ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ರಂಗಭೂಮಿ (ರಿ.) ಉಡುಪಿ ಇವರುಗಳ ಸಹಕಾರದಲ್ಲಿ ‘ಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 25 ಮತ್ತು 26 ಜುಲೈ 2025ರಂದು ಮಧ್ಯಾಹ್ನ 01-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 25 ಜುಲೈ 2025ರಂದು ಮಧ್ಯಾಹ್ನ 02-00 ಗಂಟೆಗೆ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.) ಇವರಿಂದ ‘ನರಕಾಸುರ ವಧೆ ಮತ್ತು ಗರುಡ ಗರ್ವಭಂಗ’ ಎಂಬ ಪ್ರಸಂಗದ ತೆಂಕುತಿಟ್ಟು ಯಕ್ಷಗಾನ ಗೊಂಬೆಯಾಟ ಪ್ರದರ್ಶನಗೊಳ್ಳಲಿದೆ. ಸಂಜೆ 4-00 ಗಂಟೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಾಹೆ ಸಹ ಕುಲಾಧಿಪತಿಗಳಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಸಂಜೆ 5-15 ಗಂಟೆಗೆ ಜಾನಪದ ಕಲಾ ಪ್ರದರ್ಶನದಲ್ಲಿ ಶಿವಮೊಗ್ಗ ಜಿಲ್ಲೆಯ ಶ್ರೀ ಟಾಕಪ್ಪ ಮತ್ತು ತಂಡದವರಿಂದ ‘ಡೊಳ್ಳು ಕುಣಿತ’ ಮತ್ತು ಬೆಂಗಳೂರಿನ ಶ್ರೀ ಮಹದೇವ ಮೂರ್ತಿ ಮತ್ತು ತಂಡದವರಿಂದ ‘ಕಂಸಾಳೆ ನೃತ್ಯ’ ಪ್ರದರ್ಶನಗೊಳ್ಳಲಿದೆ.
ದಿನಾಂಕ 26 ಜುಲೈ 2025ರಂದು ಸಂಜೆ 4-00 ಗಂಟೆಗೆ ವಿದ್ವಾನ್ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಮತ್ತು ಬಳಗದವರಿಂದ ‘ಸಂಗೀತ ಸುಧೆ’ ಪ್ರಸ್ತುತಗೊಳ್ಳಲಿದೆ. 5-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 6-00 ಗಂಟೆಗೆ ಉಡುಪಿಯ ರಂಗಭೂಮಿ (ರಿ.) ತಂಡದಿಂದ ಪ್ರದೀಪ್ ಚಂದ್ರ ಕುತ್ಪಾಡಿ ಇವರ ನಿರ್ದೇಶನದಲ್ಲಿ ‘ಕಾಲಚಕ್ರ’ ನಾಟಕ ಪ್ರದರ್ಶನಗೊಳ್ಳಲಿದೆ.