ಕುಂದಾಪುರ : ಮಗುವಿನ ನಾಮಕರಣದ ಪ್ರಯುಕ್ತ ಕುಂದಾಪುರ ತಾಲೂಕಿನ ಹಾಲಾಡಿಯ ಜಿ. ಶಂಕರ್ ಶಾಲಿನಿ ಸಭಾಂಗಣದಲ್ಲಿ ದಿನಾಂಕ 16 ಜುಲೈ 2025ರಂದು ಯಕ್ಷಗಾನ ಗಾನವೈಭವ ಕಾರ್ಯಕ್ರಮ ಆಯೋಜಿಸಿದ್ದರು. ಪ್ರಸಿದ್ಧ ಕಾಷ್ಠಶಿಲ್ಪಿ ನರಸಿಂಹ ಆಚಾರ್ಯರು ತಮ್ಮ ಪುಟ್ಟ ಮೊಮ್ಮಗಳ ನಾಮಕರಣಕ್ಕಾಗಿ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸಾರಥ್ಯದಲ್ಲಿ ಗಾನವೈಭವ ಸಂಯೋಜಿಸಿದ್ದರು. ಯಕ್ಷಗಾನಲೋಕದ ಕುಚ್ಚಿಕೂ ಗೆಳೆಯರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಪ್ರಸಾದ್ ಕುಮಾರ್ ಮೊಗೆಬೆಟ್ಟು ಭಾಗವತಿಕೆಯಲ್ಲಿದ್ದರೆ, ಮದ್ದಳೆಯಲ್ಲಿ ಶಶಾಂಕ ಆಚಾರ್ಯ, ಚಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಸಹಕರಿಸಿದ್ದರು. ಯುವ ಅರ್ಥಧಾರಿ, ಕಲಾವಿದ ಸುನಿಲ್ ಹೊಲಾಡು ನಿರೂಪಣೆಯಲ್ಲಿದ್ದರು.
ಗಣಪತಿ ಸ್ತುತಿಯೊಂದಿಗೆ ಆರಂಭವಾದ ಗಾನವೈಭವದಲ್ಲಿ ಪೌರಾಣಿಕ ಹಾಗೂ ನೂತನ ಪ್ರಸಂಗಗಳ ಪದ್ಯಗಳು ಉಭಯಭಾಗವತರ ಕಂಠದಲ್ಲಿ ಕರ್ಣಾನಂದಕರವಾಗಿ ಮೊಳಗಿದವು. ಗಾನಕ್ಕೆ ತಕ್ಕಂತೆ ವಾದನಾ ಸಹಕಾರವಿತ್ತು. ಹೊಲಾಡು ಅವರ ನಿರೂಪಣೆಯೂ ಹೃದ್ಯವೆನಿಸಿತ್ತು. ಮಗುವಿನ ಹೆಸರು ಸೂಚಿಸುವ ಮುಹೂರ್ತ ಒದಗಿದಾಗ ಮೊಗೆಬೆಟ್ಟು ಅವರು ತಕ್ಷಣವೇ ಒಂದು ಗೀತೆ ಬರೆದು ಗೆಳೆಯ ಜನ್ಸಾಲೆಯವರ ಕೈಗಿತ್ತರು. ಜನ್ಸಾಲೆ ಭಾಗವತರು ಹಾಡಿಯೇ ಬಿಟ್ಟರು. ಆ ಹಾಡಿನಲ್ಲಿ ಮಗುವಿನ ಹೆಸರಿತ್ತು! ಹಾಡು ಕೇಳಿಯೇ ಆ ಮಗುವಿನ ಹೆಸರು ‘ಭ್ರಮರಿ’ ಎಂದು ಎಲ್ಲರಿಗೂ ಅರಿವಾಯಿತು. ಹೀಗೆ ಯಕ್ಷಗಾನ ಗಾನವೈಭವ ಅರ್ಥಪೂರ್ಣವಾಗಿ ನಡೆಯಿತು.