19 ಏಪ್ರಿಲ್ 2023, ಮೈಸೂರು: ಅಭಿಯಂತರರು ಪ್ರಸ್ತುತ ಪಡಿಸುವ “ಮರಣ ಮೃದಂಗ” ರಂಗ ಪ್ರಯೋಗವು ದಿನಾಂಕ:23-04-2023ರ ಬಾನುವಾರ ಸಂಜೆ 6-30ಘಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ನಾಡಿನ ಪ್ರಖ್ಯಾತ ನಾಟಕಕಾರ ಹಾಗೂ ರಂಗನಿರ್ದೇಶಕರಾದ ಶ್ರೀ ರಾಜೇಂದ್ರ ಕಾರಂತರವರು ರಚಿಸಿ ನಿರ್ದೇಶಿಸಿದ್ದು, ಈ ರಂಗ ಪ್ರಯೋಗದ ನಿರ್ವಹಣೆ ಹೆಚ್.ಎಸ್. ಸುರೇಶ್ ಬಾಬು ಅವರದ್ದು.
ಮರಣ ಮೃದಂಗ:
ನಾಡಿನ ಪ್ರಖ್ಯಾತ ನಾಟಕಕಾರ ಹಾಗೂ ರಂಗನಿರ್ದೇಶಕರಾದ ಶ್ರೀ ರಾಜೇಂದ್ರ ಕಾರಂತರವರು ರಚಿಸಿರುವ ‘ಮರಣ ಮೃದಂಗ’ ನಾಟಕವು ಅಧಿಕಾರದಲ್ಲಿರುವ ವ್ಯಕ್ತಿಯು ತಾನು ಎಲ್ಲಕ್ಕು ಅತೀತ ಎಂದು ಭಾವಿಸಿ ಬಿಡುತ್ತಾನೆ. ಸಾವು ಮನೆ ಬಾಗಿಲನ್ನು ಬಡಿದಾಗಲೇ ಮನುಷ್ಯನಿಗೆ ತಾನೆಷ್ಟು ಅಸಹಾಯಕ ಎಂಬ ಸತ್ಯ ಅರಿವಾಗುವುದು. ಅಂತಹ ಒಬ್ಬ ದುರಹಂಕಾರಿ ಹಾಗೂ ರಾಜಕೀಯ ನಾಯಕನ ಸಾವಿನ ಹೊಸ್ತಿಲಿನ ಸಂವೇದನೆಗಳೇ ಮರಣ ಮೃದಂಗ.
ನಿರ್ದೇಶಕರ ಬಗ್ಗೆ:
ಶ್ರೀ ರಾಜೇಂದ್ರ ಕಾರಂತ ಕನ್ನಡ ನಾಡಿನ ಪ್ರತಿಭಾವಂತ ರಂಗನಿರ್ದೇಶಕ ಹಾಗೂ ನಾಟಕಕಾರರು. 50ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿರುವ ಇವರು 100ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ 1000ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. 2008ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುವ ಶ್ರೀಯುತರು 2012ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ.
ತಂಡದ ಬಗ್ಗೆ:
‘ಅಭಿಯಂತರರು’ ಸಂಸ್ಠೆಯು 1993ರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸ್ಥಾಪಿತಗೊಂಡು ಈವರೆಗೆ ಸಾಂಸ್ಕೃತಿಕ ಮತ್ತು ರಂಗಭೂಮಿಯ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುತ್ತದೆ ಹಾಗೂ 24ಕ್ಕೂ ಹೆಚ್ಚು ನಾಟಕಗಳನ್ನು ರಂಗಪ್ರಯೋಗ ಮಾಡಿ ದೇಶಾದ್ಯಂತ ಪ್ರದರ್ಶಿಸಿದೆ. ಈ ತಂಡವು ಒಂದು ವಿನೂತನವಾದಂತಹ ಸಂಸ್ಥೆಯಾಗಿದ್ದು, ಇಂಜಿನಿಯರ್‌ಗಳಿಂದ, ಇಂಜಿನಿಯರ್‌ಗಳಿಗಾಗಿ ಸ್ಥಾಪಿಸಿದ ಕರ್ನಾಟಕದ ಏಕೈಕ ರಂಗವೇದಿಕೆ. ‘ಅಭಿಯಂತರರು’ ಸಂಸ್ಠೆಯು ಇಂಜಿನಿಯರ್ ಪದವೀಧರರು, ಇಂಜಿನಿಯರಿಂಗ್ ಮತ್ತು ಡಿಪ್ಲೋಮ ಇಂಜಿನಿಯರಿಂಗ್ ವಿದ್ಯಾರ್ಥಿ ವಿದ್ಯಾರ್ಥಿಯನಿಯರಿಗಾಗಿ ‘ರಂಗಭೂಮಿಯತ್ತ………’ ರಂಗ ತರಬೇತಿ ಶಿಬಿರವನ್ನು 2008ರಿಂದ ಆಯೋಜಿಸುತ್ತಾ ಬಂದಿರುತ್ತಾರೆ. ಈ ಶಿಬಿರದಲ್ಲಿ ಮೈಸೂರಿನ ವಿವಿಧ ಇಲಾಖೆಯ ಇಂಜಿನಿಯರ್‌ಗಳು ಮತ್ತು 12ಕ್ಕೂ ಹೆಚ್ಚು ಇಂಜಿನಿಯರಿಂಗ್ ಮತ್ತು ಡಿಪ್ಲೋಮ ಇಂಜಿನಿಯರಿಂಗ್ ಕಾಲೇಜಿನ 600ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದಾರೆ. ಕನ್ನಡ ನಾಡಿನ ಯುವಜನತೆ ಕನ್ನಡ ಸಾಂಸ್ಕೃತಿಕ ಮತ್ತು ಭಾಷೆಯ ಓದುವಿಕೆಯ ಬಗ್ಗೆ ನಿರಾಸಕ್ತಿ ಹೊಂದಿ, ತಂತ್ರಜ್ಞಾನದ ಬೆನ್ನುಹತ್ತಿರುವ ಈ ಸಂದರ್ಭದಲ್ಲಿ ಈ ತಂಡವು ಹೆಚ್ಚಿನ ಯುವಜನರನ್ನು ರಂಗಭೂಮಿಯತ್ತ ಸೆಳೆಯಲು, ಕಾರ್ಯೋನ್ಮುಖರಾಗಿ ಕೆಲಸ ಮಾಡುತ್ತಿದೆ.