ಬೆಂಗಳೂರು : ಖ್ಯಾತ ನಾಟ್ಯಗುರು ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ವಿದುಷಿ ಜ್ಯೋತಿ ಪಟ್ಟಾಭಿರಾಮ್ ಅವರು ನೃತ್ಯ ಕ್ಷೇತ್ರದಲ್ಲಿ ಮಾಡಿರುವ ಹಲವು ದಶಕಗಳ ಸಾಧನೆ ಅನುಪಮ. ಸಂಸ್ಥೆ, ಕೇವಲ ಯಾಂತ್ರಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ, ಹೊಸತನ್ನು ಸಾಧಿಸುವ ತುಡಿತ- ಇಡುತ್ತಿರುವ ಪ್ರಗತಿಪರ ಹೆಜ್ಜೆಗಳು ವಿಶಿಷ್ಟವಾದುದು. ಒಂದು ನೃತ್ಯ ಸಂಸ್ಥೆ ನೀಡುವ ನೃತ್ಯ ಶಿಕ್ಷಣ, ಕಾರ್ಯಾಗಾರಗಳು, ಬದ್ಧ-ಸಮರ್ಥ ತರಬೇತಿ ನೀಡಿ, ಉತ್ತಮ ಕಲಾವಿದರನ್ನು ರೂಪಿಸಿ, ರಂಗದ ಮೇಲೆ ಯಶಸ್ವಿಯಾಗಿ ನೃತ್ಯಾರ್ಪಣೆ-ರಂಗಪ್ರವೇಶ ಮಾಡಿಸುವುದು, ಮುಂತಾದ ಕಾರ್ಯ ಚಟುವಟಿಕೆಗಳೊಂದಿಗೆ, ‘ಸಾಧನ ಸಂಗಮ’ ಹೊಸ ಆಯಾಮದಲ್ಲಿ ಕ್ರಿಯಾತ್ಮಕವಾಗಿ ಮುನ್ನಡೆಯುವ ಗುರಿ ಹಾಕಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ.
ಈ ನಿಟ್ಟಿನಲ್ಲಿ ಕಳೆದ 4 ದಶಕಗಳಿಂದ ವಿ. ಜ್ಯೋತಿ ಪಟ್ಟಾಭಿರಾಮ್ ಅವರ ನೇತೃತ್ವದಲ್ಲಿ ‘ಸಾಧನ ಸಂಗಮ ಟ್ರಸ್ಟ್’ ನೃತ್ಯ ಸಂಸ್ಥೆಯು ನೃತ್ಯ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಹೊಸ ಮೈಲಿಗಲ್ಲುಗಳ ಈವರೆಗಿನ ಸೃಜನಾತ್ಮಕ ಚಟುವಟಿಕೆಗಳು ಗಮನಾರ್ಹ. ಈ ನೃತ್ಯ ಶಾಲೆಯು ವರ್ಷ ಪೂರ್ತಿ ಒಂದಲ್ಲ ಒಂದು ಪ್ರಯೋಗಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತದೆ, ಸದ್ದಿಲ್ಲದೆ ವಿಶಿಷ್ಟವಾಗಿ ಕಾರ್ಯೋನ್ಮುಖವಾಗಿರುತ್ತದೆ. ಅದರಲ್ಲೂ ಸಾಧನ ಸಂಗಮದ ಅನ್ವೇಷಕ ವಿನೂತನ ಯೋಜನೆಗಳು, ರಚನಾತ್ಮಕ ಕಾರ್ಯಕ್ರಮಗಳು ಉದಯೋನ್ಮುಖರಿಗೆ ಮಾತ್ರವಲ್ಲದೆ ಖ್ಯಾತ ಕಲಾವಿದರಿಗೂ ಮುಕ್ತ ಅವಕಾಶದ ಅನೇಕ ಹೊಸ ಬಗೆಯ ವೇದಿಕೆಗಳನ್ನು ಸೃಷ್ಟಿ ಮಾಡಿಕೊಡುತ್ತಲೇ ಬಂದಿದೆ. ಅವರದೇ ಆದ ‘ರಂಗೋಪನಿಷತ್’ ನೃತ್ಯದಂಗಳದಲ್ಲಿ ಪ್ರತಿ ತಿಂಗಳು, ವರ್ಷ ಪೂರ್ತಿ, ನಯನ ಮನೋಹರ ನೃತ್ಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ನೃತ್ಯ ವಿದ್ಯಾರ್ಥಿಗಳಿಗೆ ಈ ಮೂಲಕ ಉತ್ತಮ ಪ್ರಾತ್ಯಕ್ಷಿಕೆ, ಶಿಕ್ಷಣವಲ್ಲದೆ, ಕಲಾರಸಿಕರಿಗೆ ಕಣ್ಮನ ತುಂಬುವ ರಸಾನುಭವ. ನೃತ್ಯಶಾಲೆಯ ವಾರ್ಷಿಕೋತ್ಸವದ ಹಬ್ಬ ಸತತವಾಗಿ 39 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
ದಿನಾಂಕ 20 ಜುಲೈ 2025 ಭಾನುವಾರ ಸಂಜೆ 5-00 ಗಂಟೆಗೆ ವಿಜಯನಗರದ ಕಾಸಿಯಾ ಆಡಿಟೋರಿಯಂನಲ್ಲಿ ‘ನೃತ್ಯ ಸಮಾಗಮ- 2025’ ಶೀರ್ಷಿಕೆಯಲ್ಲಿ ಸಾಧನ ಸಂಗಮ ಡ್ಯಾನ್ಸ್ ಸೆಂಟರಿನ 39ನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ವೈವಿಧ್ಯಪೂರ್ಣ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭರತನಾಟ್ಯ-ಕಥಕ್ ನೃತ್ಯ ಕಲಾವಿದೆ ಮತ್ತು ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ ಹಾಗೂ ಸೆಂಟರ್ ಫರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ ಚಾಣಕ್ಯ ಯೂನಿವರ್ಸಿಟಿ ನಿರ್ದೇಶಕರಾದ ಡಾ. ವಿನಯಚಂದ್ರ ಬನಾವತಿ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ಶ್ರೀಮತಿ ಶುಭಾ ಇವರಿಗೆ ಸಂಸ್ಥೆಯ ಮೌಲಿಕ ‘ಕಲಾತ್ಮಿಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು.
ಮನರಂಜನಾತ್ಮಕ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ಜ್ಯೋತಿ ಪಟ್ಟಾಭಿರಾಮ್ ಪರಿಕಲ್ಪನೆ-ನೃತ್ಯ ಸಂಯೋಜನೆಯ ‘ಗುರುಕುಲದಲ್ಲಿ ಶ್ರೀಕೃಷ್ಣ’ ಎಂಬ ನೃತ್ಯರೂಪಕವು ಡಾ. ಸಾಧನಶ್ರೀ ಪಿ. ಇವರ ಕಲಾ ನಿರ್ದೇಶನದಲ್ಲಿ ‘ನೃತ್ಯ ನಿಪುಣ’ ತಂಡದಿಂದ ಸಾದರಗೊಳ್ಳಲಿದೆ. ಜೊತೆಗೆ ಸಾಧನ ಸಂಗಮ ಡ್ಯಾನ್ಸ್ ಸೆಂಟರಿನ ವಿದ್ಯಾರ್ಥಿನಿಯರಿಂದ ಭರತನಾಟ್ಯದ ವೈವಿಧ್ಯಪೂರ್ಣ ನೃತ್ಯ ಕಾರ್ಯಕ್ರಮಗಳ ಪ್ರದರ್ಶನವಿದೆ. ಈ ನೃತ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.