಾ ರೀತಿಯ ಸಹಯೋಗ ನೀಡುವುದಲ್ಲದೆ, ವಿಶ್ವಕರ್ಮ ಕಲಾ ಪರಿಷತ್, ಕಲಾವಿದರ ಹಾಗೂ ಕುಶಲಕರ್ಮಿಗಳ ಅಭ್ಯುದಯಕ್ಕಾಗಿ ಹಮ್ಮಿಕೊಂಡಿರುವ ಯೋಜನೆಗಳ ಅನುಷ್ಠಾನಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ” ಸಮಾರಂಭದ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನುಡಿದರು.
ಖ್ಯಾತ ಚಲನಚಿತ್ರ ಸಾಹಿತಿ, ‘ಸಿಂಗಾರ ಸಿರಿಯೆ’ ಖ್ಯಾತಿಯ ಗೀತರಚನೆಕಾರ ಪ್ರಮೋದ್ ಮರವಂತೆ ಹಾಗೂ ಅವರ ಧರ್ಮಪತ್ನಿ ಖ್ಯಾತ ಗಾಯಕಿ ಸುಚೇತಾ ಬಸ್ರೂರು ಇವರನ್ನು ಈ ಸಂದರ್ಭದಲ್ಲಿ ಸಂಮಾನಿಸಲಾಯಿತು. “ಎಳವೆಯಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಭಿರುಚಿಯಿರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೆತ್ತವರು ಪ್ರೇರೇಪಿಸಬೇಕು” ಎಂದು ಪ್ರಮೋದ್ ಮರವಂತೆ ನುಡಿದರು.
ಕ್ಷೇತ್ರದ ಮಾಜಿ ಮೊಕ್ತೇಸರರಾದ ಮುನಿಯಾಲ್ ದಾಮೋದರ ಆಚಾರ್ಯ ದೀಪ ಪ್ರಜ್ವಲನಗೈದು ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರದ ಆಡಳಿತಾಧಿಕಾರಿ ಕೆ. ಉಮೇಶ ಆಚಾರ್ಯ ಪಾಂಡೇಶ್ವರ ಶುಭಾಶಂಸನೆ ಗೈದರು. ಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ “ವಿದ್ವಾನ್ ಯಶವಂತರು ಪರಂಪರೆಯ ಕೈಹಿಡಿದ ಕಾರಣ ಪರಂಪರೆಯ ಶಕ್ತಿ ಅವರ ಕೈಬಿಡಲಿಲ್ಲ” ಎಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು.
ಖ್ಯಾತ ಕೀರ್ತನಕಾರ ಹಾಗೂ ಸಂಗೀತ ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಅಭಿನಂದನಾ ನುಡಿಗಳನ್ನಾಡಿದರು. ಮ.ನ.ಪಾ. ಮಾಜಿ ಸದಸ್ಯ ಕಲಾವಿದ ಜಗದೀಶ ಶೆಟ್ಟಿ, ಓಂ ಗುರುಜೀ ಜ್ಯುವೆಲ್ ವರ್ಕ್ಸ್ ನ ಮಾಲಕರಾದ ರಾಜಗೋಪಾಲ ಆಚಾರ್ಯ, ಎಂ.ಟಿ.ಸಿ.ಯ ಮಾಲಕರಾದ ಬಿ. ಸತೀಶ ರಾವ್, ಕಲಾ ಪರಿಷತ್ತಿನ ಗೌರವಾಧ್ಯಕ್ಷರಾದ ಪಿ.ಎನ್. ಆಚಾರ್ಯ ಶುಭ ಹಾರೈಸಿದರು. ಕಲಾ ಪರಿಷತ್ತಿನ ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಮ್ಯಾ ಲಕ್ಷ್ಮೀಶ್ ಪ್ರಸ್ತಾವನೆ ಗೈದರು. ಜಗದೀಶ ಸಿದ್ಧಕಟ್ಟೆ ಹಾಗೂ ಹರಿದಾಸ್ ಎಸ್.ಪಿ. ಆಚಾರ್ಯ ಅಭಿನಂದನಾ ಪತ್ರ ವಾಚಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಶ್ವಕರ್ಮ ಕಲಾ ಪರಿಷತ್ ಎಳೆಯರ ತಂಡವನ್ನು ಅಭಿನಂದಿಸಲಾಯಿತು. ಪರಿಷತ್ತಿನ ಗೌರವ ಸಲಹೆಗಾರ ಸುಂದರ ಆಚಾರ್ಯ ಬೆಳುವಾಯಿ ವಂದಿಸಿದರು. ಖಜಾಂಚಿ ಎ.ಜಿ. ಸದಾಶಿವ, ಸಂಘಟನಾ ಕಾರ್ಯದರ್ಶಿ ಯಜ್ಞೇಶ್ವರ ಕೃಷ್ಣಾಪುರ, ಗೌರವ ಸಲಹೆಗಾರರಾದ ಪ್ರೊ. ಜಿ. ಯಶವಂತ ಆಚಾರ್ಯ, ದಿನೇಶ್ ಟಿ. ಶಕ್ತಿನಗರ, ಪದಾಧಿಕಾರಿಗಳಾದ ವೈ.ಎನ್. ತಾರಾನಾಥ ಆಚಾರ್ಯ, ಸುಧಾಮ ಆಚಾರ್ಯ, ನಾಗರಾಜ ಕೆ.ಎಸ್., ಅರ್ಚನಾ ಆಕಾಶಭವನ, ಶರ್ಮಿಳಾ ಪಯ್ಯಾಲ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ವಾನ್ ಎನ್.ಆರ್. ದಾಮೋದರ ಶರ್ಮ ಹಾಗೂ ಉದಯ ಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಡೆದ ಗಾನ ಕುಂಚ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ವಾನ್ ಯಶವಂತ್ ಎಂ.ಜಿ.ಯವರ ಗಾಯನಕ್ಕೆ ಕಲಾವಿದ ಜೆ.ಪಿ. ಆಚಾರ್ಯರ ನೇತೃತ್ವದಲ್ಲಿ ವಿಶ್ವಕರ್ಮ ಕಲಾ ಪರಿಷತ್ತಿನ ಯುವ ಕಲಾವಿದರಾದ ಮಹೇಂದ್ರ ವಕ್ವಾಡಿ, ಕು. ಗಾಯತ್ರಿ, ಮಾ. ಜ್ಯೇಷ್ಠ ಹಾಗೂ ಅಭಿಷೇಕ್ ಲೈವ್ ಆರ್ಟನ್ನು ಪ್ರದರ್ಶಿಸಿ ಎಲ್ಲರ ಮನಸೆಳೆದರು. ಸಮಾರಂಭಕ್ಕೆ ಮುನ್ನ ಕೊಂಡೆವೂರು ಸಹೋದರಿಯರಾದ ಕುಮಾರಿ ಗಾಯತ್ರೀ, ಕುಮಾರಿ ಶ್ರಾವಣ್ಯ ಮತ್ತು ಕುಮಾರಿ ಮೋಕ್ಷಪ್ರಭಾ ಇವರು ವಯೊಲಿನ್ ಟ್ರಯೋ ಸಂಗೀತ ಕಛೇರಿ ನಡೆಸಿಕೊಟ್ಟರು. ವಿದ್ವಾನ್ ಮನೋಹರ ರಾವ್ ಹಾಗೂ ಸುಧಾಮ ಆಚಾರ್ಯ ಹಿಮ್ಮೇಳದಲ್ಲಿ ಸಹಕರಿಸಿದರು.
https://www.instagram.com/reel/DMGJiquTTxe/?igsh=YjZvZzFxZmYwOHpj