ಕಾಸರಗೋಡು: ಜಾಗೃತಿ ಟ್ರಸ್ಟ್ ಬೆಂಗಳೂರು ಆಯೋಜಿಸಿದ 2023ನೇ ಸಾಲಿನ ‘ಗಮಕ ಗಾಯನ ಗಾರುಡಿಗ ಪ್ರಶಸ್ತಿ’ ಪುರಸ್ಕಾರ ಸಮಾರಂಭ ಹಾಗೂ ಅಂತರ್ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಸಂಭ್ರಮವು ದಿನಾಂಕ 15-04-2023ರಂದು ಕೇರಳ ರಾಜ್ಯದ ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿ ‘ಕನ್ನಡವನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಇಂದಿನ ಮಕ್ಕಳಿಗೆ ಕನ್ನಡ ಅಭಿಮಾನ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳ ಬಗ್ಗೆ ತಿಳುವಳಿಕೆ ನೀಡುವ ಇಂತಹ ಕಾರ್ಯಕ್ರಮಗಳು ಆಗಾಗ ನಡೆಯಬೇಕಾಗಿದೆ’ ಎಂದು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಡಿನಾಡ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಡಾಕ್ಟರ್ ವಾಣಿಶ್ರೀ ವಹಿಸಿ “ಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ” ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಸಾಹಿತ್ಯ ಶಿಕ್ಷಕರ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಬಿ. ಶಿವಕುಮಾರ್ ಮಾತನಾಡಿ “ಕನ್ನಡ ಸಂಘಟನೆಗೆ ಎಲ್ಲರೂ ಪ್ರೋತ್ಸಾಹಿಸಬೇಕು. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಕವಿ ಮನಸ್ಸುಗಳಿಗೆ ವೇದಿಕೆಗಳನ್ನು ಕಲ್ಪಿಸಿಕೊಡಬೇಕು. ಸಮಾಜ ತಿದ್ದಿ ತೀಡುವಂತಹ ಸಾಹಿತ್ಯಗಳು ಹೊರ ಬರಬೇಕಾಗಿವೆ” ಎಂದರು. ಜಾಗೃತಿ ಟ್ರಸ್ಟ್ ಅಧ್ಯಕ್ಷರಾದ ನಾಗೇಶ್ “ಸಮರಕ್ಕೂ ಸಿದ್ಧ ಸ್ನೇಹಕ್ಕೂ ಬದ್ಧ ಎಂಬ ಮಾತಿನಂತೆ ಕನ್ನಡದ ಸಂಘಟನೆಗಳನ್ನು, ಕನ್ನಡವನ್ನು ಪ್ರೀತಿಸುವ ಮನಸ್ಸುಗಳನ್ನು ಈ ವೇದಿಕೆ ಯಾವಾಗಲೂ ಸ್ವಾಗತಿಸುತ್ತದೆ. ಈ ಕಾರ್ಯಕ್ರಮಗಳಲ್ಲಿ ಸರ್ವರೂ ಭಾಗವಹಿಸಿ ಸಾಹಿತ್ಯ ಸತ್ವವನ್ನು ಸವಿಯಬಹುದು” ಎಂದು ತಿಳಿಸಿದರು.
ಮುಂದೆ ನಡೆದ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರು ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ಕಲಾವಿದರಾದ ವಿದ್ವಾನ್ ಡಾ. ಎಂ. ಖಾಸೀಮ್, ಮಲ್ಲಿಗೆ ಮುಡುಪು ಇವರಿಗೆ ‘ಗಮಕ ಗಾಯನ ಗಾರುಡಿಗ ಪ್ರಶಸ್ತಿ’, ವೆಂಕಟ ಭಟ್ ಎಡನೀರು ಇವರಿಗೆ ‘ಕುಂಚ ಚಿತ್ರ ಬ್ರಹ್ಮ ಪ್ರಶಸ್ತಿ’, ಡಾ. ವಾಣಿಶ್ರೀ ಕಾಸರಗೋಡು ಮತ್ತು ಶಾಂತ ಪುತ್ತೂರು ಇವರ ಬಹುಮುಖ ಪ್ರತಿಭೆಗೆ ‘ಡಾ. ರಾಜ್ ಕುಮಾರ್ ಪ್ರಶಸ್ತಿ’, ನೃತ್ಯಪಟು ಮನೀಷ್ ಕುಲಾಲರಿಗೆ ‘ಪುನೀತ್ ರಾಜ್ ಕುಮಾರ್ ಪ್ರಶಸ್ತಿ’, ಸಮಾಜ ಸೇವಕರಾದ ಪುಂಡಲೀಕ ಮೊಗವೀರ ಇವರಿಗೆ ‘ಪುನೀತ್ ರಾಜ್ ಕುಮಾರ್ ಸಮಾಜ ಸೇವಾ ಪ್ರಶಸ್ತಿ’ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಈಗಾಗಲೇ 4 ಕವನ ಸಂಕಲನಗಳನ್ನು ರಚನೆ ಮಾಡಿ ಲೋಕಾರ್ಪಣೆ ಮಾಡಿದ ಶ್ರೀ ತ್ಯಾಗರಾಜ್ ಮೈಸೂರು ಮತ್ತು ಸಮಾಜಸೇವಕರಾದ ಡಾಕ್ಟರ್ ಭಾಗೀರಥಿ ಜ್ಯೋತಿ ರೆಡ್ಡಿ, ಸಮಾಜಸೇವಕ ನಾಗರಾಜ್, ಯೋಗ ಶಿಕ್ಷಕರಾದ ನಾಗರತ್ನ, ಕಾರ್ತಿಕ್ ಮತ್ತು ಮಹೀಂದ್ರ ಮನೋತ ಉಪಸ್ಥಿತರಿದ್ದರು. ಪುಟ್ಟ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಹಿತ್ಯ ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ ನಡೆಯಿತು.
ಕವಿಗೋಷ್ಟಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಪತ್ರಕರ್ತ, ಸಂಘಟಕ ಡಾ. ಶೇಖರ ಅಜೆಕಾರು ಮಾತನಾಡುತ್ತಾ “ಕವಿಯಾದವನು ಸಾಹಿತ್ಯವನ್ನು ಆಲಿಸಬೇಕು. ಕವನಗಳು ಬದುಕಿನ ಮಾತುಗಳಾಗಿವೆ. ಆದ್ದರಿಂದ ಅವುಗಳಲ್ಲಿನ ವಿಚಾರಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಇವುಗಳೇ ಮಾನವರ ಸಾಮಾಜಿಕ ಬದುಕಿಗೆ ದಾರಿದೀಪ. ಕವಿಗೋಷ್ಟಿಯೂ ಸೇರಿದಂತೆ ಕನ್ನಡ ಸಾಹಿತ್ಯದ ಚಟುವಟಿಕೆಯಲ್ಲಿ ಹೊಸ ಸಾಹಿತಿಗಳಿಗೆ ಆವಕಾಶ ನೀಡಬೇಕು. ಇದರಿಂದ ಕನ್ನಡ ಭಾಷೆ ಬೆಳೆಯುತ್ತದೆ ಹಾಗೂ ಯುವ ಜನಾಂಗಕ್ಕೆ ಕನ್ನಡ ಭಾಷೆಯ ಬಗ್ಗೆ ಆಸಕ್ತಿಯ ಜೊತೆಗೆ ಪ್ರೀತಿ ಮೂಡುತ್ತದೆ” ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಪ್ರಣತಿ ಎನ್.ಪುದುಕೋಳಿ, ಪ್ರಸ್ತುತಿ ಪಿ.ನೀರ್ಚಾಲು, ಪ್ರಣಮ್ಯ ಎನ್. ಪುದುಕೋಳಿ, ಪುಂಡೂರು ಪ್ರಭಾವತಿ ಕೆದಿಲಾಯ, ನಾರಾಯಣ ನಾಯ್ಕ ಕುದುಕ್ಕೋಳಿ, ಕಕ್ಕೆಪ್ಪಾಡಿ ಶಂಕರ ನಾರಾಯಣ ಭಟ್, ವಿರಾಜ್ ಅಡೂರು, ಜಯಾನಂದ ಪೆರಾಜೆ, ಆದ್ಯಂತ್ ಅಡೂರು, ಶಾಂತ ಪುತ್ತೂರು, ವೆಂಕಟ್ ಭಟ್ ಎಡನೀರು, ಗುರುರಾಜ್ ಕಾಸರಗೋಡು, ಡಾ.ವಾಣಿಶ್ರೀ ಕಾಸರಗೋಡು, ಸೌಮ್ಯಾ ಜಿ. ಮುಂತಾದವರು ಭಾಗವಹಿಸಿದ್ಡರು. ಪಾಲ್ಗೊಂಡ ಎಲ್ಲಾ ಕವಿಗಳಿಗೂ ಜಾಗೃತಿ ಟ್ರಸ್ಟ್ ಸೇವಾ ಸಂಸ್ಥೆ ವತಿಯಿಂದ ಸ್ಮರಣಿಕೆ ನೀಡಿ, ಗೌರವಿಸಲಾಯಿತು.