ಬಂಟ್ವಾಳ : ತೆಂಕುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ದಿನಾಂಕ 20 ಜುಲೈ 2025ರಂದು ವಿಧಿವಶರಾಗಿದ್ದಾರೆ. ರಾತ್ರಿಯನ್ನು ಬೆಳಕಾಗಿಸುವ, ಕತ್ತಲಲ್ಲಿ ಸುತ್ತಲ ಲೋಕವನ್ನು ಮಾಯಾ ಲೋಕವನ್ನಾಗಿಸುವ, ಯಕ್ಷಗಾನವೆಂಬ ಅದ್ಭುತ ಕಲೆಯಲ್ಲಿ ಮಿನುಗುವ ನಕ್ಷತ್ರವಾಗಿ ಜ್ವಲಿಸುವ ಪುಂಜವಾಗಿದ್ದವರು. ಜ್ಯೋತಿ ತಾನು ಉರಿದು ಜಗಕೆಲ್ಲ ಬೆಳಕು ನೀಡಿದಂತೆ ಯಕ್ಷಲೋಕದ ಕಲಾ ಪಯಣದಲ್ಲಿ ಅದೆಷ್ಟೋ ಕಷ್ಟಗಳನ್ನು ಪಟ್ಟರೂ, ಇಷ್ಟ ಪಟ್ಟು ಈ ಕ್ಷೇತ್ರದಲ್ಲಿ ಮುಂದುವರಿದು ರಂಗದಲ್ಲಿ ಒಂದಿನಿತೂ ನೋವು ತೋರಿಸದವರು. ಪ್ರೇಕ್ಷಕರ ನಿರೀಕ್ಷೆಗೆ ಎಂದೂ ಅನ್ಯಾಯ ಮಾಡದವರು. ಬಣ್ಣದ ವೇಷದ ಪರಂಪರೆಯ ನಡೆ ಹಾಗೂ ಕ್ರಮಗಳನ್ನು ಅರಿತ ಕೆಲವೇ ಮಂದಿಯ ಪೈಕಿ ಅಗ್ರಣಿಯಾಗಿ ತೆಂಕುತಿಟ್ಟಿನ ಇತಿಹಾಸದಲ್ಲಿ ಛಾಪು ಮೂಡಿಸಿದ್ದರು.
ಯಕ್ಷಗಾನ ರಂಗದ ಪ್ರಸಿದ್ಧ ಬಣ್ಣದ ವೇಷಧಾರಿಯಾಗಿ ಗುರುತಿಸಿಕೊಂಡಿರುವ ಶೆಟ್ಟಿಗಾರರ ಸಾಧನೆ ಹಾಗೂ ಪರಿಶ್ರಮ ಅಮೋಘ. ಸಿದ್ಧಕಟ್ಟೆಯಲ್ಲಿ 17-12-1965ರಲ್ಲಿ ಬಾಬು ಶೆಟ್ಟಿಗಾರ್ ಮತ್ತು ಗಿರಿಯಮ್ಮ ದಂಪತಿಗೆ ಪುತ್ರರಾಗಿ ಜನಿಸಿ, ಪ್ರಾಥಮಿಕ ಶಿಕ್ಷಣ ಸಂದರ್ಭದಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿ 18ರ ಪ್ರಾಯದಲ್ಲಿ ಕಲಾಸೇವೆ ಪ್ರಾರಂಭಿಸಿದರು. ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್‌ರಿಂದ ಹೆಜ್ಜೆಗಾರಿಕೆ ಅಭ್ಯಸಿಸಿ, ಮಹಾನ್ ಕಲಾವಿದ ದಿ. ಬಣ್ಣದ ಮಹಾಲಿಂಗರಿಂದ ಬಣ್ಣದ ವೇಷದ ಕಲೆಯನ್ನು ಕರಗತ ಮಾಡಿಕೊಂಡು ಯಕ್ಷ ಕ್ಷೇತ್ರದಲ್ಲಿ ಮುಂದುವರಿದರು. ಶ್ರೀ ಕಟೀಲು ಮೇಳದಲ್ಲಿ ಯಕ್ಷಯಾತ್ರೆ ಆರಂಭಿಸಿ 10 ವರ್ಷದ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ 13 ವರ್ಷ, ಹೊಸನಗರ 19 ವರ್ಷ, ಎಡನೀರು 1 ವರ್ಷ, ಕಳೆದ 8 ವರ್ಷಗಳಿಂದ ಶ್ರೀ ಹನುಮಗಿರಿ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಒಟ್ಟು 42 ವಸಂತಗಳ ತಿರುಗಾಟ ಪೂರೈಸಿರುವುದು ಕಲಾಲೋಕಕ್ಕೆ ಕೊಡುಗೆ ನೀಡಿ ಈ ತಿರುಗಾಟದಿಂದ ಮೇಳಕ್ಕೆ ಅಧಿಕೃತ ನಿವೃತ್ತಿ ಘೋಷಿಸಿದ್ದರು.
ರಾವಣ, ಕುಂಭಕರ್ಣ, ಮಹಿಷಾಸುರ, ವರಾಹ, ಸಿಂಹ, ಗಜೇಂದ್ರ ಮುಂತಾದ ಬಣ್ಣದ ವೇಷಗಳು, ಶೂರ್ಪನಖಿ, ಅಜಮುಖ, ಪೂತನಿ, ಪ್ರತ್ರಜ್ವಾಲೆ ಮುಂತಾದ ಹೆಣ್ಣು ಬಣ್ಣ ಪಾತ್ರಗಳಿಗೆ ಜೀವ ತುಂಬಿದ್ದರು. ಶ್ರೀರಾಮ ಕಾರುಣ್ಯ ಪ್ರಸಂಗದ ಕಾಕಾಸುರನ ಪಾತ್ರ ಅವರ ಕಲ್ಪನೆಯ ಕೂಸು. ಅವರ ಯಕ್ಷರಂಗದ ಸಿದ್ದಿ ಪ್ರಸಿದ್ದಿಯನ್ನು ಪುರಸ್ಕರಿಸಿ ಅನೇಕ ಪ್ರಶಸ್ತಿಗಳು ಅರಸಿ ಬಂದಿದೆ. ವಿದೇಶದಲ್ಲೂ ಬಣ್ಣದ ವೇಷದ ಘನಸ್ತಿಕೆಯನ್ನು ಪ್ರದರ್ಶಿಸಿದ ವೇಷಧಾರಿ ಮಾತ್ರವಲ್ಲದೆ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಅನೇಕ ಕಮ್ಮಟಗಳಿಗೆ ಅಪೂರ್ವ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಅನೇಕ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿದ್ದರು. ಅನೇಕ ವರ್ಷಗಳಿಂದ ಅಸೌಖ್ಯದಲ್ಲಿದ್ದ ಪತ್ನಿಯ ಆರೈಕೆ ಸೇವೆ ಮಾಡಿ ಕಳೆದ ಕೆಲ ಸಮಯದಿಂದ ಸ್ವತಃ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಾ ವೇಷ ಮಾಡುತ್ತಾ ಅನಿವಾರ್ಯವಾಗಿ ದುಡಿಯುತ್ತಾ ಬದುಕು ಸವೆಸಿ ಕಲಾಲೋಕದ ಪಯಣಕ್ಕೆ ಅಂತಿಮ ವಿದಾಯ ಹೇಳಿದ್ದಾರೆ. ಬಣ್ಣದ ವೇಷದ ಗತ್ತು ಮರೆಯಾಗಿದೆ. ರಂಗದಲ್ಲಿ ಮಾತಿನಲ್ಲಿ ಅನುಭವದಲ್ಲಿ ಇದಿರು ಕಲಾವಿದನನ್ನು ಕಟ್ಟಿ ಹಾಕುವ ಗುಣ ಇನ್ನು ಇವರಿಂದ ನಿರೀಕ್ಷಿಸಲಾಗದು. ಬಣ್ಣದ ವೇಷಧಾರಿಗಳಲ್ಲಿ ವಿರಳವಾಗಿರುವ ಮಾತಿನ ವೈಖರಿ ಇವರಿಗೆ ಸಿದ್ಧಿಸಿತ್ತು. ಬಹುತೇಕ ಪೌರಾಣಿಕ ಪ್ರಸಂಗಗಳ ಬಣ್ಣದ ರಂಗನಡೆ ವಿಶಿಷ್ಟವಾಗಿ ತಿಳಿದಿತ್ತು. ಮಾತಿನಲ್ಲಿ ಚಾಟೂಕ್ತಿ, ಹೊಸತನ ಇತ್ತು.