ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ಪ್ರಕಾರಗಳಲ್ಲಿ ಪುರಸ್ಕಾರಗಳನ್ನು ನೀಡಲು ಒಟ್ಟು 54 ದತ್ತಿ ಪುರಸ್ಕಾರಗಳಿದ್ದು, ಇವುಗಳಿಗೆ 2024ರ ಜನವರಿ 1ರಿಂದ ಡಿಸಂಬರ್ 31ರೊಳಗೆ ಪ್ರಕಟವಾದ ಪುಸ್ತಕಗಳನ್ನು ಕಳುಹಿಸಲು ಆಹ್ವಾನಿಸಲಾಗಿತ್ತು. ಇದಕ್ಕೆ ಜುಲೈ 20ರಂದು ಕೊನೆಯ ದಿನವಾಗಿತ್ತು. ಆದರೆ ದೇಶ-ವಿದೇಶಗಳಿಂದ ಅನೇಕ ಬರಹಗಾರರು ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿಕೊಂಡಿದ್ದಾರೆ. ಈ ಸಾರ್ವಜನಿಕ ಒತ್ತಾಯವನ್ನು ಪರಿಗಣಿಸಿ ಕೊನೆಯ ದಿನಾಂಕವನ್ನು ಆಗಸ್ಟ್ 20ರ ಬುಧವಾರಕ್ಕೆ ವಿಸ್ತರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.
ಕಾದಂಬರಿ, ಕಥಾ ಸಂಕಲನ, ಅನುವಾದ, ಸಂಶೋಧನೆ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹಗಳು, ವೈದ್ಯಕೀಯ ಸಾಹಿತ್ಯ, ಇತಿಹಾಸ, ಜಾನಪದ, ಮನೋವಿಜ್ಞಾನ, ಸಿನಿಮಾ ಸಾಹಿತ್ಯ, ಕೃಷಿಗೆ ಸಂಬಂಧಿಸಿದ ಕೃತಿಗಳು, ಪ್ರವಾಸ ಸಾಹಿತ್ಯ ಮಹಿಳೆಯರಿಗೆ ಸಂಬಂಧಿಸಿದ ಮಹಿಳೆಯರು ರಚಿಸಿದ ಕೃತಿಗಳು, ನಾಟಕ, ಪ್ರಬಂಧ, ಸಂಪಾದನೆ, ಜೈನ ಸಾಹಿತ್ಯದ ಕುರಿತ ಸಂಶೋಧನೆ ಮೊದಲಾದ ಕ್ಷೇತ್ರಗಳಿಗೆ ರಚಿತವಾದ ಕೃತಿಗಳಿಗೆ ದತ್ತಿ ಪುರಸ್ಕಾರಗಳು ಇರುತ್ತವೆ.
ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕ ಕಳುಹಿಸುವವರು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು, ಪುಸ್ತಕ ಕಳುಹಿಸುವಾಗ ತಮ್ಮ ಸದಸ್ಯತ್ವದ ಸಂಖ್ಯೆಯನ್ನು ನಮೂದಿಸಿರಬೇಕು, ಒಂದೊಮ್ಮೆ ಸದಸ್ಯರಾಗದಿದ್ದಲ್ಲಿ ಕೂಡಲೇ ಸದಸ್ಯತ್ವವನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು. ಪುರಸ್ಕಾರದ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತೀರ್ಪುಗಾರರ ಮಂಡಳಿಯನ್ನು ರಚಿಸಿ ಆಯ್ಕೆಯನ್ನು ಮಾಡುತ್ತದೆ. ಈ ಮಂಡಳಿಯ ತೀರ್ಪು ಅಂತಿಮವಾಗಿರುತ್ತದೆ. ಪ್ರತಿ ಪ್ರವೇಶಕ್ಕೂ ಮೂರು ಪುಸ್ತಕಗಳನ್ನು ‘ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-560 018’ ಇಲ್ಲಿಗೆ ದಿನಾಂಕ 20 ಆಗಸ್ಟ್ 2025ರೊಳಗಾಗಿ ತಲುಪುವಂತೆ ಕಳುಹಿಸಬೇಕು. ಯಾವ ದತ್ತಿ ಪುರಸ್ಕಾರಕ್ಕೆ ಪುಸ್ತಕವನ್ನು ಕಳುಹಿಸಿದ್ದೇವೆ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದಿರಬೇಕು. ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ದತ್ತಿ ಪುರಸ್ಕಾರದ ಸಂಪೂರ್ಣ ವಿವರಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ www.kasapa.in ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆಗಳಾದ 080-26612991/26623548/22423867/26672992 ಗಳನ್ನು ಸಂಪರ್ಕಿಸಬಹುದು.